ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಯೋಜನೆಗಳ ಅನುಷ್ಠಾನಕ್ಕೆ ಸಹಕರಿಸಿ

Lingaraj Badiger
Updated On : 18 Dec 2013, 11:41 am

ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಡಿ. 17
ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಗ್ರಾಮೀಣ ಪ್ರದೇಶದ ಜನರಿಗೆ ವರದಾನವಾಗಿದ್ದು, ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳುವುದು ಸೇರಿದಂತೆ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸುವ ಗುರಿ ಹೊಂದಲಾಗಿದ್ದು, ಗುರಿ ಸಾಧನೆಗೆ ಎಲ್ಲರೂ ಸಹಕರಿಸಬೇಕು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವೈ.ಎಲ್. ಹಂಪಣ್ಣ ಹೇಳಿದರು.
ಅವರು ಮಂಗಳವಾರ ಪಟ್ಟಣದ ತಾಪಂ ಸಾಮರ್ಥ್ಯ ಸೌಧ ಸಭಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಈ ಯೋಜನೆ ಅಡಿಯಲ್ಲಿ ಶೌಚಾಲಯ ನಿರ್ಮಾಣ, ನಮ್ಮ ಹೊಲ ನಮ್ಮ ದಾರಿ, ಕೆರೆ ಹೂಳೆತ್ತುವುದು, ಸರ್ವಋತು ರಸ್ತೆ ಅಭಿವೃದ್ಧಿ, ಆಟದ ಮೈದಾನ ಅಥವಾ ಅಭಿವೃದ್ಧಿ, ಸ್ಮಶಾನ ಅಭಿವೃದ್ಧಿ, ಚೆಕ್ ಡ್ಯಾಂ ನಿರ್ಮಾಣ ಮತ್ತು ಮಳೆ ನೀರು ಕೊಯ್ಲು ಕಾಮಗಾರಿ, ಸಾಮೂಹಿಕ ಒಕ್ಕಲು ಕಣ, ದನದ ಕೊಟ್ಟಿಗೆ, ಕುರಿ ದೊಡ್ಡಿ ಮುಂತಾದ ಸಮುದಾಯ ಕಾಮಗಾರಿಗಳನ್ನು ಈ ಯೋಜನೆಯಡಿ ಕೈಗೊಳ್ಳಬಹುದು. ಅರ್ಹ ಫಲಾನುಭವಿಗಳಿಗೆ ನಡೆಪ್ ಮಾದರಿ, ಕಾಂಪೋಸ್ಟ್ ಘಟಕ, ಎರೆಹುಳು ಗೊಬ್ಬರ ಘಟಕ, ದ್ರವರೂಪಿ ಜೈವಿಕ ಗೊಬ್ಬರ ತಯಾರಿಕಾ ಘಟಕ, ಮೀನುಗಾರಿಕಾ ಜಲಾಗಾರ, ಜಾನುವಾರು ಕೊಟ್ಟಿಗೆ ಮತ್ತು ಮೇವು ತೊಟ್ಟಿ ನಿರ್ಮಾಣ, ಕೋಳಿ ಸಾಕಾಣಿಕೆ ಶೆಡ್ಡು, ಭೂ ಅಭಿವೃದ್ಧಿ ಕಾಮಗಾರಿ, ತೋಟಗಾರಿಕೆ, ರೇಷ್ಮೆ ಅರಣ್ಯೀಕರಣ, ವೈಯಕ್ತಿಕ ಶೌಚಾಲಯ ಮತ್ತಿತರ ಕಾಮಗಾರಿ ಕೈಗೊಳ್ಳಬಹುದಾಗಿದೆ.
ಅರ್ಜಿ ಸಲ್ಲಿಸಿ ಉದ್ಯೋಗ ಚೀಟಿ ಪಡೆಯುವ ಜತೆಗೆ ಉದ್ಯೋಗಕ್ಕಾಗಿ ನೋಂದಾಯಿಸಿ 15 ದಿನಗಳೊಳಗೆ ಉದ್ಯೋಗ ಪಡೆಯಬಹುದಾಗಿದೆ. ಮಹಿಳೆಯರಿಗೆ ಮತ್ತು ಪುರುಷರಿಗೆ ದಿನವೊಂದಕ್ಕೆ ರು. 174 ಕೂಲಿ ನೀಡಲಾಗುತ್ತಿದೆ. ಅರ್ಹ ವೈಯಕ್ತಿಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಸಣ್ಣ ಮತ್ತು ಅತಿ ಸಣ್ಣ ರೈತರಿಗೆ, ಬಿಪಿಎಲ್, ಐಎವೈ, ಭೂ ಸುಧಾರಣಾ ಫಲಾನುಭವಿಗಳು ಗ್ರಾಪಂಗೆ ಅರ್ಜಿಸಲ್ಲಿಸಿ ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದರು.
ಜನರು ಮಾಡಬಹುದಾದ ಕೆಲಸಗಳಿಗೆ ಯಂತ್ರಗಳನ್ನು ನಿಷೇಧಿಸಲಾಗಿದೆ. ಈ ಯೋಜನೆ ಅಡಿಯಲ್ಲಿ ಒಂದು ಆರ್ಥಿಕ ವರ್ಷಕ್ಕೆ ಕುಟುಂಬವೊಂದಕ್ಕೆ 100 ದಿನಗಳ ಉದ್ಯೋಗ ನೀಡಲಾಗುತ್ತಿದ್ದು, ವಾರದ ಕೂಲಿ ವಾರಾಂತ್ಯಕ್ಕೆ ಇಎಫ್‌ಎಂಎಸ್ ಮೂಲಕ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು. ನಿಯಮಾನುಸಾರ ಫಲಾನುಭವಿಗಳು ಕಾರ್ಯನಿರ್ವಹಿಸಿ, ಗ್ರಾಮಸ್ಥರು ಯೋಜನೆಯ ಯಶಸ್ಸಿಗೆ ಸಹಕರಿಸಬೇಕು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement