ಶಿರೋಳ ಸಂತೆ: ಖರೀದಿಗೆ ಹೆಣಗಾಟ
ಕನ್ನಡಪ್ರಭ ವಾರ್ತೆ, ನರಗುಂದ, ಡಿ. 17
ತಾಲೂಕಿನ ಶಿರೋಳ ಗ್ರಾಮದಲ್ಲಿ ಪ್ರತಿ ರವಿವಾರ ಸಂತೆ ನಡೆಯುತ್ತದೆ. ಗ್ರಾಮದ ಶ್ರೀ ತೋಂಟದಾರ್ಯ ಮಠದ ಮುಖ್ಯದ್ವಾರದ ಪಕ್ಕದ ರಸ್ತೆಯಲ್ಲಿ ಖಾಸಗಿ ವಾಹನಗಳಿಂದ ಸಂಪೂರ್ಣ ರಸ್ತೆ ಟ್ರಾಫಿಕ್‌ಜಾಮ್‌ನಿಂದ ವಿವಿಧ ಹಳ್ಳಿಗಳಿಂದ ಸಂತೆ ಮಾಡಲಿಕ್ಕೆ ಬಂದ ಜನತೆ ಸಮಸ್ಯೆ ಎದುರಿಸುತ್ತಿದ್ದಾರೆ.
ಸಂತೆ ಮಾಡಲು ಬಂದವರು ತಮ್ಮ ಜೀವ ಕೈಯಲ್ಲಿ ಹಿಡಿದುಕೊಂಡು ರಸ್ತೆಯನ್ನು ದಾಟಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಈ ಟ್ರಾಫಿಕ್ ಸಮಸ್ಯೆ ತಪ್ಪಿಸಿ, ಜನತೆಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಯಾವ ಕ್ರಮವನ್ನೂ ಕೈಗೊಳ್ಳುತ್ತಿಲ್ಲ. ಇದರಿಂದ ಸಮಸ್ಯೆ ಇನ್ನೂ ಹೆಚ್ಚು ಉಲ್ಬಣಗೊಳ್ಳುತ್ತಿದೆ.
ಈ ಗ್ರಾಮದಲ್ಲಿ ನಡೆಯುವ ಸಂತೆಗೆ ಬದಾಮಿ ತಾಲೂಕಿನ ಕಿತ್ತಲಿ, ಕಳಸ, ರೋಣ ತಾಲೂಕಿನ ಸೋಮನಕಟ್ಟಿ, ಮಾಳವಾಡ, ಭೂಪಳಾಪುರ, ಕರಿಕಿಕಟ್ಟಿ, ಅಸೂಟಿ, ನರಗುಂದ ತಾಲೂಕಿನ ಕಪಲಿ, ಕಲ್ಲಾಪುರ, ರಡ್ಡೇರನಾಗನೂರ, ಖಾನಾಪುರ ಮತ್ತಿತರ ಗ್ರಾಮಗಳಿಂದ ಸಾವಿರಾರು ಜನತೆ ಸಂತೆ ಮಾಡಲಿಕ್ಕೆ ಬರುತ್ತಾರೆ. ಆದರೆ, ಜನತೆ ಈ ಮುಖ್ಯ ರಸ್ತೆ ದಾಟಿ ಸಂತೆಯೊಳಗೆ ಹೋಗಲು ಪರದಾಡುತ್ತಿದ್ದಾರೆ. ಇವರ ಸಮಸ್ಯೆಗೆ ಯಾರೂ ಸ್ಪಂದಿಸುತ್ತಿಲ್ಲ.
ವಾಹನಗಳ ದರ್ಬಾರ್: ಶಿರೋಳಕ್ಕೆ ಸುತ್ತಲೂ ಗ್ರಾಮಗಳಿಂದ ಬಂದ ವಾಹನಗಳು ಸಂತೆಗೆ ಹೋಗುವ ಮುಖ್ಯ ರಸ್ತೆಯಲ್ಲಿ ಹಾಗೂ ಹೊಳೆ-ಆಲೂರ, ಕೊಣ್ಣೂರ, ಹದಲಿಗೆ ಹೋಗುವ ಕ್ರಾಸ್‌ಗಳಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿಕೊಂಡು ನಿಲ್ಲುವುದರಿಂದ ಈ ರಸ್ತೆ ಸಂಪೂರ್ಣ ಜನತೆ ನಡೆದಾಡಲೂ ಆಗದಂತೆ ಆಗುತ್ತದೆ. ಜನತೆಗೆ ಹೋಗಲು ಸ್ವಲ್ಪ ಜಾಗೆಯೂ ಇಲ್ಲದ ಹಾಗೆ ವಾಹನಗಳನ್ನು ನಿಲ್ಲಿಸುತ್ತಾರೆ. ಇವರಿಗೆ ಯಾರೂ ಹೇಳುವವರು, ಕೇಳುವವರು ಇಲ್ಲದಂತಾಗಿದೆ. ಇದರಿಂದಾಗಿ ಸಾರ್ವಜನಿಕರ ಕಷ್ಟ ಹೇಳತೀರದಾಗಿದ್ದು, ಈ ರೀತಿಯ ವಾಹನ ನಿಲುಗಡೆಗೆ ಕೂಡಲೇ ತಡೆ ಹಾಕಬೇಕಿದೆ.
ತೂಕದಲ್ಲೂ ಜನತೆಗೆ ಮೋಸ: ಪ್ರತಿ ಭಾನುವಾರ ನಡೆವ ಸಂತೆಯಲ್ಲಿ ತರಕಾರಿ ಮಾರುವ ವ್ಯಾಪಾರಸ್ಥರು ತೂಕ ಮಾಡುವ ತಕ್ಕಡಿಗಳಲ್ಲಿ ಕಡಿಮೆ ತೂಕ ಇರುವ ಕಲ್ಲುಗಳನ್ನು (ತೂಕದ ಬಟ್ಟುಗಳು) ಇಟ್ಟು ತೂಗುವುದರಿಂದ ಜನರಿಗೆ ಮೋಸ ಮಾಡುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ಗಮನಹರಿಸಿ, ಸೂಕ್ತ ಕ್ರಮಕೈಗೊಳ್ಳಬೇಕೆಂದು ಹಲವಾರು ಬಾರಿ ಸಾರ್ವಜನಿಕರು ತಮ್ಮ ಸಮಸ್ಯೆ ಹೇಳಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ.
- ಎಸ್.ಜಿ. ತೆಗ್ಗಿನಮನಿ