ಸುದ್ದಿ ಸಂಕ್ಷೇಪ
ಬ್ಯಾಂಕ್ ಮುಷ್ಕರ: ಗ್ರಾಹಕರ ಪರದಾಟ
ಲಕ್ಷ್ಮೇಶ್ವರ: ಅಖಿಲ ಭಾರತ ಬ್ಯಾಂಕ್ ಒಕ್ಕೂಟ ನೀಡಿದ್ದ ಬಂದ್ ಕರೆಗೆ ಓಗೊಟ್ಟ ಪಟ್ಟಣದ ಬ್ಯಾಂಕಿನ ಸಿಬ್ಬಂದಿ ಬುಧವಾರ ಬ್ಯಾಂಕ್ಗಳಿಗೆ ಬೀಗ ಹಾಕಿ ಮುಷ್ಕರದಲ್ಲಿ ಪಾಲ್ಗೊಂಡಿದ್ದರು. ಇದರಿಂದಾಗಿ ಪಟ್ಟಣದ ಹಾಗೂ ಗ್ರಾಮೀಣ ಭಾಗದ ಜನತೆ ಪರದಾಡುವಂತಾಗಿತ್ತು. ಮುಷ್ಕರದ ಬಗ್ಗೆ ಬೇಸರ ವ್ಯಕ್ತಪಡಿಸಿದ ವರ್ತಕ ವಧರ್ಮಮಾನ ಮಿಣಜಗಿ, ಬ್ಯಾಂಕ್ ನೌಕರ ವರ್ಗವು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ಮಾಡುವುದು ಸರಿಯಾದ ಕ್ರಮವಾಗಿದೆ. ಆದರೆ ಬ್ಯಾಂಕಿನ ಜೀವಾಳವಾಗಿರುವ ಗ್ರಾಹಕರ ಹಿತಾಸಕ್ತಿ ಮರೆತು ಬ್ಯಾಂಕ್ಗಳಿಗೆ ಬೀಗ ಜಡಿದು, ಬ್ಯಾಂಕ್ ಬಂದ್ ಮಾಡಿ ಪ್ರತಿಭಟನೆ ಮಾಡುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು. ಇಂದು ಬ್ಯಾಂಕ್ಗಳು ಗ್ರಾಹಕರ ವಿಶ್ವಾಸಿಕ ಸಂಸ್ಥೆಗಳಾಗಿ ಕೆಲಸ ಮಾಡುತ್ತಿವೆ. ಈಗ ಅವುಗಳು ಹೀಗೆ ಬೇಕಾಬಿಟ್ಟಿಯಾಗಿ ವರ್ತನೆ ಮಾಡುತ್ತಿರುವುದು ಸರಿಯಲ್ಲ. ಇದರಿಂದ ಬ್ಯಾಂಕ್ನಲ್ಲಿ ಪ್ರತಿನಿತ್ಯ ವ್ಯವಹರಿಸುವ ಗ್ರಾಹಕರ ಸ್ಥಿತಿ ಏನಾಗಬಹುದು ಎಂಬುದನ್ನು ಊಹಿಸಿಕೊಳ್ಳದೇ ಬ್ಯಾಂಕ್ ಬಂದ್ ಮಾಡಿದ್ದು ಸರಿಯಾದ ಕ್ರಮವಲ್ಲ ಎಂದರು.
