ಗುಣಮಟ್ಟದ ಕಾಮಗಾರಿಗೆ ಆಗ್ರಹಿಸಿ ಮನವಿ
ಲಕ್ಷ್ಮೇಶ್ವರ: ಕುಡಿಯುವ ನೀರಿನ ಪೈಪ್ಗಳು ಒಡೆದು, ನೀರು ಸೋರಿಕೆಯಾಗುವುದರಿಂದ ಬಜಾರ್ ರಸ್ತೆಯ ಡಾಂಬರೀಕರಣ ಕಾಮಗಾರಿಯು ಹಾಳಾಗಿ ಹೋಗುತ್ತದೆ. ಅದಕ್ಕಾಗಿ ನೀರು ಪೂರೈಕೆಯ ಪೈಪ್ಗಳ ದುರಸ್ತಿ ಮಾಡಿ ನಂತರ ಡಾಂಬರೀಕರಣ ಮಾಡಬೇಕೆಂದು ಪಟ್ಟಣದ ಯಲ್ಲಮ್ಮನ ದೇವಸ್ಥಾನದ ಹತ್ತಿರದ ನಿವಾಸಿಗಳು ಮಂಗಳವಾರ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಯಲ್ಲಮದೇವಿ ದೇವಸ್ಥಾನದ ಹತ್ತಿರ ಆಗಮಿಸಿದ ಪುರಸಭೆಯ ಅಧ್ಯಕ್ಷೆ ಗಂಗಮ್ಮ ಫಕ್ಕಿರಸ್ವಾಮಿಮಠ ಹಾಗೂ ಉಪಾಧ್ಯಕ್ಷ ಎಂ.ಆರ್. ಪಾಟೀಲ ಸಾರ್ವಜನಿಕರೊಂದಿಗೆ ಚರ್ಚಿಸಿ, ಕಾಮಗಾರಿಗೆ ಮತ್ತೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಆರ್. ಪಾಟೀಲ ಪಟ್ಟಣದ ಹಲವು ಕಡೆಗಳಲ್ಲಿ ಕುಡಿಯುವ ನೀರಿನ ಪೈಪ್ಗಳು ಒಡೆದು ಹೋಗಿದ್ದವು. ಈಗ ಅವುಗಳನ್ನು ದುರಸ್ತಿ ಮಾಡಿಸಿ ಡಾಂಬರೀಕರಣ ಕಾಮಗಾರಿಯನ್ನು ಮಾಡಲಾಗುತ್ತಿದೆ. ಅಲ್ಲದೆ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದದ್ದ ಬಜಾರ್ ರಸ್ತೆಯ ಡಾಂಬರೀಕಣ ಕಾಮಗಾರಿ ನಡೆಯುವಲ್ಲಿ ಆದ್ಯತೆ ನೀಡಿದ್ದೇವೆ. ಅಲ್ಲದೆ ಬಜಾರ್ ರಸ್ತೆ ಕಾಮಗಾರಿಯು ಗುಣಮಟ್ಟದಿಂದ ಕೂಡಿದೆ ಎಂದು ಹೇಳಿದರು.
ಮಾಜಿ ಅಧ್ಯಕ್ಷ ವಿ.ಜಿ. ಪಡಗೇರಿ, ಜಯಕ್ಕ ಕಳ್ಳಿ, ಸದಸ್ಯ ಗುರು ಮೆಡ್ಲೇರಿ, ಮಹೇಶ ಹೊಗೆಸೊಪ್ಪಿನ, ಲೆಂಕೆಪ್ಪ ಸೆರಸೂರಿ, ಶಂಕ್ರಮ್ಮ ಕರಡಿ, ಗಂಗಾಧರ ಮ್ಯಾಗೇರಿ, ರಾಮಣ್ಣ ರಿತ್ತಿ, ನಾಗಪ್ಪ ಓಂಕಾರಿ, ಅನಿಲಕುಮಾರ್ ಮುಳಗುಂದ ಮೊದಲಾದವರು ಹಾಜರಿದ್ದರು.