ಕುಡಿವ ನೀರಲ್ಲೂ ರಾಜಕೀಯ ಕರಿನೆರಳು
ಗಜೇಂದ್ರಗಡ: ಸದಾ ಒಂದಿಲ್ಲೊಂದು ವಿಘ್ನಗಳಿಗೆ ತುತ್ತಾಗುತ್ತಿರುವ ಗಜೇಂದ್ರಗಡ, ನರೇಗಲ್ಲ, ಸುತ್ತಲಿನ 7 ಹಳ್ಳಿಗಳಿಗೆ ಮಲಪ್ರಭಾ ನದಿ ನೀರು ಪೂರೈಕೆಯ ಶಾಶ್ವತ ಕುಡಿವ ನೀರು ಯೋಜನೆ ಈಗ ಕಾಂಗ್ರೆಸ್ ಮತ್ತು ಬಿಜೆಪಿ ಒಣಪ್ರತಿಷ್ಠೆಯ ಬಿಗಿ ನಿಲುವಿನ ಮಧ್ಯೆ ಸಿಲುಕಿ ನಲುಗುತ್ತಿದೆ.
ಇದರಿಂದಾಗಿ ಸರ್ಕಾರದ ಮಹತ್ವದ ಯೋಜನೆ ಜನಸೇವೆಗೆ ದೊರಕುವ ಮೊದಲೇ ಕವಲು ದಾರಿಯತ್ತ ಸಾಗಿದೆ. ರೋಣ ಕ್ಷೇತ್ರದ ಜನ ಬಿಜೆಪಿಯಿಂದ ಕಾಂಗ್ರೆಸ್ ಮಡಲಿಗೆ ಅಧಿಕಾರ ಹಸ್ತಾಂತರಿಸಿದ ನಂತರವಂತೂ ಯೋಜನೆ ಸಂಪೂರ್ಣ ಸ್ಥಗಿತಗೊಂಡಿದೆ.
ಗಜೇಂದ್ರಗಡ, ನರೇಗಲ್ಲ ಸೇರಿದಂತೆ ಸುತ್ತಲಿನ 7 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ರು. 115 ಕೋಟಿ ವೆಚ್ಚದಲ್ಲಿ ಮಲ್ಲಪ್ರಭಾ ನದಿ ನೀರನ್ನು ಜಿಗಳೂರು ಗ್ರಾಮ ಬಳಿ 310 ಎಕರೆ ವ್ಯಾಪ್ತಿಯಲ್ಲಿ ಕೆರೆ ನಿರ್ಮಿಸಿ, ಪೈಪ್ಲೈನ್ ಮೂಲಕ ನೀರು ಸರಬರಾಜು ಮಾಡುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ಆದರೆ, ಇದಕ್ಕೆ ರೋಣ ಪಟ್ಟಣವನ್ನು ಸೇರ್ಪಡೆ ಮಾಡುವ ವಿಷಯದಲ್ಲಂತೂ ಸಾಕಷ್ಟು ಗೊಂದಲ ಸೃಷ್ಟಿಯಾಗುತ್ತಿದ್ದು, ಈ ಗೊಂದಲದಲ್ಲಿ ಯೋಜನೆಯೇ ನೆಲಕಚ್ಚುವ ಸಾಧ್ಯತೆ ಇದೆ.
ರೋಣ ಸೇರ್ಪಡೆ ಬೇಡ್ವಂತೆ: ಗಜೇಂದ್ರಗಡ, ನರೇಗಲ್ಲ ಪಟ್ಟಣ ಹಾಗೂ ಮಾರ್ಗ ಮಧ್ಯದ ಹೊಸಳ್ಳಿ, ಸೂಡಿ, ರಾಜೂರ, ನಿಡಗುಂದಿ, ಜಕ್ಕಲಿ, ಬೂದಿಹಾಳ ಸೇರಿದಂತೆ 7 ಗ್ರಾಮಗಳಿಗೆ ಜಿಗಳೂರ ಗ್ರಾಮದ ಹೊರವಲಯದಲ್ಲಿ ಬೃಹತ್ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪ್ರಾರಂಭವಾಗಿತ್ತು. ಈ ಯೋಜನೆಯಲ್ಲಿ ರೋಣಕ್ಕೆ ಕುಡಿಯುವ ನೀರು ಪೂರೈಕೆ ಬೇಡವೇ ಬೇಡ ಎಂದು ಬಿಜೆಪಿ ಆಡಳಿತ ಹಿಡಿತದಲ್ಲಿರುವ ಗಜೇಂದ್ರಗಡ ಪುರಸಭೆ ಸದಸ್ಯರು ಅಭಿಪ್ರಾಯ ವ್ಯಕ್ತ ಪಡಿಸಿದ್ದು, ಮತ್ತಷ್ಟು ಸಮಸ್ಯೆಗೆ ಕಾರಣವಾಗಿದೆ.