ಮರಳು ವ್ಯವಸ್ಥೆ ಕಲ್ಪಿಸಲು ಆಗ್ರಹಿಸಿ ಪ್ರತಿಭಟನೆ
ಹಿರೇಕೆರೂರು: ಲೋಕೋಪಯೋಗಿ ಗುತ್ತಿಗೆದಾರರ ಸಂಘ ಮತ್ತು ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ಮರಳು ವ್ಯವಸ್ಥೆಯನ್ನು ಕಲ್ಪಿಸುವಂತೆ ಆಗ್ರಹಿಸಿ ಪಟ್ಟಣದ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು. ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್.ಎನ್. ಗಂಗೋಳ ಮಾತನಾಡಿ, ತಾಲೂಕಿನ ಗಡಿಭಾಗದಲ್ಲಿ ಹರಿದು ಹೋಗಿರುವ ತುಂಗಭದ್ರಾ ನದಿಯಿಂದ ಮಾತ್ರ ತಾಲೂಕಿನ ಅಭಿವೃದ್ಧಿ ಕಾರ್ಯಗಳಿಗೆ ಮರಳು ಲಭ್ಯವಾಗುತ್ತಿದೆ. ಮರಳು ತರಲು ಸಾಧ್ಯವಾಗದೆ ಕಳೆದ 6 ತಿಂಗಳಿನಿಂದ ಗುತ್ತಿಗೆದಾರರು, ಕಟ್ಟಡಕಾರ್ಮಿಕರು ಬಡ ಜನತೆ ಮತ್ತು ರೈತಾಪಿ ವರ್ಗದವರಿಗೆ ಮರಳು ಸಿಗದೆ ಕಟ್ಟಗಳ ಕಾರ್ಯ ಸ್ಥಗಿತಗೊಂಡಿದೆ. ಇದರಿಂದ ಎಲ್ಲರಿಗೂ ತೀವ್ರ ತೊಂದರೆಯಾಗಿದೆ. ಮರಳು ಸಿಗದೆ ಪರಿಸ್ಥಿತಿ ಈ ರೀತಿ ಇದ್ದರೂ ಸಹ ಸರ್ಕಾರ ಹೊಸದಾಗಿ 30 ಸಿಮೆಂಟ್ ಕಾರ್ಖಾನೆಗಳಿಗೆ ಅನುಮತಿ ನೀಡಿರುವುದು ವಿಪರ್ಯಾಸದ ಸಂಗತಿಯಾಗಿದೆ. ಗುತ್ತಿಗೆದಾರರು ಮನೆ ಕಟ್ಟುವಂಥವರಿಗೆ ಮತ್ತು ದೇವಸ್ಥಾನದ ಕಟ್ಟಡಕಟ್ಟುವ ಕೆಲಸಗಳು ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಬಡ ಕೂಲಿ ಕಾರ್ಮಿಕರು ದೈನಂದಿನ ಜೀವನ ನಡೆಸುವುದು ದುಸ್ತರವಾಗಿದೆ. ತಕ್ಷಣ ಮರಳು ನೀತಿ ಜಾರಿಗೆ ತರಬೇಕೆಂದು ಆಗ್ರಹಿಸಿದರು. ಮನವಿಯನ್ನು ತಹಸೀಲ್ದಾರ್ ಟಿ.ಬಿ. ಹೊಸೂರ ಅವರಿಗೆ ಸಲ್ಲಿಸಿದರು. ಗುತ್ತಿಗೆದಾರರಾದ ಸಂಘದ ಕೋಶಾಧ್ಯಕ್ಷ ಪ್ರಕಾಶ ಜಿ.ಪಿ, ಪ್ರಥಮ ದರ್ಜೆ ಗುತ್ತಿಗೆದಾರ ಎಲ್.ಎಸ್. ಚಪ್ಪರದಳ್ಳಿ ಮಾತನಾಡಿದರು. ಗುತ್ತಿಗೆದಾರರಾದ ವೆಂಕಟೇಶ ಉಪ್ಪಾರ, ರವಿ ಸಿದ್ದಪ್ಪಗೌಡ್ರ, ಎಚ್.ಮೌನೇಶ, ಎಂ.ಬಿ. ಬಲಮುರಿ, ರವಿ ಪುಟ್ಟಪ್ಪಗೌಡ್ರ, ರವಿ ಚಿಂದಿ, ಅಬ್ದುಲ್ ಖಾದರ ಲೋಹಾರ, ದಾದಪೀರ ಬ್ಯಾಡಗಿ, ಅಯೂಬ ಖಾನ ಪಠಾಣ ಹಾಗೂ ಕಟ್ಟಡ ಕಾರ್ಮಿಕರು ಪಾಲ್ಗೊಂಡಿದ್ದರು.