ಅಲ್ಪಸಂಖ್ಯಾತರು ತಮ್ಮ ಹಕ್ಕು ಪಡೆಯಲಿ
ಗದಗ: ಅಲ್ಪಸಂಖ್ಯಾತರು ಶೈಕ್ಷಣಿಕವಾಗಿ ಮುಂದುವರಿದು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂದು ಗದುಗಿನ ಮುಸ್ಲಿಂ ಸಮಾಜದ ಧರ್ಮಗುರು ಮೌಲಾನಾ ಇನಾಯತ್ ಉಲ್ಲಾ ಕರೆ ನೀಡಿದರು.
ರಾಜ್ಯ ಮುಸ್ಲಿಂ ಜಾಗ್ರತ ವೇದಿಕೆಯಿಂದ ವೇದಿಕೆ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಅಲ್ಪಸಂಖ್ಯಾತರ ಹಕ್ಕುಗಳ ದಿನಾಚರಣೆ ಕಾರ್ಯಕ್ರಮದ ಸಮ್ಮುಖ ವಹಿಸಿ ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಅಲ್ಪಸಂಖ್ಯಾತರಲ್ಲಿರುವ ಜೈನ್ ಮತ್ತು ಕ್ರೈಸ್ತ್ ಸಮಾಜದವರು ಶೈಕ್ಷಣಿಕವಾಗಿ ಮುಂದುವರಿದು ಅಭಿವೃದ್ಧಿ ಹೊಂದುತ್ತಿದ್ದು, ಮುಸ್ಲಿಂ ಸಮುದಾಯದ ಅಲ್ಪಸಂಖ್ಯಾತರೂ ಕೂಡ ಶಿಕ್ಷಣದೊಂದಿಗೆ ಸರ್ಕಾರದ ಸವಲತ್ತುಗಳನ್ನು ಪಡೆದು ಅಭಿವೃದ್ಧಿ ಹೊಂದಬೇಕು. ನಾವು ಗುರಿ ಸಾಧಿಸಬೇಕಾದರೆ ಸೃಷ್ಟಿಕರ್ತನ ಆದೇಶದಂತೆ ಪರಿಶ್ರಮಪಟ್ಟು ದುಡಿದು ಮುಂದುವರಿಯಬೇಕಾಗಿದೆ ಎಂದರು.
ಕ್ರಿಶ್ಚಿಯನ್ ಧರ್ಮಗುರು ಫಾನ್ಸಿಸ್ ಪಾದ್ರಿಯವರು ಮಾತನಾಡಿ, ಅಲ್ಪಸಂಖ್ಯಾತರಲ್ಲಿರುವ ಪ್ರಗತಿಪರ ಚಿಂತಕರು ಅವಿದ್ಯಾವಂತರಿಗೆ ಸರ್ಕಾರದ ಸವಲತ್ತುಗಳ ಬಗ್ಗೆ, ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ತಿಳಿವಳಿಕೆ ಕೊಡುವ ಕಾರ್ಯಾಗಾರ ಪ್ರಾರಂಭಿಸಬೇಕು ಎಂದರು.
ಅತಿಥಿಗಳಾಗಿ ಆಗಮಿಸಿದ್ದ ಜಾವೇದ ಸುಂಕದ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಸಾವಿರಾರು ಕೋಟಿ ಗಳ ಅನುದಾನಗಳಿದ್ದರೂ ಅನುದಾನ ಪಡೆಯುವಲ್ಲಿ ನಾವು ಹಿಂದುಳಿದಿದ್ದೇವೆ. ಕಟ್ಟೆ ಪುರಾಣ ಬಿಟ್ಟು ನಮ್ಮ ಹಕ್ಕು ಪಡೆದುಕೊಳ್ಳಲು ಮುಂದಾಗಬೇಕು. ಕನಿಷ್ಠ ಅಲ್ಪಸಂಖ್ಯಾತರ ಸಮುದಾಯ ಭವನ ಕೂಡ ನಮ್ಮ ಸಮುದಾಯದವರಿಗೆ ಇಲ್ಲದಿದ್ದುದು ವಿಷಾದದ ಸಂಗತಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ. ಪ್ಯಾರ್ಅಲಿ ನೂರಾನಿ, ಪ್ರಧಾನ ಕಾರ್ಯದರ್ಶಿ ಕೆ.ಎಂ. ಕೊಪ್ಪಳ, ಸಂಘಟನಾ ಕಾರ್ಯದರ್ಶಿ ನಿಸಾರ್ ಅಹ್ಮದ್ ಖಾಜಿ ಇನ್ನಿತರರು ಪ್ರಾಸ್ತಾವಿಕ ಮಾತನಾಡಿದರು. ನಗರಸಭೆ ಸದಸ್ಯೆ ಖಮರಸುಲ್ತಾನಾ ನಮಾಜಿ, ಜೀವನಸಾಬ ನಮಾಜಿ, ಬಸವಣ್ಣೆಯ್ಯ ಹಿರೇಮಠ, ನಿವೃತ್ತ ಉಪ ತಹಸೀಲ್ದಾರ್ ಸವದತ್ತಿಸಾಬ, ಮುನ್ನಾ ಮುಲ್ಲಾ, ಇಬ್ರಾಹಿಂ ಕಾಗದಾರ ಇತರರು ಉಪಸ್ಥಿತರಿದ್ದರು. ರಾಜ್ಯಾಧ್ಯಕ್ಷ ಫರೀದ್ ಸುಂಕದ ಸ್ವಾಗತಿಸಿದರು. ಸಿರಾಜ ಖಾಜಿ ನಿರೂಪಿಸಿದರು. ಶಾಹೀದ್ ಸುಂಕದ ವಂದಿಸಿದರು.