ನೇಕಾರರ ಕೂಲಿ ಹೆಚ್ಚಳಕ್ಕೆ ಆಗ್ರಹ
ಗಜೇಂದ್ರಗಡ: ವಿದ್ಯುತ್ ಮಗ್ಗ ನೇಯುವ ನೇಕಾರರ ಚಳತಿ (ಕೂಲಿ) ಹೆಚ್ಚಳ ಮಾಡಲು ಆಗ್ರಹಿಸಿ ಶುಕ್ರವಾರ ನೇಕಾರಿಕೆ ಸ್ಥಗಿತಗೊಳಿಸಿ ಪ್ರತಿಭಟಿಸಿದರು. ನೇಕಾರರ ಹಿತರಕ್ಷಣಾ ವೇದಿಕೆ ವತಿಯಿಂದ ನೇಕಾರರ ಸಂಘದ ಅಧ್ಯಕ್ಷ ಕೊಟ್ರೇಶ ಚಿಲಕಾ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಕೇಳಗಲಪೇಟೆ ಆಂಜನೇಯ ದೇಗುಲ ಆವರಣದಲ್ಲಿ ಸಭೆ ಸೇರಿದ ನೇಕಾರರು ಕಳೆದೊಂದು ವರ್ಷದಿಂದ ಕೂಲಿ ಹೆಚ್ಚಿಸುವಂತೆ ಎಲ್ಲ ವಿದ್ಯುತ್ ಚಾಲಿತ ಮಗ್ಗಗಳ ಮಾಲೀಕರಿಗೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಈಗ ಸೀರೆ ಒಂದಕ್ಕೆ ರು. 44 ನೀಡುತ್ತಿದ್ದು, ಇದರಿಂದ ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ. ಬದಲಾಗಿ ಸೀರೆ ಒಂದಕ್ಕೆ ರು. 66 ನೀಡಬೇಕು ಹಾಗೂ ವರ್ಷಕ್ಕೊಮ್ಮೆ ಕೂಲಿ ಹೆಚ್ಚಿಸಬೇಕು ಎಂದು ಹಲವಾರು ಬಾರಿ ವಿನಂತಿಸಿದ್ದೇವೆ. ಯಾವ ಮಾಲೀಕರಿಗೂ ನಮ್ಮ ನೋವು ಮನವರಿಕೆಯಾಗುತ್ತಿಲ್ಲ. ಹೀಗಾಗಿ ಡಿ. 14ರಿಂದ ನೇಕಾರಿಕೆ ಸ್ಥಗಿತಗೊಳಿಸಿದ್ದೇವೆ. ನಮ್ಮ ಬೇಡಿಕೆ ಈಡೇರುವ ವರೆಗೂ ಕೆಲಸಕ್ಕೆ ಹಾಜರಾಗುವುದಿಲ್ಲ ಎಂದು ನೇಕಾರರ ಹಿತರಕ್ಷಣಾ ವೇದಿಕೆ ಅಧ್ಯಕ್ಷರ ಮುಂದೆ ನೇಕಾರರು ಅಳಲು ತೋಡಿಕೊಂಡರು.
ನೇಕಾರರರಿಂದ ಮನವಿ ಸ್ವೀಕರಿಸಿದ ಅಧ್ಯಕ್ಷ ಕೊಟ್ರೇಶ ಚಿಲಕಾ ಮಾತನಾಡಿ, ನೇಕಾರಿಕೆ ಕಸುಬನ್ನೇ ನಂಬಿ ಬದುಕು ಸಾಗಿಸುತ್ತಿರುವ ನೇಕಾರರ ಕುಟುಂಬಗಳು ಸಂಕಷ್ಟದಲ್ಲಿವೆ. ಇಂದಿನ ದುಬಾರಿ ದಿನಮಾನಗಳಲ್ಲಿ ಅಲ್ಪ ಸಂಬಳದಲ್ಲಿ ಜೀವನ ಸಾಗಿಸುವುದು ಕಷ್ಟಕರವಾಗಿದೆ. ಕೂಡಲೇ ವಿದ್ಯುತ್ ಚಾಲಿತ ಮಗ್ಗಗಳ ಮಾಲೀಕರ ಜತೆ ಚರ್ಚಿಸಿ ನೇಕಾರರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.
ಅಬ್ದುಲ್ಸಾಬ ಕಾತರಕಿ, ಈರಣ್ಣ ಕರಾಪದಿನ್ನಿ, ಆರ್.ಡಿ. ಹಣಗಿ, ವೆಂಕಟೇಶ ಎರಗೇರಿ, ನಾರಾಯಣ ಪಪ್ತಿ, ಜೆ.ಡಿ. ಪವಾರ, ಈರಣ್ಣ ಪುಲಗಟ್ಟಿ, ಪರಶುರಾಮಸಾ ರಾಯಬಾಗಿ, ದಾದಾಪೀರ ಉಟಗೂರ, ಐ.ಬಿ. ಮರದಡ್ಡಿ, ಆರ್.ಎಂ. ತಾಳಿಕೋಟಿ, ಐ.ಎಂ. ಆರಗಿದ್ದಿ, ಜೆ.ಎ. ಕವಡಿಮಟ್ಟಿ, ಬಸವರಾಜ ನಿಂಬೋಜಿ, ಪಿ.ವಿ. ಮಗಜಿ, ಯಲ್ಲಪ್ಪ ಪಪ್ತಿ, ಆರ್.ಬಿ. ಕಡಬೂರ, ಎಂ.ವಿ. ಕೊಳ್ಳಿ ಮುಂತಾದವರು ಉಪಸ್ಥಿತರಿದ್ದರು.