ಶಶಿಧರ ದಿಂಡೂರ್‌ಗೆ ಸನ್ಮಾನ
ಗದಗ: ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಗದಗ ಜಿಲ್ಲಾ ಯುವ ಘಟಕದ ಅಧ್ಯಕ್ಷರಾಗಿ ನೇಮಕಗೊಂಡಿದ್ದ ಪಟ್ಟಣದ ಎಬಿಸಿ ಮಾಂಟೇಸ್ಸರಿ ಪೂರ್ವ ಪ್ರಾಥಮಿಕ ಶಾಲೆಯ ಚೇರಮನ್ ಶಶಿಧರ ದಿಂಡೂರ ಅವರಿಗೆ ಈಚೆಗೆ ಹುಬ್ಬಳ್ಳಿಯಲ್ಲಿ ಜರುಗಿದ ವೀರರಾಣಿ ಕಿತ್ತೂರು ಚನ್ನಮ್ಮ ವಿಜಯೋತ್ಸವ ಸಮಾರಂಭದಲ್ಲಿ ಕೂಡಲ ಸಂಗಮ ಪಂಚಮಸಾಲಿ ಪೀಠದ ಮೃತ್ಯುಂಜಯ ಶ್ರೀಗಳು ನೇಮಕ ಪತ್ರ ನೀಡಿ ಸನ್ಮಾನಿಸಿದರು. ಈ ಸಂದರ್ಭ ರಾಷ್ಟ್ರೀಯ ಅಧ್ಯಕ್ಷ ಪ್ರಭಣ್ಣ ಹುನಸಿಕಟ್ಟಿ, ಪ್ರಧಾನ ಕಾರ್ಯದರ್ಶಿ ನೀಲಕಂಠ ಅಸೂಟಿ, ಶಿವಣ್ಣ ಬೆಲ್ಲದ, ರಾಜ್ಯ ಯುವ ಘಟಕದ ಅಧ್ಯಕ್ಷ ರಾಜಶೇಖರ ಮೆಣಸಿನಕಾಯಿ, ಸಂಚಾಲಕ ಎಂ.ಎಸ್. ಮಲ್ಲಾಪುರ, ಗದಗ ಜಿಲ್ಲಾ ಅಧ್ಯಕ್ಷ ಎಂ. ಬಸಪ್ಪ, ಕಾರ್ಯದರ್ಶಿ ಎಂ.ಎಚ್. ಚಿನ್ನೂರ, ಎಸ್.ಎಂ. ಜಿಗಳೂರ, ನಿಂಗಪ್ಪ ಹುಗ್ಗಿ, ಎಸ್.ಎಸ್. ಸಂಕಣ್ಣವರ, ಎಸ್.ಬಿ. ಪಲ್ಲೇದ, ಎಂ.ಎಸ್. ಪಾಟೀಲ ಇತರರಿದ್ದರು.
ಕ್ರೀಡೆಯಲ್ಲಿ ತೃತೀಯ
ಗದಗ: ಈಚೆಗೆ ಧಾರವಾಡದಲ್ಲಿ ನಡೆದ 63ನೇ ಕರ್ನಾಟಕ ವಿಶ್ವವಿದ್ಯಾಲಯದ ಅಂತರ್ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಗದುಗಿನ ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿ ವೀರಣ್ಣ ಗುಳೇದ 20 ಕಿ.ಮೀ. ನಡಿಗೆ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.
ಸೈಕಲ್ ವಿತರಣೆ
ಗದಗ: ತಾಲೂಕಿನ ಕದಡಿ ಸರ್ಕಾರಿ ಪ್ರೌಢಶಾಲೆಯಲ್ಲಿ 2013-14ನೇ ಸಾಲಿನ 8ನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಲಾಯಿತು. ಗ್ರಾಪಂ ಅಧ್ಯಕ್ಷೆ ಲಕ್ಮವ್ವ ಶಂಕ್ರಿ ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಎಂಸಿ ಅಧ್ಯಕ್ಷ ಚಂದ್ರಶೇಖರ ಮುಕ್ಕಣ್ಣವರ, ಉಪಾಧ್ಯಕ್ಷೆ ಸುಮಿತ್ರಾ ಈಟಿ, ಸದಸ್ಯೆ ನಿರ್ಮಲಾ ಶಿರೂರ ಇದ್ದರು.
ವೀರಯ್ಯ ನಿಧನ
ಮುಳಗುಂದ: ಪಟ್ಟಣದ ಪುರದ ಓಣಿಯ ನಿವಾಸಿ, ನಿವೃತ್ತ ಮುಖ್ಯೋಪಾಧ್ಯಾಯ ವೀರಯ್ಯ ಮರಿದೇವರಮಠ(72) ಶನಿವಾರ ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂದು-ಬಳಗವನ್ನು ಅಗಲಿದ್ದಾರೆ.
ಸಂತಾಪ: ವೀರಯ್ಯ ಮರಿದೇವರಮಠ ನಿಧನಕ್ಕೆ ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಶ್ರೀಗಳು, ಹುಬ್ಬಳ್ಳಿ ಕೆಎಸ್‌ಆರ್‌ಟಿಸಿ ವಿಭಾಗದ ಅಧಿಕಾರಿಗಳು, ಸಿಬ್ಬಂದಿ, ಶಾಲೆ, ಕಾಲೇಜು ಶಿಕ್ಷಕರು ಸಂತಾಪ ಸೂಚಿಸಿದ್ದಾರೆ.