ವಿದ್ಯಾರ್ಥಿ ವಿರೋಧಿ ನೀತಿ: ಎಸ್ಸೆಫ್ಐ ಖಂಡನೆ
ಶಿಗ್ಗಾಂವಿ: ಸರ್ಕಾರದ ವಿದ್ಯಾರ್ಥಿ ವಿರೋಧಿ ನೀತಿ ಖಂಡಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ ತಾಲೂಕು ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪಟ್ಟಣದ ಮಾತಾ ಕಾಳಿಕಾದೇವಿ ಐಟಿಐ ಕಾಲೇಜು ಎದುರು ಪ್ರತಿಭಟನೆ ನಡೆಸಿದರು. ತಾಲೂಕು ಅಧ್ಯಕ್ಷ ಸುಭಾಸ ಮಾದರ ಮಾತನಾಡಿ, ಕರ್ನಾಟಕ ವೃತ್ತಿ ಶಿಕ್ಷಣ ಸಂಸ್ಥೆಗಳ (ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ ಕಾಯ್ದೆ) ಹೆಸರಿನಲ್ಲಿ ಇಡೀ ವೃತ್ತಿ ಶಿಕ್ಷಣವನ್ನು ಮಾರಾಟದ ಸರಕನ್ನಾಗಿಸಲು ಸರ್ಕಾರ ಹೊರಟಿದೆ. ಕಾಯ್ದೆ ಜಾರಿ ಮಾಡುವ ಮೂಲಕ ವೃತ್ತಿ ಶಿಕ್ಷಣದ ಕನಸಿಗೆ ತಣ್ಣೀರೆರಚಿದೆ. ತಾಂತ್ರಿಕ, ವೈದ್ಯ ಕೋರ್ಸ್ಗಳ ಶುಲ್ಕ ಹೆಚ್ಚಿಸುವ ಜತೆಗೆ ಖಾಸಗಿ ಕಾಲೇಜುಗಳಿಗೆ ಸಿಇಟಿ ಮೂಲಕ ಪ್ರವೇಶ ಪ್ರಕ್ರಿಯೆ ಕೈಬಿಡಲೂ ಮುಂದಾಗಿದೆ ಎಂದು ಆರೋಪಿಸಿದರು. ಸಂತೋಷ ಹಿರೇಹೊಳಿ, ಮಹೇಶ ಗುಬ್ಬಿ, ಪರಶುರಾಮ ನಿಂಗಪ್ಪನವರ, ಸುನೀಲ ಲಮಾಣಿ, ಶ್ರೀಕಾಂತ ವಾಲ್ಮೀಕಿ ಇದ್ದರು.