ಕಮಲವ್ವಗೆ ಒಲಿದ ಅಧ್ಯಕ್ಷಗಿರಿ
ಕನ್ನಡಪ್ರಭ ವಾರ್ತೆ, ಗದಗ, ಡಿ. 20
ಗದಗ ಜಿಪಂ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿ, ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಸಿದ ನಂತರ, 2ನೇ ಅವಧಿಗೆ (ಬಾಕಿ ಇರುವ 5 ತಿಂಗಳಿಗೆ) ಅಧ್ಯಕ್ಷರ ಆಯ್ಕೆ ಶುಕ್ರವಾರ ಜಿಪಂ ಸಭಾಭವನದಲ್ಲಿ ನಡೆದು, ಅಧ್ಯಕ್ಷರಾಗಿ ಬೆಳ್ಳಟ್ಟಿ ಜಿಪಂ ಕ್ಷೇತ್ರದ ಸದಸ್ಯೆ ಕಮಲವ್ವ ಸಜ್ಜನ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಎಲ್ಲರ ಲೆಕ್ಕಾಚಾರ ತಲೆಕೆಳಗೆ ಮಾಡಿದರು.
ತೀವ್ರ ಕುತೂಹಲ ಕೆರಳಿಸಿದ್ದ ಅಧ್ಯಕ್ಷ ಸ್ಥಾನಕ್ಕೆ ಹಮ್ಮಿಗಿ ಕ್ಷೇತ್ರದ ಹೇಮಗಿರೀಶ ಹಾವಿನಾಳ ಹಾಗೂ ಮಾಗಡಿ ಕ್ಷೇತ್ರದಿಂದ ಆಯ್ಕೆಯಾಗಿರುವ ಎಂ.ಎಸ್. ದೊಡ್ಡಗೌಡ್ರ ಅವರ ಹೆಸರು ಪ್ರಬಲವಾಗಿ ಕೇಳಿ ಬಂದಿತ್ತಲ್ಲದೇ, ಇವರಿಬ್ಬರೂ ಅಧ್ಯಕ್ಷ ಸ್ಥಾನಕ್ಕಾಗಿ ಸಾಕಷ್ಟು ಪೈಪೋಟಿ ನಡೆಸಿದ್ದರು. ಆದರೆ, ಪಕ್ಷದ ಆಂತರಿಕ ವಿಷಯಗಳೇ ಇವರಿಬ್ಬರಿಗೂ ಅಧ್ಯಕ್ಷ ಸ್ಥಾನ ಕೈ ತಪ್ಪಲು ಪ್ರಮುಖ ಕಾರಣವಾಗಿದೆ.
ಇವರಿಬ್ಬರಿಗೆ ಅಧ್ಯಕ್ಷ ಸ್ಥಾನ ತಪ್ಪಿದ್ಯಾಕೆ?: ಹೇಮಗಿರೀಶ ಹಾಗೂ ಎಂ.ಎಸ್. ದೊಡ್ಡಗೌಡ್ರ ಇವರಿಬ್ಬರಲ್ಲಿ ಒಬ್ಬರಿಗಾದರೂ ಅಧ್ಯಕ್ಷ ಸ್ಥಾನ ಸಿಗಬೇಕಿತ್ತು. ಆದರೆ ಕೈ ತಪ್ಪಿದ್ಯಾಕೆ ಎನ್ನುವ ವಿಷಯದ ಬೆನ್ನುಬಿದ್ದಾಗ ಹಲವಾರು ಆಶ್ಚರ್ಯದ ಸಂಗತಿಗಳಿವೆ. ಹೇಮಗಿರೀಶ ಈಗಷ್ಟೇ ಬಿಜೆಪಿಗೆ ಬಂದವರು ಅವರಿಗಿಂತ ಮೊದಲೇ ಪಕ್ಷದಲ್ಲಿ ದುಡಿದವರಿಗೆ ನೀಡಬೇಕು. ಹಾಗಾಗಿ ದೊಡ್ಡಗೌಡ್ರಗೆ ನೀಡಿ ಎನ್ನುವ ವಿಚಾರವೂ ಚರ್ಚೆಯಾಗಿದೆ. ಆದರೆ, ದೊಡ್ಡಗೌಡ್ರ ವಿಷಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿಯೇ ಒಲವು ಹೊಂದಿರಲಿಲ್ಲ ಎನ್ನುವುದು ಬಿಜೆಪಿಯಲ್ಲಿ ಗುಟ್ಟಾಗಿರುವ ವಿಷಯವೇನಲ್ಲ. ಪಕ್ಷದ ಮೂಲಗಳ ಮಾಹಿತಿ ಆಧಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರು ದೊಡ್ಡಗೌಡ್ರರಿಗೆ ಲಿಖಿತವಾಗಿ ಹಾಗೂ ದೂರವಾಣಿಯ ಮೂಲಕ ಸಂಪರ್ಕಿಸಿದಾಗಲೂ ಅವರಿಂದ ಸರಿಯಾದ ಸ್ಪಂದನೆ ಸಿಗದೇ ಇರುವ ಹಿನ್ನೆಲೆಯಲ್ಲಿ ಜೋಶಿಯವರು ಸಾಕಷ್ಟು ಗರಂ ಆಗಿ, ಅವರೇನ್ರೀ ಪಕ್ಷಕ್ಕಿಂತ ದೊಡ್ಡವ್ರಾ.. ಎಂದು ಈಚೆಗೆ ನರಗುಂದದಲ್ಲಿ ನಡೆದ ಪಕ್ಷದ ಜಿಲ್ಲಾಮಟ್ಟದ ಸಭೆಯಲ್ಲಿ ಪಾಲ್ಗೊಂಡಿದ್ದ ವೇಳೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರಂತೆ, ಅದು ಕೂಡಾ ಇಂದು ಅವರಿಗೆ ಮೈನಸ್ ಪಾಯಿಂಟ್ ಆಯ್ತು. ಇನ್ನು ಅವಿಶ್ವಾಸ ಎದುರಿಸಿ ಅಧ್ಯಕ್ಷ ಸ್ಥಾನ ಕಳೆದುಕೊಂಡಿದ್ದ ಎಂ.ಎಸ್. ಪಾಟೀಲ, ಪಕ್ಷ ಹೊರಡಿಸಿದ್ದ ವಿಪ್ ಉಲ್ಲಂಘನೆ ಮಾಡಿದ್ದರು. ವಿಚಿತ್ರ ಎಂದರೆ ಅವರ ವಿಪ್ ಉಲ್ಲಂಘನೆಯ ಪ್ರಕರಣ ಕುರಿತು ಚುನಾವಣಾ ಆಯೋಗ ಶುಕ್ರವಾರ (ಡಿ. 20 ರಂದೇ) ವಿಚಾರಣೆಗೆ ಬರುವಂತೆ ಜಿಲ್ಲಾ ಬಿಜೆಪಿ ಅಧ್ಯಕ್ಷರಿಗೆ ಸೂಚನೆ ನೀಡಿತ್ತು. ಜಿಲ್ಲಾಧ್ಯಕ್ಷರು ವಿಚಾರಣೆಗೆ ಹಾಜರಾಗಿ ವಿಪ್ ಕುರಿತು ಈ ಹಿಂದಿನಂತೆ ಲಿಖಿತ ಹೇಳಿಕೆ ನೀಡಿದ್ದಲ್ಲಿ, ಜಿಪಂ ಸದಸ್ಯ ಎಂ.ಎಸ್. ಪಾಟೀಲ ತಮ್ಮ ಸ್ಥಾನವನ್ನು ಕಳೆದುಕೊಳ್ಳುತ್ತಿದ್ದರು. ಬಿಜೆಪಿ ಅನಿವಾರ್ಯವಾಗಿ ಮತ್ತೊಂದು ಉಪಚುನಾವಣೆಯನ್ನು ಎದುರಿಸಬೇಕಾಗುತ್ತಿತ್ತು. ಇದನ್ನು ತಪ್ಪಿಸಲು ಈ ಪ್ರಕರಣವನ್ನೇ ವಾಪಸ್ ಪಡೆಯಲು ಜಿಲ್ಲಾ ಬಿಜೆಪಿ ನಿರ್ಧರಿಸಿತ್ತು. ಇದಕ್ಕೆ ಒಪ್ಪಿಗೆ ಸೂಚಿಸಿದ್ದ ಎಂ.ಎಸ್. ಪಾಟೀಲ ಅಧ್ಯಕ್ಷರ ಆಯ್ಕೆಯ ವಿಷಯದಲ್ಲಿ ಜಿಲ್ಲೆಯ ಮಾಜಿ ಶಾಸಕರುಗಳ ಮೇಲೆ ಪ್ರಭಾವ ಬೀರಿದ ಹಿನ್ನೆಲೆಯಲ್ಲಿ ಇವರಿಬ್ಬರಿಗೂ ಅಧ್ಯಕ್ಷ ಸ್ಥಾನ ಕೈತಪ್ಪಿ, ಬೇರೊಬ್ಬರ ಪಾಲಾಗಿದೆ.
ಒಂದೇ ಕಲ್ಲಲ್ಲಿ ಮೂರು ಹಕ್ಕಿ ಹೊಡೆದ್ರು...
ಜಿಲ್ಲಾ ಬಿಜೆಪಿ ಅಧ್ಯಕ್ಷ ಕಳಕಪ್ಪ ಬಂಡಿ ಹಾಗೂ ಮಾಜಿ ಸಚಿವ ಸಿ.ಸಿ.ಪಾಟೀಲ ಅಧ್ಯಕ್ಷರ ಆಯ್ಕೆಯ ವಿಷಯದಲ್ಲಿ ಅತ್ಯಂತ ಚಾಣಾಕ್ಷ ನಡೆ ಅನುಸರಿಸಿದ್ದು, ಒಂದೇ ಕಲ್ಲಿನಲ್ಲಿ ಮೂರು ಹಕ್ಕಿಗಳನ್ನು ಹೊಡೆದಿದ್ದಾರೆ. ಪ್ರಬಲ ಆಕಾಂಕ್ಷಿಗಳಲ್ಲಿ ಯಾರಾದರೂ ಒಬ್ಬರಿಗೂ ಅಧ್ಯಕ್ಷ ಸ್ಥಾನ ನೀಡಿದ್ದರೂ ಇನ್ನೊಬ್ಬರು ತೀವ್ರ ಅಸಮಾಧಾನಗೊಳ್ಳುತ್ತಿದ್ದರು ಅದು ತಪ್ಪಿ ಹೋಯ್ತು. ವಿಪ್ ಉಲ್ಲಂಘನೆಯ ಪ್ರಕರಣವನ್ನು ಮುಂದುವರೆಸದೇ ಹಿಂಪಡೆದ ಹಿನ್ನೆಲೆಯಲ್ಲಿ ಪಕ್ಷದ ಅಧ್ಯಕ್ಷರ ಆಯ್ಕೆ ಸುಲಲಿತವಾಯ್ತು. ಅನವಶ್ಯಕವಾಗಿ ಎದುರಾಗುತ್ತಿದ್ದ ಮತ್ತೊಂದು ಜಿಪಂ ಉಪಚುನಾವಣೆಯನ್ನು ತಪ್ಪಿಸಿಕೊಂಡರು. ಜಿಪಂ ಅಧಿಕಾರ ಬಂದಾಗಿನಿಂದಲೂ ಶಿರಹಟ್ಟಿ ತಾಲೂಕಿಗೆ ಪ್ರಾಧಾನ್ಯತೆಯೇ ಸಿಕ್ಕಿಲ್ಲ ಎನ್ನುವ ಅಲ್ಲಿನ ಜನರ ಕೂಗಿಗೆ ಕಮಲವ್ವ ಅವರಿಗೆ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಮನ್ನಣೆಯನ್ನು ನೀಡಿದ್ದಾರೆ.
ಗಣ್ಯರಿಂದ ಅಧ್ಯಕ್ಷೆಗೆ ಅಭಿನಂದನೆ
ಗದಗ: ಗದಗ ಜಿಪಂನ 2ನೇ ಅವಧಿಗೆ ಅಧ್ಯಕ್ಷರಾಗಿ ಶುಕ್ರವಾರ ನಡೆದ ಚುನಾವಣೆಯಲ್ಲಿ ಬೆಳ್ಳಟ್ಟಿ ಜಿಪಂ ಕ್ಷೇತ್ರದ ಕಮಲವ್ವ ಸಜ್ಜನ ಅವಿರೋಧವಾಗಿ ಆಯ್ಕೆಯಾದರು. ಅಧ್ಯಕ್ಷ ಸ್ಥಾನಕ್ಕೆ ಅವರೊಬ್ಬರೇ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಆಯ್ಕೆ ಅವಿರೋಧವಾಗಿ ನಡೆಯಿತು. ಚುನಾವಣಾ ಅಧಿಕಾರಿಯಾಗಿ ಆಗಮಿಸಿದ್ದ ಬೆಳಗಾವಿ ಪ್ರಾದೇಶಿಕ ಆಯುಕ್ತ ಗಂಗಾರಾಮ್ ಬಡೆರೀಯಾ ಮಧ್ಯಾಹ್ನ 1 ಗಂಟೆಗೆ ಅಧ್ಯಕ್ಷರ ಆಯ್ಕೆಯನ್ನು ಘೋಷಿಸಿ, ಅಭಿನಂದಿಸಿದರು. ಈ ಸಂದರ್ಭದಲ್ಲಿ ಡಿಸಿ ಎನ್.ಎಸ್. ಪ್ರಸನ್ನಕುಮಾರ, ಜಿಪಂ ಸಿಇಒ ವೀರಣ್ಣ ತುರಮರಿ ಸೇರಿದಂತೆ ಹಿರಿಯ ಅಧಿಕಾರಿಗಳು, ಬಿಜೆಪಿ ಹಾಗೂ ಕಾಂಗ್ರೆಸ್ನ ಎಲ್ಲ ಜಿಪಂ ಸದಸ್ಯರು ಹಾಜರಿದ್ದರು.
ಅಭಿನಂದನೆ: ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಜಿಪಂ ಸಭಾಭವನಕ್ಕೆ ಆಗಮಿಸಿದ ಮಾಜಿ ಸಚಿವ ಸಿ.ಸಿ. ಪಾಟೀಲ, ಜಿಲ್ಲಾ ಬಿಜೆಪಿ ಅಧ್ಯಕ್ಷ ಕಳಕಪ್ಪ ಬಂಡಿ, ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ, ರಾಮಣ್ಣ ಲಮಾಣಿ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಎಂ.ಎಸ್. ಕರಿಗೌಡ್ರ, ಪ್ರಧಾನ ಕಾರ್ಯದರ್ಶಿ ಎಂ.ಎಂ. ಹಿರೇಮಠ, ಯುವ ಘಟಕದ ಅಧ್ಯಕ್ಷ ಛಗನ್ ರಾಜಪುರೋಹಿತ, ಲಿಂಗನಗೌಡ ಹರ್ತಿ ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಜಿಪಂನ ಹಿರಿಯ, ಕಿರಿಯ ಅಧಿಕಾರಿಗಳು ಅಭಿನಂದನೆ ಸಲ್ಲಿಸಿದರು.
ಶಿವಕುಮಾರ ಕುಷ್ಟಗಿ