ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ದುಸ್ಥಿತಿಯತ್ತ ಗ್ರಾಮೀಣ ಗ್ರಂಥಾಲಯ

Mainashree
Updated On : 23 Dec 2013, 11:10 am

ರೋಣ/ಗಜೇಂದ್ರಗಡ: ಸ್ವಂತ ಕಟ್ಟಡಗಳಿಲ್ಲ, ಕೆಲವೆಡೆ ಇದ್ದರೂ ಅಗತ್ಯ ಸೌಲಭ್ಯಗಳಿಲ್ಲ. ಎರಡೂ ಇದ್ದರೂ ಸಿಬ್ಬಂದಿ ಕೊರತೆ. ಮತ್ತೆ ಕೆಲವೆಡೆ ಎಲ್ಲವೂ ಇದ್ದರೂ ಸಮರ್ಪಕ ನಿರ್ವಹಣೆಯಿಲ್ಲ. ಅಲ್ಲದೇ ಪತ್ರಿಕೆ, ಪುಸ್ತಕಗಳ ಕೊರತೆ, ಕುಡಿವ ನೀರು, ಶೌಚಾಲಯ ಇಲ್ಲದಿರುವುದು, ಹೀಗೆ ಒಂದಿಲ್ಲೊಂದು ಸಮಸ್ಯೆಗಳಿಂದ ತಾಲೂಕಿನಲ್ಲಿನ ಎಲ್ಲ ಗ್ರಾಮೀಣ ಗ್ರಂಥಾಲಯಗಳು ಬಳಲುತ್ತಿವೆ.
ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬಾ ಎಂದು ಜನರನ್ನು ಕೈಬೀಸಿ ಕರೆಯುವ ಗ್ರಂಥಾಲಯಗಳಿಗೆ ನಗರ ಪ್ರದೇಶಗಳಲ್ಲಿ ಸಕಲ ಸೌಲಭ್ಯ ನೀಡುವ ಸರ್ಕಾರ, ಗ್ರಾಮೀಣ ಗ್ರಂಥಾಲಯಕ್ಕೆ ಸೌಲಭ್ಯ ಕಲ್ಪಿಸುವಲ್ಲಿ ಕಡೆಗಣಿಸಿದೆ.
ಹೌದು, ರಾಜ್ಯ ಮತ್ತು ಕೇಂದ್ರ ಸರ್ಕಾರ ಜನರಲ್ಲಿ ಪುಸ್ತಕ ಪ್ರೇಮ, ಸಾಹಿತ್ಯಾಭಿರುಚಿ ಮತ್ತು ಸಾಹಿತ್ಯಾಕರ್ಷಣೆ,  ರಾಜಕೀಯ, ಸಾಮಾಜಿಕ, ಆರ್ಥಿಕ, ಔದ್ಯೋಗಿಕ, ವಾಣಿಜ್ಯೋದಮ ಸೇರಿದಂತೆ ವಿವಿಧ ಸ್ತರಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಗ್ರಾಮೀಣ ಪ್ರದೇಶದಲ್ಲಿ ಗ್ರಂಥಾಲಯಗಳನ್ನು ತೆರೆಯಲಾಗಿದೆ. ಅಲ್ಲದೆ ಸರ್ಕಾರ ನಮ್ಮ ಗ್ರಾಮ ನಮ್ಮ ಗ್ರಂಥಾಲಯ ಯೋಜನೆಯನ್ನು ಅನುಷ್ಠಾನಕ್ಕೆ ತಂದು ಯೋಜನೆ ಮೂಲಕ ಪ್ರತಿಯೊಂದು ಹಳ್ಳಿಯಲ್ಲಿ ಗ್ರಂಥಾಲಯ ತೆರೆಯಲು ಮುಂದಾಗಿದೆ. ಗ್ರಂಥಾಲಯ ತೆರೆದ ಬಳಿಕ ಅದಕ್ಕೆ ಅಗತ್ಯ ಸೌಲಭ್ಯ ಒದಗಿಸುವ ಕುರಿತು ಗಮನ ಹರಿಸುವಲ್ಲಿ ಸರ್ಕಾರಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮುಂದಾಗಬೇಕಿದೆ.
31 ಗ್ರಾಮೀಣ ಗ್ರಂಥಾಲಯಗಳು: ತಾಲೂಕಿನ ಹುಲ್ಲೂರ, ಸವಡಿ, ಯಾವಗಲ್, ಕುರಹಟ್ಟಿ, ಕೊತಬಾಳ, ಶಾಂತಗೇರಿ, ರಾಜೂರ, ಡ.ಸ. ಹಡಗಲಿ, ಕುರಡಗಿ, ಕುಂಟೋಜಿ, ಹೊಳೆಮಣ್ಣೂರ, ಸೂಡಿ, ಜಕ್ಕಲಿ, ಮಲ್ಲಾಪುರ, ಮುಶಿಗೇರಿ, ನಿಡಗುಂದಿ, ಹಿರೇಹಾಳ, ಹುನಗುಂಡಿ, ಮಾಡಲಗೇರಿ, ಮೆಣಸಗಿ, ಅಬ್ಬಿಗೇರಿ, ಹೊಳೆಆಲೂರ, ಲಕ್ಕಲಕಟ್ಟಿ, ಗೋಗೇರಿ, ಅಸೂಟಿ, ಚಿಕ್ಕಮಣ್ಣೂರ, ಹುನಗುಂಡಿ, ಬೆಳವಣಕಿ, ರಾಂಪುರ ಇಟಗಿ ಮತ್ತು ಹಾಳಕೇರಿ ಗ್ರಾಮಗಳಲ್ಲಿ ಗ್ರಂಥಾಲಯಗಳಿವೆ. ಇಲ್ಲಿನ ಬಹುತೇಕ ಗ್ರಂಥಾಲಯಗಳು ಕಟ್ಟಡಗಳು ಶಿಥಿಲಗೊಂಡಿದ್ದು, ಬೀಳುವ ಹಂತದಲ್ಲಿವೆ. ಕೆಲವನ್ನು ಬಾಡಿಗೆ ಕಟ್ಟಡದಲ್ಲಿ ನಡೆಸಲಾಗುತ್ತಿದೆ. ಇನ್ನೂ ಕೆಲವು ಮಳೆಗಾಲದಲ್ಲಿ ಸೋರುತ್ತಿವೆ. ಕಾಟಾಚಾರಕ್ಕೆ ಕಾರ್ಯ ನಿರ್ವಹಿಸುತ್ತಿರುವ ಗ್ರಂಥಾಲಯಗಳು ಓದುಗರಿಗೆ ನೋವುಂಟು ಮಾಡುತ್ತಿವೆ. ತಾಲೂಕಿನಲ್ಲಿನ ಇನ್ನೂ ಕೆಲ ಗ್ರಂಥಾಯಗಳು ಓದುಗರಿಲ್ಲದೆ ಭಣಗುಡುತ್ತಿವೆ.
