ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸವಿತಾ ಸಮಾಜ ಶಿಕ್ಷಣಕ್ಕೆ ಪ್ರಾಮುಖ್ಯ ನೀಡಲಿ

Lingaraj Badiger
Updated On : 18 Dec 2013, 11:42 am

ಕನ್ನಡಪ್ರಭ ವಾರ್ತೆ, ಗದಗ, ಡಿ. 17
ಸವಿತಾ ಸಮಾಜವು ಆರ್ಥಿಕವಾಗಿ ಪ್ರಗತಿ ಹೊಂದುವುದರ ಜತೆಗೆ ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವಲ್ಲಿ ಸವಿತಾ ಸಮಾಜದ ಪಾಲಕರು ಶ್ರಮಿಸಬೇಕಾಗಿದೆ ಎಂದು ಗದಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಹಾಗೂ ಮಾಜಿ ಶಾಸಕ ಡಿ.ಆರ್.ಪಾಟೀಲ ಹೇಳಿದರು.
ಅವರು ಮಂಗಳವಾರ ಎಪಿಎಂಸಿ ಪ್ರಾಂಗಣದಲ್ಲಿರುವ ಕೆ.ಎಚ್.ಪಾಟೀಲ ಸಭಾಭವನದಲ್ಲಿ ಸವಿತಾ ಸಮಾಜದ ರಾಜ್ಯಮಟ್ಟದ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಮನುಷ್ಯ ಯಾವ ಜಾತಿಯಲ್ಲಿರಲಿ ಅವನು ತನ್ನ ಜಾತಿಗೆ ಸೀಮಿತನಾಗದೇ, ದೇಶದ ಅಭಿವೃದ್ಧಿಗೆ ಶ್ರಮಿಸುವುದು ಅತ್ಯವಶ್ಯಕವಾಗಿದೆ. ಹುಟ್ಟು ಆಕಸ್ಮಿಕವಾಗಿದ್ದು, ನಾವು ಹುಟ್ಟುವ ಪೂರ್ವದಲ್ಲಿ ಇಂತಹದ್ದೇ ಜಾತಿಯಲ್ಲಿ ಜನ್ಮತಳೆದು ಬರಬೇಕು ಎಂಬ ಉದ್ದೇಶವನ್ನಿಟ್ಟುಕೊಂಡು ಜನಿಸಿರುವುದಿಲ್ಲ. ಹಾಗೆಯೇ ನಾವು ಜನ್ಮತಳೆದ ಮೇಲೆ ನಮ್ಮ ಪೂರ್ವಜರು ಮಾಡಿಕೊಂಡು ಬಂದಿರುವ ವೃತ್ತಿಗಳು ನಮಗೆ ಬಳುವಳಿಯಾಗಿ ಬರುತ್ತವೆ. ಹಾಗೆಯೇ ನಮಗೆ ಹಿರಿಯರು, ತಂದೆ-ತಾಯಿಯು ನೀಡಿದ ವೃತ್ತಿಯನ್ನು ಮುಂದುವರೆಸಿಕೊಂಡು ಹೋಗುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.
ಯಾವುದೇ ಸಮಾಜ, ಸಮುದಾಯ ಅಭಿವೃದ್ಧಿ ಹೊಂದಬೇಕಾದಲ್ಲಿ ಶಿಕ್ಷಣ ಅತ್ಯವಶ್ಯಕವಾಗಿದ್ದು, ಸವಿತಾ ಸಮಾಜದ ಎಲ್ಲ ಮಕ್ಕಳು ಶಿಕ್ಷಣವಂತರಾಗಬೇಕು. ಇದಕ್ಕೆ ಸವಿತಾ ಸಮಾಜದ ಪಾಲಕರು ಶ್ರಮಿಸಬೇಕಾಗಿದೆ. ಕಾಂಗ್ರೆಸ್ ಸರ್ಕಾರವು ಸರ್ವ ಸಮಾಜದ ಏಳ್ಗೆಗಾಗಿ ಶ್ರಮಿಸುತ್ತಿದೆ. 1969ರಲ್ಲಿ ಇಂದಿರಾಗಾಂಧಿಯವರು ಅವಕಾಶ ವಂಚಿತ ಹಿಂದುಳಿದ ಸಮುದಾಯದ ಮುಖಂಡರನ್ನು ಮುಖ್ಯಮಂತ್ರಿ ಮಾಡುವ ಮೂಲಕ ಸರ್ವರಲ್ಲಿಯೂ ಸಮಾನತೆ ಮನೋಭಾವ ಬೆಳೆಸುವಲ್ಲಿ ಶ್ರಮಿಸಿದರು.
ರಾಜಕಾರಣ ಎಂಬುದು ಕೇವಲ ಉಚ್ಚ ಜಾತಿಯವರಿಗೆ ಮೀಸಲಿರದೇ, ಸಮಾಜದ ಎಲ್ಲ ಜಾತಿಯ ಜನಾಂಗದ ನಾಯಕರಿಗೂ ದೊರೆಯುವಂತಾಗಬೇಕು. ಅವಕಾಶ ವಂಚಿತರಿಗೆ ಅವಕಾಶ ಕಲ್ಪಿಸಿ ಅವರನ್ನು ಮುಖ್ಯವಾಹಿನಿಗೆ ತರುವಲ್ಲಿ ಸವಿತಾ ಸಮಾಜ ಬಾಂಧವರು ಶ್ರಮಿಸಬೇಕಾಗಿದೆ. 2005ರಲ್ಲಿ ಕೇಂದ್ರ ಸರ್ಕಾರವು ಜಾತಿಗಣತಿಗಾಗಿ ರು. 22 ಕೋಟಿ ಬಿಡುಗಡೆಗೊಳಿಸಿತ್ತು. 2014 ರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಜಾತಿಗಣತಿ ನಡೆಯಲಿದ್ದು, ಇದರಿಂದ ಅವಕಾಶ ವಂಚಿತ ಸಮುದಾಯವನ್ನು ಗುರುತಿಸಿ, ಅಂತಹ ಸಮಾಜವನ್ನು ಅಭಿವೃದ್ಧಿಗೊಳಿಸಲು ಸಹಕಾರಿಯಾಗಲಿದೆ. ಸರ್ಕಾರವು ಎಲ್ಲ ವರ್ಗ, ಇಲಾಖೆಗಳಲ್ಲಿಯೂ ಮೀಸಲಾತಿ ಪದ್ಧತಿಯನ್ನು ಜಾರಿಗೆ ತರಬೇಕಾಗಿದೆ. ಮೀಸಲಾತಿ ಪದ್ಧತಿ ಬಂದಾಗ ಮಾತ್ರ ಎಲ್ಲ ವರ್ಗದ ಜನರಿಗೆ ಅವಕಾಶ ದೊರೆಯಲು ಸಾಧ್ಯ. ಸವಿತಾ ಸಮಾಜ ಬಾಂಧವರು ಕಾಯಕಯೋಗಿಗಳಾಗಿದ್ದು, ಇವರ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲು ಸರ್ಕಾರ ಸಮಾಜಕ್ಕೆ ಬೇಕಾದ ಮೂಲಭೂತ ಸಮಸ್ಯೆಗಳನ್ನು ಈಡೇರಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಲಿ ಎಂದರು.
ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಜ್ಯೋತಿಕುಮಾರ ರಾಯಚೂರ ಹಾಗೂ ಸ್ವಾಗತ ಸಮಿತಿಯ ಸಮ್ಮೇಳನಾಧ್ಯಕ್ಷ ರಾಮಣ್ಣ ರಾಂಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾನ್ನಿಧ್ಯ ವಹಿಸಿದ್ದ ಗದಗನ ರಾಮಕೃಷ್ಣ ವಿವೇಕಾನಂದ ಆಶ್ರಮದ ನಿರ್ಭಯಾನಂದ ಸರಸ್ವತಿ ಶ್ರೀಗಳು ಆಶೀರ್ವಚನ ನೀಡಿದರು. ಸವಿತಾ ಸಮಾಜದ ರಾಜ್ಯಾಧ್ಯಕ್ಷ ಎನ್. ಸಂಪತ್ತಕುಮಾರ, ಪ್ರಧಾನ ಕಾರ್ಯದರ್ಶಿ ರಾಮಾಂಜನೇಯಲು, ಕೆ. ವೆಂಕಟೇಶ, ಅಶೋಕ ಗಸ್ತಿ, ಬೆಂಗಳೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಯು. ಕೃಷ್ಣಮೂರ್ತಿ, ನಗರಸಭೆ ಸದಸ್ಯ ಸುರೇಶ ಕಟ್ಟಿಮನಿ, ಮುಕ್ಕಣ್ಣ ರಾಂಪುರ, ಆರ್. ನಾರಾಯಣ, ವಿಜಯಕುಮಾರ ಇನಾಮತಿ, ವೆಂಕಟೇಶ ರಾಂಪುರ ಮುಂತಾದವರು ಉಪಸ್ಥಿತರಿದ್ದರು.
ದೀಪಕ ರಾಯಚೂರ ಸ್ವಾಗತಿಸಿದರು. ಆನಂದ ರಾಂಪುರ, ಶ್ರೀನಿವಾಸ ವಲ್ಲೂರ, ನಾಗರಾಜ ಗೌಡರ ನಿರೂಪಿಸಿದರು. ಮಂಜುನಾಥ ಅರೇಪಲ್ಲಿ ವಂದಿಸಿದರು. ಕಾರ್ಯಕ್ರಮದ ಪೂರ್ವದಲ್ಲಿ ಸವಿತಾ ಮಹಿರ್ಷಿಗಳ ಭಾವಚಿತ್ರ ಮೆರವಣಿಗೆಯು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement