ಸುದ್ದಿ ಸಂಕ್ಷೇಪ
ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಣೆ
ಲಕ್ಷ್ಮೇಶ್ವರ: ಸರ್ಕಾರದ ಯೋಜನೆಗಳು ಉತ್ತಮವಾಗಿಯೇ ಇರುತ್ತವೆ. ಅವುಗಳ ಸದ್ವಿನಿಯೋಗವಾದಾಗ ಮಾತ್ರ ಸರ್ಕಾರದ ಉದ್ದೇಶ ಸಾಫಲ್ಯವಾಗುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಸರ್ಕಾರದಿಂದ ಕೊಡಮಾಡುವ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳುವಂತೆ ಗ್ರಾಪಂ ಸದಸ್ಯ ಚಂದ್ರು ತಳವಾರ ಹೇಳಿದರು. ಅವರು ಈಚೆಗೆ ಸಮೀಪದ ಗೋವನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಸರ್ಕಾರ ಕೊಡಮಾಡಿದ ಉಚಿತ ಸೈಕಲ್ ವಿತರಣಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು. ಸರ್ಕಾರ ಶಿಕ್ಷಣಕ್ಕೆ ಪೂರಕವಾದ ಅನೇಕ ಸೌಲತ್ತು ನೀಡುತ್ತಿದೆ. ಅದರಂತೆ ಉಚಿತ ಸೈಕಲ್ ವಿತರಣೆಯೂ ಅತ್ಯಂತ ಮಹತ್ವದ ಯೋಜನೆಯಾಗಿದ್ದು, ವಿದ್ಯಾರ್ಥಿಗಳು ಇವುಗಳ ಸದುಪಯೋಗ ಪಡೆದುಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಮುಖಂಡ ಭರಮಣ್ಣ ರೊಟ್ಟಿಗವಾಡ, ಶೇಖರಗೌಡ ಕೊರಡೂರ, ನಾಗರಾಜ ದೊಡ್ಡಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಮಣ್ಣ ಹಿತ್ತಲಮನಿ, ಮಾರುತಿ ವಾಲಿಕಾರ, ದಿವಾಕರ ಬಡಿಗೇರ, ಸೋಮೇಶ ಗಾಜಿ, ಮಹಾಂತೇಶ ಬಾರಕೇರ, ಬಸಣ್ಣ ಕುರಹಟ್ಟಿ, ಮುಖ್ಯೋಪಾಧ್ಯಾಯ ಎಂ.ಎಚ್. ಮಾದರ ಮುಂತಾದವರು ಇದ್ದರು. ಶಿಕ್ಷಕ ಬಿ.ಬಿ. ಯತ್ತಿನಹಳ್ಳಿ ಸ್ವಾಗತಿಸಿದರು. ಜಿ.ಎಸ್. ಜಾವೂರ ನಿರೂಪಿಸಿದರು. ಎಸ್.ಎಸ್. ಪೂಜಾರ ವಂದಿಸಿದರು.
ಅರ್ಜಿ ಆಹ್ವಾನ
ಗದಗ: ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ಜಾತಿಯ ಕಂಪ್ಯೂಟರ್ ಜ್ಞಾನವುಳ್ಳ 40 ಪದವೀಧರರಿಗೆ ಛಾಯಾಗ್ರಹಣ, ಸಂಕಲನ, ಮಲ್ಟಿಮೀಡಿಯಾದಲ್ಲಿ ತಾಂತ್ರಿಕ ವೃತ್ತಿ ತರಬೇತಿಯನ್ನು ಮೈಸೂರು ವಿವಿಯಲ್ಲಿ ಹಾಗೂ ಕಲಾ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವವರಿಗೆ ದೃಶ್ಯ ಮಾಧ್ಯಮದಲ್ಲಿ ಚಿತ್ರಕಲೆ, ಗ್ರಾಫಿಕ್ಸ್, ಶಿಲ್ಪಕಲೆ ಕುರಿತಂತೆ 100 ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ 5 ದಿನದ ತರಬೇತಿಯನ್ನು ಮೈಸೂರಿನ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು(ಕಾವಾ) ಇಲ್ಲಿ ಜರುಗಿಸಲು ವಾರ್ತಾ ಇಲಾಖೆ ಉದ್ದೇಶಿಸಿದೆ. ತರಬೇತಿ ಅವಧಿಯಲ್ಲಿ ಊಟ, ವಸತಿ ಸೌಕರ್ಯ ಒದಗಿಸಲಾಗುವುದು. ಅರ್ಹರು ತಮ್ಮ ಹೆಸರು, ವಿಳಾಸ, ವಿದ್ಯಾರ್ಹತೆ ಜಾತಿ ಇತ್ಯಾದಿ ಸ್ವ-ವಿವರ ಅರ್ಜಿಯನ್ನು ಕೈಯಿಂದ ಅಥವಾ ಬೆರಳಚ್ಚು ಮಾಡಿಸಿ ವ್ಯಾಸಂಗ ಮಾಡುತ್ತಿರುವ ಕಾಲೇಜು ಮುಖ್ಯಸ್ಥರ ಅನುಮತಿ ಪತ್ರ ಹಾಗೂ ದೃಢೀಕೃತ ದಾಖಲೆಗಳೊಂದಿಗೆ ಡಿ. 31ರೊಳಗಾಗಿ ನಿರ್ದೇಶಕರು, ವಾರ್ತಾ ಇಲಾಖೆ, ವಾರ್ತಾ ಸೌಧ, ನಂ. 17, ಭಗವಾನ್ ಮಹವೀರ ರಸ್ತೆ, ಬೆಂಗಳೂರು-560001 ಇಲ್ಲಿಗೆ ಕಳುಹಿಸಬೇಕು. ಲಕೋಟೆ ಮೇಲೆ ಸಂಬಂಧಿತ ತಾಂತ್ರಿಕ ವೃತ್ತಿ ದೃಶ್ಯ ಮಾಧ್ಯಮ ತರಬೇತಿ ಎಂದು ನಮೂದಿಸಬೇಕು. ಹೆಚ್ಚಿನ ಮಾಹಿತಿಗಾಗಿ 080-22028052 ಇಲ್ಲಿಗೆ ಸಂಪರ್ಕಿಸಲು ವಾರ್ತಾ ಇಲಾಖೆಯ ನಿರ್ದೇಶಕರ ಪ್ರಕಟಣೆ ತಿಳಿಸಿದೆ.