ಖಾತ್ರಿ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಆದ್ಯತೆ
ಕನ್ನಡಪ್ರಭ ವಾರ್ತೆ, ಗದಗ, ಡಿ. 17
ಗ್ರಾಮೀಣ ಭಾಗದ ಜನರ ಬದುಕಿನಲ್ಲಿ ಬದಲಾವಣೆ, ಬಡತನ ಹಾಗೂ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಸರ್ಕಾರ ಮಹತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗಖಾತ್ರಿ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಗದಗ ತಾಲೂಕು ಪಂಚಾಯಿತಿ ಪ್ರಾಮುಖ್ಯತೆ ನೀಡಿದೆ ಎಂದು ಗದಗ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಿ. ರೇವಣ್ಣ ಹೇಳಿದರು.
ಅವರು ಮಂಗಳವಾರ ನಗರದ ತಾಪಂ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ತಾಲೂಕಿನ ವಿವಿಧ ಕಾಮಗಾರಿಗಳಿಗಾಗಿ 2013-14ನೇ ಸಾಲಿಗೆ ರು. 12 ಕೋಟಿ 39 ಲಕ್ಷ 40 ಸಾವಿರದ ಕ್ರಿಯಾಯೋಜನೆಗೆ ಅನುಮೋದನೆ ದೊರಕಿದ್ದು, ಎನ್ಆರ್ಇಜಿಎ ವೈಯಕ್ತಿಕ ಫಲಾನುಭವಿಗಳಿಗಾಗಿ ರು. 23 ಕೋಟಿ 98 ಲಕ್ಷ 57 ಸಾವಿರ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲಾಗಿದೆ. ಪ್ರತಿ ವ್ಯಕ್ತಿಗೂ 100 ದಿನಗಳ ಉದ್ಯೋಗ ಕಲ್ಪಿಸುವ ಸರ್ಕಾರದ ಮಹತ್ತರ ಯೋಜನೆಯಲ್ಲಿ ಪ್ರತಿದಿನಕ್ಕೆ ರು. 174 ಕೂಲಿ ನಿಗದಿಗೊಳಿಸಲಾಗಿದ್ದು, ಈ ಕಾರ್ಯಕ್ಕೆ ಯಾವುದೇ ರೀತಿಯ ಆರ್ಥಿಕ ಕೊರತೆ ಇರುವುದಿಲ್ಲ. ಫಲಾನುಭವಿಗಳ ಬ್ಯಾಂಕ್ ಖಾತೆಗೆ ಸಕಾಲದಲ್ಲಿ ಹಣ ಸಂದಾಯವಾಗುವ ಮೂಲಕ ಯೋಜನೆಯಲ್ಲಿ ಪಾರದರ್ಶಕತೆ ಕಾಯ್ದೆಕೊಂಡಿರುವ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅವ್ಯವಹಾರಕ್ಕಾಗಲಿ, ಮಧ್ಯವರ್ತಿಗಳ ಹಾವಳಿಗೆ ಅವಕಾಶವಿರುವುದಿಲ್ಲ.
ಗ್ರಾಮಸ್ಥರಲ್ಲಿ ಈ ಕುರಿತು ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಕಾಯಕ ಸಂಘಗಳನ್ನು ಪ್ರತಿ ಗ್ರಾಮಮಟ್ಟದಲ್ಲಿ ರಚಿಸಲಾಗಿದ್ದು, ಕಾಯಕ ಬಂಧುಗಳ ನೇಮಕಗೊಳಿಸಿ, ಈಗಾಗಲೇ ಇವರಿಗೆ ವಿಶೇಷ ತರಬೇತಿ ಹಾಗೂ ಗುರುತಿನ ಚೀಟಿ ವಿತರಿಸುವ ಕಾರ್ಯ ತಾಪಂ ವತಿಯಿಂದ ಜರುಗಿದೆ. ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಇಲಾಖೆಯ ನಿಯಮಾನುಸಾರವಾಗಿ ಆರ್ಥಿಕ ಮಿತಿಯನ್ನು ನಿಗದಿಗೊಳಿಸಿಲ್ಲ. ಸಣ್ಣ, ಅತಿ ಸಣ್ಣ ರೈತರು, ಇಂದಿರಾಆವಾಸ್ ಫಲಾನುಭವಿಗಳಿಗೆ ರು. 1.50ಲಕ್ಷ ನಿಗದಿಗೊಳಿಸಲಾಗಿದ್ದು, ಈ ಯೋಜನೆಯಡಿ ಫಲಾನುಭವಿಗಳು ತಮ್ಮ ಹೊಲದಲ್ಲಿ ಒಡ್ಡು ನಿರ್ಮಾಣ, ಜಮೀನು ಸಮತಟ್ಟುಗೊಳಿಸುವುದು, ಇಂಗುಗುಂಡಿ, ಕೃಷಿಹೊಂಡ, ತೋಟಗಾರಿಕೆ ಅಥವಾ ಬಾವಿಯನ್ನೂ ತಮ್ಮ ಹೊಲದಲ್ಲಿ ನಿರ್ಮಾಣಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯಿಂದ ಅನುಷ್ಠಾನಗೊಳಿಸಲಾದ ನೂತನ 11 ಯೋಜನೆಗಳನ್ನು ಗದಗ ತಾಲೂಕಿನಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಿ, ಸರ್ಕಾರದ ಯೋಜನೆಯನ್ನು ಶ್ರೀಸಾಮಾನ್ಯನಿಗೆ ತಲುಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಇಲಾಖೆ ನಡೆಸುತ್ತಿದೆ. ಕ್ರೀಡಾಮೈದಾನ, ದನದದೊಡ್ಡಿ ಕುರಿದೊಡ್ಡಿ, ವೈಯಕ್ತಿಕ ಶೌಚಾಲಯ ನಿರ್ಮಾಣ, ರಾಜೀವಗಾಂಧಿ ಚೈತನ್ಯ ಯೋಜನೆ ಮುಂತಾದವುಗಳ ಕುರಿತು ಗ್ರಾಮೀಣ ಭಾಗದ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಡಿಸೆಂಬರ್ ತಿಂಗಳನ್ನು ಎನ್.ಆರ್.ಇ.ಜಿ.ಎ. ಮಾಸಾಚರಣೆ ಆಚರಿಸಲಾಗುತ್ತಿದೆ.
ತಾಲೂಕು ವ್ಯಾಪ್ತಿಯಲ್ಲಿ 8250 ಶೌಚಾಲಯಗಳ ನಿರ್ಮಾಣ ಗುರಿಹೊಂದಲಾಗಿದ್ದು, ಈಗಾಗಲೇ 2178 ಶೌಚಾಲಯಗಳನ್ನು ನಿರ್ಮಾಣಗೊಳಿಸಿದ್ದು, 1500 ಶೌಚಾಲಯಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ತಾಲೂಕಿನ ಸೊರಟೂರು ಮತ್ತು ಎಲಿಶಿರುಂಜ ಗ್ರಾಮವ್ಯಾಪ್ತಿಯ ಸಾರ್ವಜನಿಕರು ಸರ್ಕಾರದ ಈ ಯೋಜನೆಯ ಸಂಪೂರ್ಣ ಸದುಪಯೋಗ ಪಡೆದುಕೊಳ್ಳುವ ಮೂಲಕ ತಾಲೂಕಿನಲ್ಲಿ ಈ ಯೋಜನೆಯ ಯಶಸ್ಸಿಗೆ ಕಾರಣಕರ್ತರಾಗಿದ್ದಾರೆ ಎಂದರು.