ನಿರ್ಮೂಲನೆಯಾಗದ ಕೊಳಚೆ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಡಿ. 17
ಗಬ್ಬೆದ್ದು ನಾರುತ್ತಿರುವ ಕೊಳಚೆ ಪ್ರದೇಶ, ಅದರ ಪಕ್ಕದಲ್ಲಿ ಮಹಿಳಾ ಸಾಮೂಹಿಕ ಶೌಚಾಲಯ, ಇಲ್ಲೊಂದು ಸಮುದಾಯ ಭವನ, ಈ ಸಮುದಾಯ ಭವನದಲ್ಲಿ ಈಗ ಪುಟ್ಟ ಮಕ್ಕಳ ಅಂಗನವಾಡಿ ಕೇಂದ್ರವಿದೆ. ಈ ಸಮುದಾಯ ಭವನದ ಸುತ್ತಲೂ ರಾಶಿ ರಾಶಿ ಕಸ, ಇಲ್ಲಿ ಸಂಚರಿಸುವಾಗ ಮೂಗು ಮುಚ್ಚಿಕೊಂಡು ಸಂಚರಿಸುವುದು ಕಡ್ಡಾಯ. ಇಲ್ಲವಾದಲ್ಲಿ ಮೂರ್ಚೆ ಹೋಗುವುದು ಗ್ಯಾರಂಟಿ. ಇದು ಪಟ್ಟಣದ ಬಯ್ಯಾರ್ ಓಣಿಯ ಅಥವಾ 11 ವಾರ್ಡ್ನ ಕೊಳಚೆ ಪ್ರದೇಶದ ಕೈಗನ್ನಡಿ.
ಪಟ್ಟಣದಲ್ಲಿ ಇರುವ ಹಲವು ಕೊಳಚೆ ಪ್ರದೇಶಗಳಲ್ಲಿ ಒಂದಾದ ಬಯ್ಯಾರ್ ಓಣಿ ಅತ್ಯಂತ ಹಿಂದುಳಿದ ಪ್ರದೇಶವಾಗಿದೆ. ಇಲ್ಲಿ ಸಂಚರಿಸಲು ಸರಿಯಾದ ರಸ್ತೆಗಳಿಲ್ಲ. ರಸ್ತೆ ಮೇಲೆ ಎಲ್ಲೆಂದರಲ್ಲಿ ಚೆಲ್ಲಿರುವ ಕಸದ ರಾಶಿಗಳು, ತಿಪ್ಪೆ ಗುಂಡಿಗಳು. ಕಸದ ರಾಶಿಯಲ್ಲಿ ರಸ್ತೆ ಹುಡುಕುವಂತಾಗಿದೆ. ಚರಂಡಿಗಳ ತುಂಬೆಲ್ಲ ಕಸವೋ ಕಸ. ಇದೆ ಪ್ರದೇಶದಲ್ಲಿ ಪಟ್ಟಣದ ಚರಂಡಿಗಳ ಎಲ್ಲ ಕೊಳಚೆ ನೀರು ಹಾಯ್ದು ಹೋಗುವ ರಾಜ ಕಾಲುವೆ ಇದೆ. ಕಾಲುವೆ ಪಕ್ಕದಲ್ಲಿ ಕೊಳಚೆ ನಿರ್ಮೂಲನಾ ಮಂಡಳಿ ಲಕ್ಷಾಂತರ ರು. ಖರ್ಚು ಮಾಡಿ ನಿರ್ಮಿಸಿರುವ ಸಮುದಾಯ ಭವನವಿದೆ.
ಈ ಸಮುದಾಯ ಭವನದಲ್ಲಿ 5-6 ವರ್ಷಗಳಿಂದ ಅಂಗನವಾಡಿ ಕೇಂದ್ರ ನಡೆಯುತ್ತಿದೆ. ಈ ಅಂಗನವಾಡಿಯಲ್ಲಿ ಸುಮಾರು 30 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಗಲೀಜು ವಾತಾವರಣದಲ್ಲಿ ಚಿಕ್ಕ ಮಕ್ಕಳ ಆರೋಗ್ಯ ಕುರಿತು ಪುರಸಭೆಯಾಗಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೂಡಾ ತಲೆ ಕೆಡಿಸಿಕೊಂಡಿಲ್ಲ. ಸಮುದಾಯ ಭವನದ ಸುತ್ತಲೂ ಕಸದ ರಾಶಿ ಹಾಕಿ ಕೊಳಚೆಯೊಳಗೊಂದು ಭವನ ನಿರ್ಮಾಣ ಮಾಡಿದಂತಾಗಿದೆ. ಹೀಗಾಗಿ ಸಮುದಾಯ ಭವನ ನಿರ್ಮಾಣಕ್ಕೆ ಮಾಡಿದ ಲಕ್ಷಾಂತರ ಅನುದಾನ ನೀರಿನಲ್ಲಿ ಹೋಮ ಮಾಡಿದಂತಾಗಿದೆ ಎಂಬುದು ಸ್ಥಳೀಯ ನಿವಾಸಿಗಳ ಆರೋಪ. ಇಷ್ಟೇ ಆಗಿದ್ದರೆ ಹೇಗೋ ಇರಬಹುದಾಗಿತ್ತು. ಆದರೆ, ಸಮುದಾಯ ಭವನದ ಪಕ್ಕದಲ್ಲಿ ಮಹಿಳಾ ಸಾಮೂಹಿಕ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಈ ಶೌಚಾಲಯಕ್ಕೆ ಸೂಕ್ತ ನೀರಿನ ಸೌಲಭ್ಯ ಒದಗಿಸಿಲ್ಲ. ಶೌಚಾಲಯಕ್ಕಾಗಿ ಕೊರೆದಿರುವ ಬೋರ್ವೆಲ್ ಹಾಳಾಗಿದೆ. ಬೋರ್ವೆಲ್ನ ನೀರು ಎತ್ತುವ ಮೋಟಾರ್ ಎತ್ತಂಗಂಡಿಯಾಗಿದೆ. ಹೀಗಾಗಿ ಶೌಚಾಲಯದ ಗಬ್ಬು ವಾಸನೆ ತಲೆ ತಿರುಗುವಂತೆ ಮಾಡುತ್ತಿದೆ. ಇಂಥ ವಾತಾವರಣದಲ್ಲಿ ಅಂಗನವಾಡಿಯ ಮಕ್ಕಳ ಶಿಕ್ಷಣ ನಡೆಯುತ್ತಿದೆ ಎಂಬುದು ಆಶ್ಚರ್ಯಕರ ಸಂಗತಿಯಾಗಿದೆ. ಸಮುದಾಯ ಭವನಕ್ಕೆ ಹೋಗುವ ದಾರಿಯಲ್ಲಿ ತಿಪ್ಪೆ ಗುಂಡಿ, ಮುಳ್ಳು ಕಂಟಿ, ಪ್ಲಾಸ್ಟಿಕ್ ತ್ಯಾಜ್ಯಗಳು, ಎತ್ತು ಚಕ್ಕಡಿಗಳು ನಿಂತು ಸ್ವಾಗತ ಕೋರುತ್ತವೆ. ಇಲ್ಲಿನ ನಾಗರಿಕರು ಕೂಡಾ ಸಾಕಷ್ಟು ತಪ್ಪುಗಳನ್ನು ಮಾಡುತ್ತಿದ್ದಾರೆ. ರಸ್ತೆ ಮೇಲೆ ಕಸ ಹಾಕುವುದು. ಸಂಚಾರಕ್ಕಿರುವ ದಾರಿಯಲ್ಲಿ ತಿಪ್ಪೆ ಹಾಕುವುದರಿಂದ ಕೊಳಚೆ ಉಂಟಾಗಲು ಮೂಲ ಕಾರಣವೆನ್ನಬಹುದಾಗಿದೆ. ಇಲ್ಲಿನ ನಾಗರಿಕರು ಕೊಳಚೆ ಸಮಸ್ಯೆ ಬಗೆಹರಿಸುವಂತೆ ಹಲವಾರು ಬಾರಿ ಪುರಸಭೆಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.
-ಅಶೋಕ ಸೊರಟೂರ