ನೀರು ಕೊಡದಿದ್ದರೆ ಹೋರಾಟ: ಜಿಗಳೂರ ಗ್ರಾಮ ಬಳಿಯ ಕೆರೆಯಿಂದ ಕೇವಲ ಮೂರು ಕಿ.ಮೀ ಹತ್ತಿರದ ರೋಣಕ್ಕೂ ಇದೇ ಯೋಜನೆ ಮೂಲಕ ನೀರು ಸರಬರಾಜು ಮಾಡಲು ಯೋಜನೆಯಲ್ಲಿ ಸೇರ್ಪಡೆಯಾಗಬೇಕು. ಇರದಿದ್ದರೆ ಹೋರಾಟ ನಡೆಸುವುದಾಗಿ ಶಾಸಕ ಜಿ.ಎಸ್.ಪಾಟೀಲ ಹಾಗೂ ರೋಣ ಪುರಸಭೆಯ ಆಡಳಿತ ಮಂಡಳಿಯ ಸಾಮಾನ್ಯ ಸಭೆಯಲ್ಲಿ ಠರಾವು ಪಾಸು ಮಾಡಿ, ಮೇಲಧಿಕಾರಿಗಳಿಗೆ ಹಾಗೂ ಸರ್ಕಾರಕ್ಕೆ ಸಲ್ಲಿಸಿದ್ದು, ಮೇಲ್ನೋಟಕ್ಕೆ ಈ ಯೋಜನೆ ಎರಡೂ ಪಕ್ಷಗಳ ಜಿದ್ದಿಗೆ ಬಲಿಯಾಗುವ ಸಾಧ್ಯತೆ ನಿಚ್ಚಳವಾಗಿದೆ.
ರೋಣ ಕ್ಷೇತ್ರದ ಎಲ್ಲ ಸಮುದಾಯದ ಜನರ ಹಿತ ನನಗೆ ಮುಖ್ಯವಾಗಿದೆ. ಈ ಹಿನ್ನೆಲೆಯಿಂದ ಶಾಶ್ವತ ಕುಡಿಯುವ ನೀರು ಒದಗಿಸುವ ಯೋಜನೆಗೆ ರೋಣ ಭಾಗದ ರೈತರು ತಮ್ಮ ಫಲವತ್ತಾದ ಜಮೀನು ನೀಡಿದ್ದಾರೆ. ಈ ನಿಟ್ಟಿನಲ್ಲಿ ಗಜೇಂದ್ರಗಡ, ನರೇಗಲ್ಲ ಪಟ್ಟಣದ ಜತೆಗೆ ರೋಣ ಪಟ್ಟಣಕ್ಕೂ ಕುಡಿಯುವ ನೀರು ಒದಗಿಸಲಾಗುವುದು. ಯೋಜನೆ ಪುನರಾರಂಭಕ್ಕೆ ಸರ್ಕಾರದಿಂದ ರು. 40 ಕೋಟಿ ಅನುದಾನವೂ ಬಿಡುಗಡೆಯಾಗಿದೆ. ಇಂತಹ ಮಹತ್ವಾಕಾಂಕ್ಷಿ ಯೋಜನೆಯನ್ನು ರಾಜಕೀಯಕ್ಕಾಗಿ ವಿರೋಧಿಸುತ್ತಿರುವ ಬಿಜೆಪಿ ಮುಖಂಡರಿಗೆ ಜನ ತಕ್ಕಪಾಠ ಕಲಿಸುತ್ತಾರೆ.
- ಜಿ.ಎಸ್. ಪಾಟೀಲ, ರೋಣ ಶಾಸಕ
ರೋಣ ಪಟ್ಟಣಕ್ಕೆ ಮತ್ತೊಂದು ಯೋಜನೆ ರೂಪಿಸಿ, ಆ ಭಾಗದ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವುದರಲ್ಲಿ ನಮ್ಮದೇನೂ ಅಭ್ಯಂತರವಿಲ್ಲ. ಆದರೆ, ಗಜೇಂದ್ರಗಡ, ನರೇಗಲ್ಲ, ಸುತ್ತಲಿನ 7 ಹಳ್ಳಿಗಳಿಗೆ ಮಲಪ್ರಭಾ ನದಿ ನೀರು ಪೂರೈಕೆಯ ಶಾಶ್ವತ ಕುಡಿಯುವ ನೀರು ಯೋಜನೆಯಲ್ಲಿ ರೋಣ ಸೇರ್ಪಡೆಗೆ ನಮ್ಮ ವಿರೋಧವಿದೆ. ಮೊದಲಿನ ಯೋಜನೆಯಂತೆ ಕಾಮಗಾರಿ ನಡೆಯಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯ.
- ಸಿದ್ಧಪ್ಪ ಬಂಡಿ, ಗಜೇಂದ್ರಗಡ ಪುರಸಭೆ ಸದಸ್ಯ
ಡಿ.ಜಿ. ಮೋಮಿನ್