ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

2006ರ ಕಾಯ್ದೆ ಅನುಷ್ಠಾನಕ್ಕೆ ವಿರೋಧ

Mainashree
Updated On : 19 Dec 2013, 10:56 am

ಕನ್ನಡಪ್ರಭ ವಾರ್ತೆ, ಗದಗ, ಡಿ. 18
ವೃತ್ತಿಶಿಕ್ಷಣ (ಸಿಇಟಿ) ಪ್ರವೇಶ 2006ರ ಕಾಯ್ದೆ ಅನುಷ್ಠಾನಕ್ಕೆ ವಿರೋಧಿಸಿ ಬುಧವಾರ ಎಬಿವಿಪಿ ಕಾರ್ಯಕರ್ತರು ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ಜರುಗಿಸಿ, ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಬಡ-ಪ್ರತಿಭಾವಂತ ವಿದ್ಯಾರ್ಥಿಗಳನ್ನು ವೃತ್ತಿ ಶಿಕ್ಷಣದಿಂದಾಗಿ ವಂಚಿತರನ್ನಾಗಿಸುವ ಹುನ್ನಾರದೊಂದಿಗೆ ರಾಜ್ಯ ಸರ್ಕಾರವು ಜಾರಿಗೊಳಿಸಲು ನಿರ್ಧರಿಸಿರುವ 2006ರ ಸಿಇಟಿ ಕಾಯ್ದೆಯನ್ನು ಎಬಿವಿಪಿ ತೀವ್ರ ವಿರೋಧಿಸುತ್ತದೆ. ದುರ್ಬಲ ವರ್ಗಗಳಿಗೆ ಸಾಮಾಜಿಕ ನ್ಯಾಯ ಒದಗಿಸಲು ವಿಫಲವಾಗುವ ಮತ್ತು ಅವರ ಶೈಕ್ಷಣಿಕ ಹಕ್ಕನ್ನು ಮೊಟಕುಗೊಳಿಸುವ ಸರ್ಕಾರದ ಈ ನೀತಿ ವಿದ್ಯಾರ್ಥಿ ಹಾಗೂ ಶೈಕ್ಷಣಿಕ ವಿರೋಧಿ ನೀತಿಯಾಗಿದೆ. ಸರ್ಕಾರವು ಜಾರಿಗೊಳಿಸಲು ಹೊರಟಿರುವ ಈ ಕಾಯ್ದೆಯಿಂದಾಗಿ ಪ್ರಸ್ತುತ ಸರ್ಕಾರಿ ಕೋಟಾದಲ್ಲಿದ್ದು, ಎಂಜಿನಿಯರಿಂಗ್ ಶೇ. 45, ದಂತ ವೈದ್ಯಕೀಯದ ಶೇ. 35 ಸೀಟುಗಳು ಖಾಸಗಿ ಶಿಕ್ಷಣ ಸಂಸ್ಥೆಗಳ ಪಾಲಾಗಿದ್ದು, ಯಾವುದೇ ಖಾಸಗಿ ಅನುದಾನರಹಿತ ಕಾಲೇಜಿನಲ್ಲಿ ಒಂದೂ ಸರ್ಕಾರಿ ಕೋಟಾದ ಸೀಟು ಇಲ್ಲದಂತಾಗಿದೆ. ತನ್ನ ಪಾಲಿನ ಸೀಟುಗಳಿಗಾಗಿ ಕಾಮೆಡ್-ಕೆ ನಡೆಸುವ ಪ್ರವೇಶ ಪರೀಕ್ಷೆಯ ಬಗ್ಗೆ ಈಗಾಗಲೇ ಹಲವಾರು ದೂರುಗಳಿದ್ದು, ಅಂತಹದರಲ್ಲಿ ಸರ್ಕಾರ ಉಳಿದ ಸೀಟು (ಸರ್ಕಾರಿ) ಸೀಟುಗಳಿಗೂ ಪರೀಕ್ಷೆ ನಡೆಸಲು ಕಾಮೆಡ್‌ಕೆಗೆ ಬಿಟ್ಟುಕೊಡುತ್ತಿರುವುದು ಖಂಡನೀಯ. ಅಲ್ಲದೇ ಇದರಿಂದ ಖಾಸಗಿ ಸಂಸ್ಥೆಗಳಿಗೆ ಬೇಕಾಬಿಟ್ಟಿ ಶುಲ್ಕ ವಸೂಲಿ ಮಾಡಲು ಅನುಕೂಲವಾಗುತ್ತದೆ. ಇದನ್ನು ತಡೆಯಲೆಂದೇ 2006ರ ಕಾಯ್ದೆ ಅನುಷ್ಠಾನ ತರುತ್ತಿರುವುದಾಗಿ ಸರ್ಕಾರ ಹೇಳುತ್ತಿದ್ದರೂ ಪರಿಣಾಮ ವ್ಯತಿರಿಕ್ತವಾಗಿಯೇ ಆಗುತ್ತದೆ. ಖಾಸಗಿ ವೈದ್ಯಕೀಯ, ದಂತ, ಎಂಜಿನಿಯರಿಂಗ್, ಯುನಾನಿ, ಆಯುರ್ವೇದ, ಯೋಗ, ನ್ಯಾಚಿರೋಪತಿ ಕಾಲೇಜ್‌ಗಳಲ್ಲಿನ ಸರ್ಕಾರಿ ಸೀಟುಗಳಿಗೆ ಪ್ರವೇಶ ಶುಲ್ಕ ಕುರಿತಂತೆ ಸರ್ಕಾರದ ಪೂರ್ಣ ನಿಯಂತ್ರಣ ತಪ್ಪಿ, ಖಾಸಗಿ ಆಡಳಿತ ಮಂಡಳಿಗೆ ಪರಮಾಧಿಕಾರ ಕೊಟ್ಟಂತಾಗುತ್ತದೆ. ಇತರೆ ರಾಜ್ಯಗಳ ವಿದ್ಯಾರ್ಥಿಗಳಿಗೂ ಹೆಚ್ಚಿನ ಸಂಖ್ಯೆಯಲ್ಲಿ ಕಾಮೆಡ್‌ಕೆ ಪ್ರವೇಶ ಬರೆಯುವುದರಿಂದ ಕರ್ನಾಟಕದ ವಿದ್ಯಾರ್ಥಿಗಳಿಗೆ ಸ್ಪರ್ಧೆ ಹೆಚ್ಚಾಗಿ ಅವರು ಸೀಟು ವಂಚಿತರಾಗುತ್ತಾರೆ ಎಂದು ಪ್ರತಿಭಟನಾಕಾರರು ದೂರಿದರು. ಬಡ, ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಲಿರುವ, ಸಾಮಾಜಿಕ ನ್ಯಾಯ ಕಿತ್ತುಕೊಳ್ಳುವ ಈ ವಿದ್ಯಾರ್ಥಿ ವಿರೋಧಿ ಕಾಯ್ದೆ ಎಬಿವಿಪಿ ಉಗ್ರವಾಗಿ ಖಂಡಿಸುತ್ತದೆ. ಕೂಡಲೇ ಈ ಕಾಯ್ದೆ ಹಿಂಪಡೆದು ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು ಇಲ್ಲದಿದ್ದರೆ ಹೋರಾಟ ಮುಂದುವರಿಯುವುದು ಎಂದರು. ನಗರದ ಕೆ.ವಿ.ಎಸ್.ಆರ್. ಕಾಲೇಜಿನಿಂದ ಪ್ರಾರಂಭವಾದ ಪ್ರತಿಭಟನೆ ಕೆ.ಸಿ. ರಾಣಿ ರಸ್ತೆಯ ಮೂಲಕ ಗಾಂಧಿ ವೃತ್ತಕ್ಕೆ ಆಗಮಿಸಿ, ಕೆಲಕಾಲ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿದರು. ನಂತರ ತಹಸೀಲ್ದಾರ್ ಕಚೇರಿಗೆ ತರಳಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ವಿಭಾಗ ಸಂಘಟನಾ ಕಾರ್ಯದರ್ಶಿ ಮಂಜುನಾಥ ಮೀಸಿ, ಮಾಂತೇಶ ಮಾಳಗಿಮನಿ, ಅನ್ನಪ್ಪ ಕೊಪ್ಪಳ, ಶಿಲ್ಪಾ ಬಂಡಿಹಾಳ, ಸುಮಾ ಕಮಿತ್ಕರ, ಮಂಜು ಮಾದವಣ್ಣನವರ, ಕಾರ್ತಿಕ ನವಲಗುಂದ, ಮೈಲಾರಪ್ಪ ಪುರದ, ಬಸವರಾಜ ತೆಗ್ಗಿ, ಯಲ್ಲಾಲಿಂಗ ಬಸರಿ, ಈರಣ್ಣ ನವಲಗುಂದ, ಸುನಿಲಕುಮಾರ ಮೂಲಿಮನಿ, ಶಿವಾನಂದ ಗೊಡಚಿ, ಕಿರಣ, ವಿಠ್ಠಲ, ರವಿ, ಉಮೇಶ, ಹನುಮಂತ, ವಿದ್ಯಾ, ಶಶಿಕಲಾ ಗುಡಿ, ರೇಖಾ, ಸುಜಾತಾ, ಅಣ್ಣಪ್ಪ, ಸುಮಾ, ದೀಪಾ, ಶ್ರುತಿ, ಭಾಗ್ಯಾ, ಗೀತಾ, ನೇತ್ರಾ, ವಿಜಯಲಕ್ಷ್ಮೀ, ರಾಘವೇಂದ್ರ, ಚಂದ್ರಶೇಖರ, ಪ್ರಕಾಶ ಮುಂತಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement