ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಶುದ್ಧ ಘಟಕವಿದ್ದರೂ ಅಶುದ್ಧ ನೀರೇ ಗತಿ..!

Lingaraj Badiger
Updated On : 17 Dec 2013, 12:07 pm

ಕನ್ನಡಪ್ರಭ ವಾರ್ತೆ, ನರಗುಂದ, ಡಿ. 16
ಜನತೆಗೆ ಶುದ್ಧ ನೀರು ಪೂರೈಸುವ ಹಿತದೃಷ್ಟಿಯಿಂದ ಪಟ್ಟಣದ ಹೊಸಕೇರಿ ಬಡಾವಣೆಯಲ್ಲಿ ಸ್ಥಾಪನೆಯಾಗಿರುವ ಶುದ್ಧ ನೀರಿನ ಘಟಕವನ್ನು ಕಾರ್ಯಾರಂಭ ಮಾಡುವ ನಿಟ್ಟಿನಲ್ಲಿ ಪುರಸಭೆಯ ಅಧಿಕಾರಿಗಳಾಗಲಿ, ಚುನಾಯಿತ ಪ್ರತಿನಿಧಿಗಳಾಗಲಿ, ಗಮನ ನೀಡದೇ ಇರುವುದರಿಂದ ಲಕ್ಷಾಂತರ ಹಣ ಖರ್ಚು ಮಾಡಿ ನಿರ್ಮಿಸಿರುವ ಘಟಕವು ಕಾರ್ಯಾರಂಭವಾಗದೇ ಇರುವುದು ಇಲ್ಲಿನ ಜನರಲ್ಲಿ ಬೇಸರ ಮೂಡಿಸಿದೆ.
ಶುದ್ಧ ಕುಡಿಯುವ ನೀರು ಕುಡಿಯಬೇಕೆನ್ನುವ ಜನರ ಆಸೆ ಮಾತ್ರ ಈಡೇರುತ್ತಿಲ್ಲ. ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಯಾಗಿದ್ದರೂ ಜನತೆಗೆ ಮಾತ್ರ ಇದರ ಪ್ರಯೋಜನ ದೊರೆಯುತ್ತಿಲ್ಲ. ಇದು ನರಗುಂದ ಪುರಸಭೆ ಅಧಿಕಾರಿಗಳ ಕಾರ್ಯ ವೈಖರಿಗೆ ಹಿಡಿದ ಕನ್ನಡಿಯಾಗಿದೆ.
ಆಡಳಿತದ ನಿರ್ಲಕ್ಷ್ಯ: ಈ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿ, 10 ತಿಂಗಳು ಕಳೆಯುತ್ತ ಬಂದಿದೆ. ಈ ಹಿಂದೆ ಶಾಸಕರಾಗಿದ್ದ ಸಿ.ಸಿ. ಪಾಟೀಲ ಪಟ್ಟಣ ಜನತೆಗೆ ಶುದ್ಧ ನೀರು ಪೂರೈಕೆ ಮಾಡಬೇಕು ಎನ್ನುವ ಉದ್ದೇಶದಿಂದ ಪುರಸಭೆಯಿಂದ ಪಟ್ಟಣದ ನಾಲ್ಕು ಭಾಗಗಳಲ್ಲಿ ಶುದ್ಧ ನೀರಿನ ಘಟಕಗಳನ್ನು ಪ್ರಾರಂಭಿಸಿದರು. ಅದರಲ್ಲಿ ಕೇವಲ ಮೂರೇ ಘಟಕಗಳು ಪ್ರಾರಂಭವಾಗಿದ್ದು, ಹೊಸಕೇರಿ ಓಣಿಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಮಾತ್ರ ಇಂದಿಗೂ ಕಾರ್ಯಾರಂಭ ಮಾಡಿಲ್ಲ. ಈ ಬಗ್ಗೆ ಯಾಕೆ ನಿರ್ಲಕ್ಷ್ಯ ವಹಿಸಿದ್ದಾರೆ ಎನ್ನುವುದನ್ನು ಅಧಿಕಾರಿಗಳು, ಪುರಸಭೆಯ ಆಡಳಿತ ಮಂಡಳಿಯೇ ಉತ್ತರಸಬೇಕಿದೆ.
ಲಕ್ಷಾಂತರ ಹಣ ಖರ್ಚು: ಸಾರ್ವಜನಿಕರಿಗೆ ಶುದ್ಧ ನೀರು ಪೂರೈಸಲು ಲಕ್ಷಾಂತರ ಹಣ ಖರ್ಚು ಮಾಡಿ ಘಟಕಗಳನ್ನು ಸ್ಥಾಪಿಸಲಾಗಿದೆ. ಅದಕ್ಕೆ ಬೇಕಾಗುವ ಯಂತ್ರೋಪಕರಣಗಳನ್ನು ಅಲ್ಲಿ ಅಳವಡಿಸಲಾಗಿದೆ. ಆದರೆ, ಅದ್ಯಾವ ಕಾರಣಕ್ಕೆ ಈ ಘಟಕವನ್ನು ಪ್ರಾರಂಭಿಸದೇ ಹಾಗೆಯೇ ನಿಲ್ಲಿಸಿದ್ದಾರೋ ತಿಳಿಯುತ್ತಿಲ್ಲ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಲಕ್ಷಾಂತರ ಬೆಲೆ ಬಾಳುವ ಯಂತ್ರಗಳು ತುಕ್ಕು ಹಿಡಿಯುತ್ತಿದ್ದು, ಒಂದೆಡೆ ಸರ್ಕಾರದ (ಸಾರ್ವಜನಿಕರ) ಹಣ ಪೋಲಾಗುತ್ತಿದೆ. ಇನ್ನೊಂದೆಡೆ ಸಾರ್ವಜನಿಕರು ಅಶುದ್ಧ ಕುಡಿಯುವ ನೀರನ್ನೇ ಬಳಸುವಂತಹ ಸ್ಥಿತಿ ಈ ಬಡಾವಣೆಯಲ್ಲಿ ನಿರ್ಮಾಣವಾಗಿದೆ.