ಪುಸ್ತಕಗಳ ಕೊರತೆ: ಗ್ರಂಥಾಲಯಗಳಿಂದ ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲವಾಗಲಿ ಮತ್ತು ಗ್ರಾಮೀಣ ಜನತೆ ತಮ್ಮ ದುಡಿಮೆಯ ಬಿಡುವಿನ ಸಮಯವನ್ನು ಸದುಪಯೋಗಪಡಿಸಿಕೊಳ್ಳಬೇಕು. ಅವರ ಜ್ಞಾನಾರ್ಜನೆಗೆ ಸಹಕಾರಿಯಾಗಲಿ ಎಂಬ ಉದ್ದೇಶದಿಂದ ತೆರೆಯಲಾಗಿದ್ದ ಗ್ರಾಮೀಣ ಗ್ರಂಥಾಲಯಗಳಿಗೆ ಕಳೆದ 5 ವರ್ಷಗಳಿಂದ ಹೊಸ ಪುಸ್ತಕಗಳು ಬಂದಿರುವುದಿಲ್ಲ. ಓಕ್ಕಲುತನ ಮೂಲವಾದ ಗ್ರಾಮೀಣ ಪ್ರದೇಶದಲ್ಲಿ ರೈತರಿಗೆ ಕೃಷಿಗೆ ಸಂಬಂಧಿಸಿದಂತೆ ಹಾಗೂ ಪ್ರಚಲಿತ ವಿದ್ಯಾಮಾನಗಳ ಕುರಿತು ತಿಳಿಯಲು ಪುಸ್ತಕ ಮತ್ತು ಪತ್ರಿಕೆಗಳ ಕೊರತೆ ಎದ್ದು ಕಾಣುತ್ತಿದೆ. ಗ್ರಾಮೀಣ ಪ್ರದೇಶದ ಗ್ರಂಥಾಲಯಗಳನ್ನು ಸರ್ಕಾರಿ ಅಧಿಕಾರಿಗಳು ಸಂಪೂರ್ಣ ಕಡೆಗಣಿಸಿದ್ದಾರೆ ಎಂದು ಮುಗಳಿ ಗ್ರಾಮದ ಶರಣಪ್ಪ ಮಲ್ಲಾಪುರ, ಹಿರೇಹಾಳ ಗ್ರಾಮದ ಸಿದ್ದು ಗುಡಿಮನಿ, ಹುಲ್ಲೂರ ಗ್ರಾಮದ ವೀರೇಶ ಅಡ್ನೂರ, ಕುರಹಟ್ಟಿ ಯಲ್ಲಪ್ಪ ಮೇಗೂರ ಆರೋಪಿಸಿದರು.
ಅನುದಾನದ ಸಮಸ್ಯೆ: ತಾಲೂಕಿನ ಎಲ್ಲ ಗ್ರಂಥಾಲಯಗಳು ಅನುದಾನದ ಕೊರತೆಯಿಂದ ಬಳಲುತ್ತಿವೆ. ಹೀಗಾಗಿ ಗ್ರಂಥಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಇಲಾಖೆಯ ಪ್ರತಿ ತಿಂಗಳು ರು. 2,500 ಸಂಬಳ ಸಕಾಲಕ್ಕೆ ದೊರಕುತ್ತಿಲ್ಲ. ಇದರಿಂದ ಗ್ರಂಥ ಪಾಲಕರು ತಮ್ಮ ಮಕ್ಕಳ ವಿದ್ಯಾಭ್ಯಾಸ, ಕುಟುಂಬ ನಿರ್ವಹಣೆ ನಿಭಾಯಿಸುವುದು ಕಷ್ಟಸಾಧ್ಯವಾಗಿದೆ ಎಂಬುದು ಗ್ರಂಥಪಾಲಕರ ಅಳಲಾಗಿದೆ. ಎಲ್ಲ ಗ್ರಂಥಾಲಯಗಳಿಗೆ ಸಕಾಲಕ್ಕೆ ಹಣ ನೀಡದ್ದರಿಂದ ದಿನ ಪತ್ರಿಕೆ, ವಾರ ಪತ್ರಿಕೆ, ಮಾಸ ಪತ್ರಿಕೆ ಹಾಗೂ ಅಗತ್ಯ ಪುಸ್ತಕಗಳು ಬರುತ್ತಿಲ್ಲ. 2005-06ರಲ್ಲಿ ಪುಸ್ತಕ ಪ್ರಾಧಿಕಾರ ಗ್ರಂಥಾಲಯಗಳಿಗೆ ಪುಸ್ತಕ ಒದಗಿಸಿದ್ದನ್ನು ಹೊರತುಪಡಿಸಿದರೆ ಈವರೆಗೂ ಹೊಸ ಪುಸ್ತಕಗಳು ಗ್ರಂಥಾಲಯ ಸೇರಿಲ್ಲ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement