ಸಂತ ಸೇವಾಲಾಲರ ಪುರಾಣ ರಚನೆಗೆ ಶ್ರೀಮಠದಿಂದ ನೆರವು: ತೋಂಟದ ಶ್ರೀ
ಗದಗ: ಲಂಬಾಣಿ ಜನಾಂಗದ ಧರ್ಮಗುರು ಸಂತ ಸೇವಾಲಾಲರ ಜೀವನ ತತ್ವ ಸಿದ್ಧಾಂತಗಳನ್ನು ಪ್ರಚುರಪಡಿಸಲು ಸಂತಸೇವಾಲಾಲರ ಪುರಾಣ ರಚನೆಯಾಗಬೇಕು. ಈ ಕಾರ್ಯಕ್ಕೆ ಶ್ರೀಮಠ ಅಗತ್ಯ ನೆರವು ನೀಡಲಿದೆ ಎಂದು ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳು ಹೇಳಿದರು.
ಅವರು ಈಚೆಗೆ ನಗರದ ಜ. ತೋಂಟದಾರ್ಯ ಮಠದಲ್ಲಿ ನಡೆದ 2150 ನೇ ಶಿವಾನುಭವದಲ್ಲಿ ಶಿರಸಿಯ ಡಾ. ಕೆ.ಬಿ. ಪವಾರ ಅವರು ಬರೆದ ರವೀಂದ್ರನಾಥ ಟ್ಯಾಗೋರ ಅವರ ಗೀತಾಂಜಲಿ ಕೃತಿಯ ಲಂಬಾಣಿ ಭಾಷೆಯ ಭಾವರೂಪಾಂತರ ಅನುವಾದಿತ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಈಗಾಗಲೇ ಮಠದಿಂದ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಪುರಾಣ ರಚನೆಯಾಗಿದೆ. ಅದೇ ರೀತಿಯಲ್ಲಿ ಲಂಬಾಣಿ ಜನಾಂಗದ ಸಂತ ಸೇವಾಲಾಲರ ಬದುಕು ಪುರಾಣವಾಗಿ ರಚನೆಗೊಳ್ಳಬೇಕು. ಲೇಖಕರು ನಿವೃತ್ತ ಶಸ್ತ್ರಚಿಕಿತ್ಸಕ ಡಾ. ಪವಾರ ಸೇವಾಲಾಲ ಪುರಾಣ ರಚನೆಗೆ ಮುಂದಾಗಬೇಕು. ಇದಕ್ಕೆ ಶ್ರೀಮಠದಿಂದ ಅಗತ್ಯ ನೆರವು ಕಲ್ಪಿಸಲಾಗುವುದು ಎಂದರು. ಸಾಹಿತಿ ಪ್ರೊ. ದರಣೇಂದ್ರ ಕುರಕುರಿ, ಕರ್ನಾಟಕ ಜಾನಪದ ವಿವಿ ಕುಲಸಚಿವ ಡಾ. ಡಿ.ಬಿ. ನಾಯಕ, ಡಾ. ಎಸ್.ಕೆ. ಪವಾರ ಮಾತನಾಡಿದರು. ಇದೇ ಸಂದರ್ಭದಲ್ಲಿ ಕೃತಿ ರಚನೆಕಾರ ಡಾ. ಕೆ.ಬಿ. ಪವಾರ ದಂಪತಿಯನ್ನು ಶ್ರೀಗಳು ಸನ್ಮಾನಿಸಿದರು. ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಪ್ರಕಾಶ ಕರಿಸೋಮನಗೌಡ್ರ, ಉಪಾಧ್ಯಕ್ಷ ಮೃತ್ಯುಂಜಯ ಸಂಕೇಶ್ವರ, ಶಿವಲೀಲಾ ಕುರಡಗಿ, ಗೌರವ ಕಾರ್ಯದರ್ಶಿ ವೀರಣ್ಣ ಹೊನಗಣ್ಣವರ, ಸಹಕಾರ್ಯದರ್ಶಿ ಗುರುಬಸವಲಿಂಗ ತಡಸದ, ಕೋಶಾಧ್ಯಕ್ಷ ಪ್ರಭಯ್ಯ ಹಿರೇಮಠ ಮುಂತಾದವರು ಉಪಸ್ಥಿತರಿದ್ದರು. ಶಿವಾನುಭವ ಸಮಿತಿ ಚೇರ್ಮನ್ ಎಸ್.ಎನ್. ಆದಿ ಸ್ವಾಗತಿಸಿದರು. ಡಿ.ವಿ. ನಾಯಕ ನಿರೂಪಿಸಿದರು.