ಪರಿಶ್ರಮದಿಂದ ಕಲಾ ಕ್ಷೇತ್ರದಲ್ಲಿ ಸಾಧನೆ ಸಾಧ್ಯ: ಹರ್ಷದಾ
ಗದಗ: ಮಾನವನು ಪ್ರತಿಯೊಂದು ಕ್ಷೇತ್ರದಲ್ಲಿ ತನ್ನದೇಯಾದ ಪ್ರಭಾವ ಹೊಂದಲು ಮೊದಲಿನಿಂದಲೂ ಪ್ರಯತ್ನಿಸುತ್ತಾ ಬಂದಿದ್ದಾನೆ. ಆದ್ದರಿಂದ ಕಲಾವಿದನ ಮುಂದೆ ಸಾವಿರಾರು ಬಣ್ಣಗಳ ಮಾಧ್ಯಮಗಳಿವೆ. ಆದರೆ, ಯಾವುದೇ ಮಾಧ್ಯಮದಲ್ಲಿ ಹಾಗೂ ವಿಷಯದಲ್ಲಿ ಸಾಧನೆ ಮಾಡುತ್ತಿದ್ದರೆ ಪ್ರಬುದ್ಧ ಕಲಾವಿದರಾಗಿ ಬೆಳೆಯಲು ಸಾಧ್ಯ ಎಂದು ಗೋವಾದ ಕಲಾವಿದೆ ಹರ್ಷದಾ ಕೇರಕರ್ ಹೇಳಿದರು. ಈಚೆಗೆ ಅವರು ಸ್ಥಳೀಯ ರಾಜೀವಗಾಂಧಿ ನಗರದಲ್ಲಿರುವ ವಿಜಯಕಲಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಲಾಪ್ರಾತ್ಯಕ್ಷಿಕೆಯಲ್ಲಿ ಪ್ರಾತ್ಯಕ್ಷಿಕೆ ನೀಡಿ ಮಾತನಾಡಿದರು. ಯಾವುದೇ ಕಲಾಕೃತಿ ಪ್ರಬುದ್ಧತೆ ಸೂಚಿಸುವುದು. ರಚಿಸುವ ರೇಖೆ, ನೆರಳು, ಬೆಳಕಿನ ಸಮತೋಲನಗಳ ಕಾಪಾಡಿಕೊಳ್ಳಲು ವಿದ್ಯಾರ್ಥಿ ಸದಾಕಾಲ ಸಂಚಾರಿಯಾಗಿರಬೇಕು ಹಾಗೂ ಅಧ್ಯಯನ ಮನೋಭಾವ ಬೆಳೆಸಿಕೊಳ್ಳಬೇಕು. ಕಲಾ ಕ್ಷೇತ್ರದಲ್ಲಿ ಸಾಧನೆಯೆಂಬುದು ಕಠಿಣವಾಗಿದ್ದು, ಸತತ ಅಧ್ಯಯನ, ಹೊಸತನದ ಹುಡುಕಾಟ, ಕಲಿಯುವ ಆಸಕ್ತಿಯೇ ಯಶಸ್ಸಿನ ಮೆಟ್ಟಿಲು ಎಂದರು. ಸಂಸ್ಥೆಯ ನಿರ್ದೇಶಕ ಅಶೋಕ ಅಕ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿ.ಈ. ಬಡಿಗೇರ, ಆರ್.ವಿ. ಹೆಗಡೆ, ಬಿ.ಎಂ. ಬಿಳೆಯಲಿ, ಪ್ರಾ. ಪಿ.ವಿ. ಹಿರೇಮಠ, ಸಿ.ವಿ. ಬಡಿಗೇರ ಮುಂತಾದವರು ಉಪಸ್ಥಿತರಿದ್ದರು. ಬಸವರಾಜ ನೆಲಜೇರಿ ನಿರೂಪಿಸಿದರು. ಎಸ್.ವಿ. ಗುಂಜಾಳ ವಂದಿಸಿದರು.