ಮೂಢನಂಬಿಕೆ ನಿಷೇಧಕ್ಕೆ ಸರ್ಕಾರ ಚಿಂತಿಸಲಿ: ನಿಡುಮಾಮಿಡಿಶ್ರೀ
ಗದಗ: ರಾಜ್ಯ ಸರ್ಕಾರ ಮೂಢನಂಬಿಕೆ ಆಚರಣೆ ನಿಷೇಧ ಕಾನೂನು ಜಾರಿಗೆ ತರುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು. ಈ ಬಗ್ಗೆ ಅನಗತ್ಯ ಗೊಂದಲ ಸೃಷ್ಟಿಸುತ್ತಿರುವವರು ಸೇರಿದಂತೆ ಎಲ್ಲರನ್ನೂ ಒಂದೆಡೆ ಸೇರಿಸಿ, ಗಂಭೀರ ಚರ್ಚೆ ನಡೆಸಲು ಮುಂದಾಗಬೇಕು ಎಂದು ನಿಡುಮಾಮಿಡಿ ಮಠದ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ ಹೇಳಿದರು. ಶುಕ್ರವಾರ ನಗರದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸರ್ಕಾರ ಈ ಕಾನೂನು ಜಾರಿಗೆ ಚಿಂತನೆ ನಡೆಸಿತ್ತು. ಆದರೆ, ಕೆಲವರು ಅನಗತ್ಯ ಗೊಂದಲ ಸೃಷ್ಟಿಸಿದ ಹಿನ್ನೆಲೆಯಲ್ಲಿ, ಸರ್ಕಾರ ಅದೇಕೋ ಇದರಿಂದ ವಿಮುಖವಾಗುತ್ತಿದೆ. ಇದು ಸರಿಯಾದ ಬೆಳವಣಿಗೆಯಲ್ಲ. ಸಿದ್ಧಗೊಂಡಿದ್ದ ಕರಡಿನಲ್ಲಿ 13 ಪ್ರಮುಖ ವಿಷಯಗಳ ಬಗ್ಗೆ ತಿಳಿಸಲಾಗಿತ್ತು. ಪ್ರಾಣಿಬಲಿ, ನರಬಲಿ, ಸಾಮಾಜಿಕ ಅನಿಷ್ಟಗಳು ಎಂದು ಗುರುತಿಸಿಕೊಂಡಿರುವ ಕೆಲ ಪದ್ಧತಿಗಳಿವೆ. ಆದರೆ, ಇದರಲ್ಲಿ ಹತ್ತಾರು ಪಾರಂಪರಿಕ ವಿಷಯಗಳು ಸೇರಿವೆ ಎನ್ನುವ ಗೊಂದಲ ಸೃಷ್ಟಿಸಿದ್ದು ಸರಿಯಾದ ಬೆಳವಣಿಗೆಯಲ್ಲ ಎಂದರು.
ಮಟ್ಕಾ ದಂಧೆ: ಈಗಲೂ ಬದ್ಧ
ನಮ್ಮ ಸಮಾಜದಲ್ಲಿ ಮಠಗಳಿಗೆ ಅತ್ಯುತ್ತಮವಾದ ಬೆಲೆ ಇದೆ. ಆದರೆ, ರಾಜ್ಯದಲ್ಲಿನ ಕೆಲ ಮಠಗಳು ಮಟ್ಕಾ ನಂಬರ್ಗಳನ್ನು ಹೇಳುತ್ತಿದ್ದು, ಅದರಿಂದ ಭಕ್ತರಿಗೆ ಅನುಕೂಲವಾದಲ್ಲಿ, ಅದರ ಪಾಲು ಆ ಮಠಾಧೀಶರಿಗೂ ಸಲ್ಲುತ್ತದೆ. ಈ ಬಗ್ಗೆ ನಾನು ಮೊದಲು ಮಾತನಾಡಿದ್ದೇ. ಅದನ್ನು ಕೆಲವರು ವಿರೋಧಿಸಿದರು, ಮತ್ತೆ ಕೆಲವರು ಸ್ವಾಗತಿಸಿದರು. ಮಠಗಳು ಸಮಾಜಮುಖಿಯಾಗಿರಬೇಕು ಎನ್ನುವುದು ನನ್ನ ಉದ್ದೇಶವೇ ಹೊರತು, ಯಾರನ್ನೂ ದೂಷಿಸುವುದು, ದ್ವೇಷಿಸುವುದು ಅಲ್ಲ. ಈಗಲೂ ನಾನು ನನ್ನ ಮಾತಿಗೆ ಬದ್ಧನಾಗಿದ್ದು, ರಾಜ್ಯದ 10ಕ್ಕೂ ಹೆಚ್ಚು ಮಠಗಳಲ್ಲಿ ಮಟ್ಕಾ ನಂಬರ್ಗಳನ್ನು ಹೇಳಲಾಗುತ್ತಿದೆ ಎಂದರು.