ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಜಿಪಂ ಅಧ್ಯಕ್ಷ ಪಟ್ಟ ಯಾರಿಗೆ?

Mainashree
Updated On : 19 Dec 2013, 10:56 am

ಕನ್ನಡಪ್ರಭ ವಾರ್ತೆ, ಗದಗ, ಡಿ. 18
ಗದಗ ಜಿಪಂ ಇತಿಹಾಸದಲ್ಲಿ ಮೊದಲ ಬಾರಿಗೆ ಸ್ಪಷ್ಟ ಬಹುಮತದಿಂದ ಅಧಿಕಾರದಲ್ಲಿ ಬಿಜೆಪಿ ತನ್ನ 2ನೇ ಅವಧಿಯ ಅಧ್ಯಕ್ಷರ ಆಯ್ಕೆಯ ವಿಷಯದಲ್ಲಿ ಹತ್ತಾರು ಸಮಸ್ಯೆ ತಾನೇ ಸೃಷ್ಟಿಸಿಕೊಂಡು, ಈ ಹಿಂದಿನ ಅಧ್ಯಕ್ಷರ ವರ್ತನೆ ಹಾಗೂ ಪಕ್ಷದ ನಿರ್ಧಾರದಂತೆ ಅವರು ರಾಜಿನಾಮೆ ಸಲ್ಲಿಸದೇ ಇದ್ದಾಗ, ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಾಡಿ, ವಿಪ್ ಉಲ್ಲಂಘನೆ ಮಾಡಿರುವ ಬಗ್ಗೆ ಚುನಾವಣಾ ಆಯೋಗಕ್ಕೂ ದೂರು ನೀಡಿತ್ತು. ಇದೆಲ್ಲದರ ಮಧ್ಯೆ ಡಿ. 20ರಂದು ಮತ್ತೆ ಅಧ್ಯಕ್ಷರ ಆಯ್ಕೆ ನಡೆಯುತ್ತಿದ್ದು ಹಲವು ಕುತೂಹಲಕ್ಕೆ ಕಾರಣವಾಗಿದೆ.
ಗದಗ ಜಿಪಂ ಒಟ್ಟು 18 ಸ್ಥಾನಗಳನ್ನು ಹೊಂದಿದ್ದು, ಈ ಮೊದಲು 11 ಸ್ಥಾನಗಳನ್ನು ಪಡೆದು ಬಿಜೆಪಿ ಅಧಿಕಾರದ ಸ್ಪಷ್ಟ ಬಹುಮತ ಹೊಂದಿತ್ತು. 7 ಸ್ಥಾನಗಳನ್ನು ಪಡೆದಿದ್ದ ಕಾಂಗ್ರೆಸ್ ಪ್ರಬಲ ವಿರೋಧ ಪಕ್ಷವಾಗಿತ್ತು. 2013ರಲ್ಲಿ ಬಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ಹಮ್ಮಿಗಿ ಜಿಪಂ ಕ್ಷೇತ್ರದ ಸದಸ್ಯ ಹೇಮಗಿರೀಶ ಹಾವಿನಾಳ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ, ಜೆಡಿಎಸ್‌ನಿಂದ ಸ್ಪರ್ಧಿಸಿ ಸೋತರು. ನಂತರ ಬಿಜೆಪಿಗೆ ಸೇರ್ಪಡೆಯಾಗಿ ಮತ್ತೆ ಹಮ್ಮಿಗಿ ಜಿಪಂ ಕ್ಷೇತ್ರದಿಂದ ಸ್ಪರ್ಧಿಸಿ ಗೆಲವು ಸಾಧಿಸಿದ್ದು, ಈಗ 12 ಸ್ಥಾನಗಳನ್ನು ಬಿಜೆಪಿ ಹೊಂದಿದೆ.
ಅಧ್ಯಕ್ಷಗಿರಿಗೆ ತೀವ್ರ ಪೈಪೋಟಿ: ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವುದರಿಂದ ತೀವ್ರ ಪೈಪೋಟಿ ಏರ್ಪಟ್ಟಿದೆ. ಅದರಲ್ಲಿಯೂ ಹಮ್ಮಿಗಿ ಕ್ಷೇತ್ರದಿಂದ ಈಗಷ್ಟೇ ಆಯ್ಕೆಯಾಗಿ, 2013ರ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಬಿಜೆಪಿಗೆ ಆದ ಮುಖಭಂಗವನ್ನು ಕೊಂಚ ಮರೆಯುವಂತೆ ಮಾಡಿರುವ ಯವ ಸದಸ್ಯ ಹೇಮಗಿರೀಶ ಹಾವಿನಾಳ ಹಾಗೂ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದ ಇಲ್ಲಿಯವರೆಗೂ ಜಿಪಂ ಶಿಕ್ಷಣ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ಎಂ.ಎಸ್.ದೊಡ್ಡಗೌಡ್ರ ಅವರ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ. ಇನ್ನುಳಿದ ಎಲ್ಲ ಬಿಜೆಪಿ ಸದಸ್ಯರೂ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವುದು ವಿಶೇಷ.
ಪ್ರಯತ್ನ ಬಲು ಜೋರು: ಶತಾಯಗತಾಯ ಅಧ್ಯಕ್ಷರಾಗಬೇಕು ಎನ್ನುವವರು ಈಗಾಗಲೇ ಹೆಚ್ಚಿನ ಪ್ರಯತ್ನ ನಡೆಸಿದ್ದು, ಅದರಲ್ಲಿಯೂ ಹೇಮಗಿರೀಶ ಹಾವಿನಾಳ ಹಾಗೂ ಎಂ.ಎಸ್. ದೊಡ್ಡಗೌಡ್ರ ಪಕ್ಷದ ವರಿಷ್ಠರು ಸೇರಿದಂತೆ ಜಿಲ್ಲೆಯ ಎಲ್ಲ ಶಾಸಕರು ಮತ್ತು ಇಬ್ಬರೂ ಸಂಸದರ ಶಿಫಾರಸು ಪಡೆಯಲು ಪ್ರಯತ್ನ ನಡೆಸಿದ್ದಾರೆ. ಈಗಾಗಲೇ ಜಿಪಂ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಅಧಿಕಾರ ಅನುಭವಿಸಿರುವ ದೊಡ್ಡಗೌಡ್ರಗಿಂತ ಹೇಮಗಿರೀಶ ಕಾಂಗ್ರೆಸ್ ಪಕ್ಷದ ಆಡಳಿತಪರ ಅಲೆಯಲ್ಲಿಯೇ, ಜಿಲ್ಲೆಯಲ್ಲಿ ಮತ್ತೆ ಬಿಜೆಪಿಗೆ ಇನ್ನೊಂದು ಸ್ಥಾನ ಕಲ್ಪಿಸಿದ್ದಾರೆ. ಅವರು ಅಧ್ಯಕ್ಷರಾದರೆ ಅನುಕೂಲ ಎನ್ನುವ ಭಾವನೆ ಹೊಂದಿದ್ದಾರೆ ಎಂದು ಬಿಜೆಪಿ ಮೂಲಗಳ ಮಾಹಿತಿಯಾಗಿದೆ. ಆದರೆ, ಇಬ್ಬರ ಪ್ರಯತ್ನವೂ ಜೋರಾಗಿಯೇ ನಡೆಯುತ್ತಿರುವುದು ವಾಸ್ತವ.
ಪಕ್ಷದ ವರಿಷ್ಠರ ಸೂಚನೆ: ಈಗಾಗಲೇ 2ನೇ ಅವಧಿಯ ಅಧ್ಯಕ್ಷರ ಆಯ್ಕೆಯ ವಿಷಯದಲ್ಲಿ ಗೊಂದಲ ಉಂಟಾಗಿ, ಹಿಂದಿನ ಅಧ್ಯಕ್ಷ ಎಂ.ಎಸ್. ಪಾಟೀಲ ಹಾಗೂ ಪಕ್ಷದ ಮುಖಂಡರಲ್ಲಿ ಸ್ವಲ್ಪಮಟ್ಟಿನ ಭಿನ್ನಾಭಿಪ್ರಾಯಕ್ಕೂ ಕಾರಣವಾಗಿತ್ತು. ನಂತರ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ ನಂತರ ಈಗ ಆಯ್ಕೆ ನಡೆಯುತ್ತಿದ್ದು, ಪಕ್ಷದ ವರಿಷ್ಠರು ಯಾರನ್ನು ಅಧ್ಯಕ್ಷರು ಎಂದು ಸೂಚಿಸುತ್ತಾರೆ ಅವರು, ಅಧ್ಯಕ್ಷರಾಗಿ ಮಾತ್ರವಲ್ಲ ಜಿಲ್ಲೆಯಲ್ಲಿ ಬಿಜೆಪಿಯನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗೆಲುವಿನತ್ತ ತೆಗೆದುಕೊಂಡು ಹೋಗಲು ಶ್ರಮಿಸಬೇಕು ಎನ್ನುವ ಸೂಚನೆಯನ್ನು ಪಕ್ಷದ ವರಿಷ್ಠರು ರವಾನಿಸಿದ್ದಾರೆ ಎನ್ನುವುದನ್ನು ಪಕ್ಷದ ಮೂಲಗಳು ಖಚಿತ ಪಡಿಸುತ್ತಿವೆ.

ಶಿವಕುಮಾರ ಕುಷ್ಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement