ಸಮಾಜಮುಖಿ ಕಾರ್ಯದಿಂದ ನೆಮ್ಮದಿ: ರಾಜಣ್ಣ ಹೂಲಿ
ಕನ್ನಡಪ್ರಭ ವಾರ್ತೆ, ರೋಣ, ಡಿ. 17
ವ್ಯಕ್ತಿ ತಾನು ಸಂಪಾದಿಸಿದ ವಿದ್ಯೆ ಮತ್ತು ಸಂಪತ್ತನ್ನು ಸಮಾಜಮುಖಿ ಕಾರ್ಯಗಳಿಗೆ ವಿನಿಯೋಗಿಸಿದಲ್ಲಿ ಸಂತೋಷ, ತೃಪ್ತಿಯಾಗುವುದರ ಜತೆಗೆ ಸಮಾಜ ಮತ್ತು ದೇಶ ಅಭಿವೃದ್ಧಿ ಹೊಂದುತ್ತದೆ. ಆದ್ದರಿಂದ ಪ್ರತಿಯೊಬ್ಬರಲ್ಲಿ ಸೇವಾ ಮನೋಭಾವ ಅತ್ಯಂತ ಮುಖ್ಯವಾಗಿದೆ ಎಂದು ತಾಲೂಕು ಬಣಜಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜಣ್ಣ ಹೂಲಿ ಹೇಳಿದರು.
ಅವರು ಸೋಮವಾರ ಸಂಜೆ ಹೂಲಿಯವರ ಬಡಾವಣೆಯಲ್ಲಿ ರೋಣ ತಾಲೂಕು ಬಣಜಿಗರ ಕ್ಷೇಮಾಭಿವೃದ್ಧಿ ಸಂಘವು ಏರ್ಪಡಿಸಿದ್ದ ಭೂದಾನಿಗಳಾದ ದಿ. ಗುರಬಸಮ್ಮ ಐಹೊಳ್ಳಿ ಅವರ ಸೊಸೆ ಶಕುಂತಲಾ ಐಹೊಳ್ಳಿ ಮತ್ತು ಗಿರಿಜಮ್ಮ ಸಿದ್ಧಾಪುರ (ಐಹೊಳ್ಳಿ) ಅವರಿಗೆ ನಡೆದ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರೋಣ ತಾಲೂಕು ಬಣಜಿಗರ ಕ್ಷೇಮಾಭಿವೃದ್ಧಿ ಸಂಘಕ್ಕೆ ಪಟ್ಟಣದ ಅಬ್ಬಿಗೇರಿ ರಸ್ತೆಯಲ್ಲಿ ಸುಮಾರು ರು. 1 ಕೋಟಿಗೂ ಹೆಚ್ಚು ಬೆಲೆಬಾಳುವ 22 ಗುಂಟೆ ಜಮೀನನ್ನು ಐಹೊಳ್ಳಿ ಕುಟುಂಬವು ದಾನವಾಗಿ ನೀಡಿದೆ. ಅವರು ದಾನವಾಗಿ ನೀಡಿದ ಜಮೀನಿನಲ್ಲಿ ಕಲ್ಯಾಣ ಮಂಟಪ ನಿರ್ಮಿಸುವ ಉದ್ದೇಶವನ್ನು ಹೊಂದಲಾಗಿದೆ. ಕಲ್ಯಾಣ ಮಂಟಪಕ್ಕೆ ದಾನಿಗಳ ಹೆಸರನ್ನಿಡಲಾಗುವುದು. ಸಮಾಜದ ಅಭಿವೃದ್ಧಿಗೆ ಪ್ರತಿಯೊಬ್ಬರ ಶ್ರಮ ಅತ್ಯಂತ ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಐಹೊಳ್ಳಿ ಕುಟುಂಬದ ಕಾರ್ಯ ಶ್ಲಾಘನೀಯವಾಗಿದೆ ಎಂದರು. ಎಸ್.ಎಂ. ಪಟ್ಟಣಶೆಟ್ಟಿ, ಎಫ್.ಎಸ್. ಕುರಡಗಿ ಮಾತನಾಡಿದರು. ಸಮಾಜದ ಮುಖಂಡರಾದ ತೋಟಪ್ಪ ಕಡಗದ, ಡಾ. ಎ.ಸಿ. ಹೂಲಿ, ಅಂದಪ್ಪ ಹೊಸಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಪ್ರಕಾಶ ಮಾಗಿ ಸ್ವಾಗತಿಸಿದರು. ಶೇಖಣ್ಣ ಐಹೊಳ್ಳಿ ನಿರೂಪಿಸಿ, ಶಿವು ಹೂಲ್ಲೂರ ವಂದಿಸಿದರು.