ರೈತರು ಬೆಂಬಲ ಬೆಲೆ ಪ್ರಯೋಜನ ಪಡೆಯಿರಿ
ಕನ್ನಡಪ್ರಭ ವಾರ್ತೆ, ನರಗುಂದ, ಡಿ. 17
ರೈತರು ಬೆಳೆದ ಗೋವಿನ ಜೋಳಕ್ಕೆ ಸರ್ಕಾರ ರು. 1310 ಬೆಂಬಲ ಬೆಲೆ ನೀಡಿದ್ದು, ರೈತರು ಇದರ ಸದುಪಯೋಗ ಪಡೆಯಬೇಕು ಎಂದು ಶಾಸಕ ಬಿ.ಆರ್. ಯಾವಗಲ್ಲ ಹೇಳಿದರು.
ಅವರು ಪಟ್ಟಣದ ನೂತನ ಎಪಿಎಂಸಿ ಆವರಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ನಿ, ಬೆಂಗಳೂರ. ದಿ. ನರಗುಂದ ತಾಲೂಕಾ ಒಕ್ಕುಲತನ ಹುಟ್ಟುವಳಿ ಮಾರಾಟ ಸಹಕಾರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಗೋವಿನ ಜೋಳ ಬೆಂಬಲ ಬೆಲೆ ಖರೀದಿ ಕೇಂದ್ರ ಉದ್ಘಾಟನೆ ಮಾಡಿ ಮಾತನಾಡಿದರು.
ಮಲಪ್ರಭೆ ಕಾಲುವೆ ಹೊಂದಿರುವ ನೀರಾವರಿ ಜಮೀನುಗಳಲ್ಲಿ ಈ ಭಾಗದ ರೈತರು ಹೆಚ್ಚು ಗೋವಿನ ಜೋಳ ಬೆಳೆಯುತ್ತಾರೆ. ಅದಕ್ಕೆ ಈ ಸದ್ಯ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇಲ್ಲದ್ದರಿಂದ ಸರ್ಕಾರ ರೈತ ಸಮುದಾಯಕ್ಕೆ ಅನುಕೂಲವಾಗಲೆಂದು ರು. 1310 ಪ್ರತಿ ಕ್ವಿಂಟಲ್‌ಗೆ ಖರೀದಿಸಲು ನಿರ್ಣಯಿಸಿದೆ ಎಂದರು.
30ಕ್ಕೆ ಕಾಲುವೆ ಬಂದ್: ಇದೇ ತಿಂಗಳ ಈ ಭಾಗದ ಮಲಪ್ರಭಾ ಜಲಾಶಯದಲ್ಲಿ ನೀರಿನ ಪ್ರಮಾಣ ಈ ವರ್ಷ ಕಡಿಮೆ ಇರುವುದರಿಂದ ಮಲಪ್ರಭಾ ಕಾಲುವೆಯ ನೀರು ಡಿ. 30ಕ್ಕೆ ಬಂದ್ ಆಗುವುದು.
ಹಾಗಾಗಿ ರೈತಬಾಂಧವರು ತಮ್ಮ ಜಮೀನುಗಳಿಗೆ ಬೇಗೆ ನೀರು ಹಾಯಿಸಿಕೊಂಡು ಪಟ್ಟಣ ಸೇರಿದಂತೆ ಎಲ್ಲ ಗ್ರಾಮೀಣ ಭಾಗದ ಕುಡಿಯುವ ನೀರಿನ ಕೆರೆಗಳನ್ನು ತುಂಬಿಸಿಕೊಳ್ಳಲು ಮುಂದಾಗಬೇಕು ಎಂದರು. ಪ್ರಾಸ್ತಾವಿಕವಾಗಿ ಸಹಕಾರ ಮಾರಾಟ ಮಂಡಳಿ ಶಾಖಾ ವ್ಯವಸ್ಥಾಪಕ ಜಿ.ಆರ್. ರಾಜಪ್ಪ, ತಹಸೀಲ್ದಾರ್ ನಾಗರಾಜ ಪಾಟೀಲ, ತಾಲೂಕು ಪ್ರಭಾರ ಕೃಷಿ ಅಧಿಕಾರಿ ಎಸ್.ಎ. ಸೂಡಿಶಟ್ಟರ ಮಾತನಾಡಿದರು.
ಈ ಸಂದರ್ಭದಲ್ಲಿ ಟಿಎಪಿಎಂಸಿ ಅಧ್ಯಕ್ಷ ಎಫ್.ಆರ್. ಪಾಟೀಲ, ಎಪಿಎಂಸಿ ಅಧ್ಯಕ್ಷ ಅಜ್ಜಪ್ಪ ಹುಡೇದ, ಚಂಬಣ್ಣ ವಾಳದ, ರಾಜು ಕಲಾಲ, ದ್ಯಾಮಣ್ಣ ಸವದತ್ತಿ, ಸಿ.ಬಿ. ಪಾಟೀಲ, ವಂಕರಡ್ಡಿ ದೇವರಡ್ಡಿಯವರ, ಜಗದೀಶ ರಾಯನಗೌಡ್ರ, ಚಂದ್ರು ದಂಡಿನ, ಬಸರಡ್ಡಿ ರಾಯರಡ್ಡಿಯವರ, ರಾಚನಗೌಡ್ರ, ಪರಶುರಾಮ ಜಂಬಗಿ, ಹನುಮಂತ ಹಂಪಿಹೊಳಿ, ಕಾರ್ಯದರ್ಶಿ ಬುರಡಿ, ನಿಂಗಪ್ಪ ಮೊರಬದ, ವೈ.ಎಚ್. ಪಾಟೀಲ, ಮುಂತಾದವರು ಹಾಜರಿದ್ದರು.