ಅವ್ಯವಹಾರ ಆರೋಪ: ಹಾಲಿನ ಕೇಂದ್ರಕ್ಕೆ ಬೀಗ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಡಿ. 19
ಸಮೀಪದ ಗೋಗೇರಿ ಗ್ರಾಮ ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯದರ್ಶಿ ಹಾಲಿನ ಲಕ್ಷಾಂತರ ಹಣ ರೈತರಿಗೆ ಮರು ಪಾವತಿಸದೆ ಗೋಲ್ಮಾಲ್ ಮಾಡಿದ್ದಾರೆ. ಈ ಕುರಿತು ಶೀಘ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಆಡಳಿತ ಮಂಡಳಿ ಅಧ್ಯಕ್ಷ, ಕಾರ್ಯದರ್ಶಿ ಸಹಿತ ಸದಸ್ಯರನ್ನು ಹಾಲಿನ ಕೇಂದ್ರ ಒಳಗೆ ಕೂಡಿ ಹಾಕಿ ಬೀಗ ಜಡಿದು ಗುರುವಾರ ದಿಢೀರ್ ಪ್ರತಿಭಟನೆ ನಡೆಸಿದರು.
ಹಾಲು ಉತ್ಪಾದಕ ಒಕ್ಕೂಟಕ್ಕೆ ಗ್ರಾಮ ಕೇಂದ್ರದಿಂದ ನಿತ್ಯ ಸಾವಿರದಿಂದ ಸಾವಿರದ ಎರಡುನೂರು ಲೀಟರ್ ಹಾಲು ರವಾನಿಸಲಾಗುತ್ತಿದೆ. 40 ದಿನದಿಂದ 300 ರೈತ ಸದಸ್ಯರಿಗೆ ಅಂದಾಜು ರು. 6.5 ಲಕ್ಷ ಹಾಲಿನ ಹಣ ಮರುಪಾವತಿ ಮಾಡಿದೆ ಕಾರ್ಯದರ್ಶಿ ಬಸವರಾಜ ಸೋಂಪುರ ಸತಾಯಿಸುತ್ತಿದ್ದಾರೆ. ಆಡಳಿತ ಮಂಡಳಿಗೆ ಸರಿಯಾಗಿ ಲೆಕ್ಕ ತೋರಿಸದೆ ಲಕ್ಷಾಂತರ ಹಣ ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿದರು.
ಗೋಗೇರಿ ಗ್ರಾಮ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಒಟ್ಟು ವಹಿವಾಟಿನಲ್ಲಿ ರು. 3.29 ಲಕ್ಷ ಲಾಭ ಆಗಿರುವ ಬಗ್ಗೆ ಸಭೆಯಲ್ಲಿ ಕಾರ್ಯದರ್ಶಿ ಬಸವರಾಜ ಸೋಂಪುರ ಮಾಹಿತಿ ನೀಡಿದ್ದಾರೆ. ಈ ಹಣ ಎಲ್ಲಿ ಹೋಯಿತು ಎಂಬುದು ತಿಳಿಯದಾಗಿದೆ. ಜತೆಗೆ ರೈತರಿಗೆ ರು. 6.5 ಲಕ್ಷ ಕೊಡಬೇಕಿದೆ. ಆದರೆ ಬ್ಯಾಂಕ್ ಖಾತೆಯಲ್ಲಿ ರು. 2.3 ಲಕ್ಷ ಮಾತ್ರ ಇದೆ. ಉಳಿದ ಹಣ ಏನು ಮಾಡಿದ್ದಾನೆ ಎಂಬುದು ತಿಳಿಯದಾಗಿದೆ. ಹೀಗಾಗಿ ಊರಿನ ಎಲ್ಲ ಜನ ಸೇರಿ ತಮ್ಮನ್ನು ಕೇಂದ್ರದಲ್ಲಿ ಕೂಡಿ ಹಾಕಿದ್ದಾರೆ. ಅವರು ಕೇಳುವದು ನ್ಯಾಯಸಮ್ಮತವಾಗಿದೆ ಎಂದು ಗೋಗೇರಿ ಹಾಲು ಉತ್ಪಾದಕರ ಸಂಘ ಅಧ್ಯಕ್ಷ ಜಿ.ಎನ್. ಗಾರಗಿ ತಿಳಿಸಿದರು.
ಹಾಲಿನ ಹಣ ಕೊಡುವ ಬಗ್ಗೆ ಕಾರ್ಯದರ್ಶಿಯನ್ನು ಕೇಳಿದಾಗ ಪಿಟ್ಸ್ ರೋಗ ಬಂದ ಹಾಗೆ ನಾಟಕ ಮಾಡುತ್ತಾರೆ. ಇನ್ನೂ ಕೆಲವರಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕುವುದಲ್ಲದೆ, ನನ್ನ ತಂಟೆಗೆ ಬಂದರೆ ಒಂದು ಕೈ ನೋಡ್ಕೋಂತಿನಿ ಅಂತ ದಮ್ಕಿ ಹಾಕುತ್ತಾರೆ ಎಂದು ಹನುಮಪ್ಪ ಕೊಡಕೇರಿ, ಹನುಮಪ್ಪ ಹೊರಪೇಟಿ, ಶಿವಪ್ಪ ಗಾರಗಿ, ಶಂಬಣ್ಣ ಗಾರಗಿ, ಕಾಟೆಪ್ಪ ಮಾದರ, ಮಾರ್ತಾಂಡಪ್ಪ ಹದ್ದಣ್ಣವರ, ಬಸನಗೌಡ ಪಾಟೀಲ, ಹನುಮಪ್ಪ ಗಾರಗಿ, ಮಲ್ಲಪ್ಪ ಗುಂಡೆ, ಖಾಜೇಸಾಬ್ ಗಡಾದ ಅಳಲು ತೋಡಿಕೊಂಡರು. ಈ ಮಧ್ಯೆ ರೈತರು ಅಧ್ಯಕ್ಷ ಉಪಾಧ್ಯಕ್ಷ, ಕಾರ್ಯದರ್ಶಿ ಸೇರಿದಂತೆ ಆಡಳಿತ ಮಂಡಳಿ ಎಲ್ಲ ಸದಸ್ಯರನ್ನು ಬೆಳಗ್ಗೆ 8 ಗಂಟೆಯಿಂದ ಕೂಡಿ ಹಾಕಿ ಸಂಜೆ 6 ಗಂಟೆವರೆಗೂ ಪ್ರತಿಭಟನೆ ಮುಂದುವರಿಸಿದ್ದರು.