ಅಗತ್ಯ ಕ್ರಮ ತೆಗೆದುಕೊಳ್ಳಲಿ
ಅಧಿಕಾರಿಗಳು ಇಂತಹ ಸಮಸ್ಯೆಗಳ ಬಗ್ಗೆ ಕೇಳಿದಾಗ ಹತ್ತಾರು ರೀತಿಯ ಸಮಜಾಯಿಷಿ ಉತ್ತರಗಳನ್ನು ನೀಡುತ್ತಾರೆ. ಅದು ಅವರಿಗೆ ರೂಢಿಯಾಗಿರುವ ಸಂಗತಿ. ಆದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾರ್ವಜನಿಕರಿಗೆ ಕುಡಿಯುವ ನೀರಿನ ವಿಷಯದಲ್ಲಿ ಸಾಕಷ್ಟು ಆದ್ಯತೆ ನೀಡುತ್ತಿವೆ. ಆದರೆ ಸ್ಥಳೀಯ ಅಧಿಕಾರಿಗಳು ಚುನಾಯಿತ ಪ್ರತಿನಿಧಿಗಳು ಈ ಬಗ್ಗೆ ಗಮನ ನೀಡುತ್ತಿಲ್ಲ. ಇನ್ನಾದರೂ ಈ ಕುರಿತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಿ. ಜನತೆಗೆ ಶುದ್ಧ ನೀರು ಪೂರೈಕೆ ಮಾಡಲಿ ಎನ್ನುವುದು ಈ ಭಾಗದ ಜನತೆಯ ಒತ್ತಾಸೆಯಾಗಿದೆ.
-ಎಸ್.ಜಿ. ತೆಗ್ಗಿನಮನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement