ಸಂಕ್ಷಿಪ್ತ ಸುದ್ದಿ
ಪಾಲಕರ ಶ್ರಮ ಮುಖ್ಯ
ಗದಗ: ಒಬ್ಬ ವಿದ್ಯಾರ್ಥಿಯ ಶೈಕ್ಷಣಿಕ ಸಾಧನೆಗೆ ಶಿಕ್ಷಕರ ಪ್ರಯತ್ನ ಎಷ್ಟು ಅವಶ್ಯವೋ, ಅಷ್ಟೇ ಪಾಲಕರ ಪರಿಶ್ರಮವೂ ಅಗತ್ಯವಾಗಿದೆ ಎಂದು ಪ್ರಾ. ಎಸ್.ವಿ. ಸಂಕನೂರ ಹೇಳಿದರು. ಅವರು ಈಚೆಗೆ ನಗರದ ಶಿವಾನಂದ ವಿಜ್ಞಾನ ಕಾಲೇಜಿನಲ್ಲಿ ಜರುಗಿದ ಪಾಲಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಕೆಲವು ವಿದ್ಯಾರ್ಥಿಗಳು ಮೊಬೈಲ್ಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಕಂಡುಬರುತ್ತಿರುವುದರಿಂದ ಪಾಲಕರು ವಿದ್ಯಾರ್ಥಿಗಳಿಗೆ ಮೊಬೈಲ್ಗಳನ್ನು ನೀಡದೇ ಇರಲು ಸಲಹೆ ನೀಡಿದರು. ಎಸ್.ಎನ್. ಗದ್ದಿ, ಪ್ರಕಾಶ ಬಂಡಿ, ಬೋರಾ, ಮಮತಾಜ ಕಡಕೋಳ, ಎಚ್.ಎಸ್. ಹೊಂಬಳ, ಎಫ್.ಎಂ. ಅಣ್ಣಿಗೇರಿ, ಕುಲಕರ್ಣಿ ಮಾತನಾಡಿದರು. ಬಿ.ಎಸ್. ಹಳ್ಳದ, ಆರ್.ಎಚ್. ಪಾಟೀಲ, ಕೌಶಲ್ಯ ರಡ್ಡೇರ, ಬಿ.ವಿ. ಕೊಟ್ಟೂರ, ಸುಸ್ಮಿತಾ ಜೋಶಿ ಮುಂತಾದವರು ಉಪಸ್ಥಿತರಿದ್ದರು. ಮುರಲೀಧರ ಸಂಕನೂರ ಸ್ವಾಗತಿಸಿ, ನಿರೂಪಿಸಿದರು. ಕೃಷ್ಣಪ್ರಸಾದ ಜಾಧವ ವಂದಿಸಿದರು.
ಪ್ರಭುಲಿಂಗಪ್ಪ ನಿಧನ
ಗದಗ: ತಾಲೂಕಿನ ಹೊಸಹಳ್ಳಿಯ ನಿವಾಸಿಯಾದ ಪ್ರಭುಲಿಂಗಪ್ಪ ಶಿವಪ್ಪ ಬ್ಯಾಹಟ್ಟಿ (59) ಅವರು ಭಾನುವಾರ ಸಂಜೆ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಅಂತ್ಯಕ್ರಿಯೆ ಸೋಮವಾರ (ಡಿ. 23) ಮಧ್ಯಾಹ್ನ 1 ಗಂಟೆಗೆ ಸ್ವಗ್ರಾಮ ಹೊಸಹಳ್ಳಿಯ ರುದ್ರಭೂಮಿಯಲ್ಲಿ ನಡೆಯಲಿದೆ. ಮೃತರಿಗೆ ಪತ್ನಿ, ಓರ್ವ ಪುತ್ರಿ, ಮೂವರು ಪುತ್ರರು, ಮೂವರು ಸಹೋದರರು, ಸಹೋದರಿಯರು ಇದ್ದಾರೆ. ಪ್ರಭುಲಿಂಗಪ್ಪ ನಿಧನಕ್ಕೆ ಗ್ರಾಮದ ಬೂದೀಶ್ವರ ಸಂಸ್ಥಾನಮಠದ ಅಭಿನವ ಬೂದೀಶ್ವರ ಸ್ವಾಮೀಜಿ, ಗ್ರಾಮದ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಮಾಜಿ ಅಧ್ಯಕ್ಷ ಸಂಗಪ್ಪ ಬ್ಯಾಹಟ್ಟಿ ಸಂತಾಪ ಸೂಚಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ
ಗಜೇಂದ್ರಗಡ: ಸರ್ಕಾರ ನೀಡುವ ಸೌಲತ್ತನ್ನು ವಿದ್ಯಾರ್ಥಿಗಳು ಸದ್ವಿನಿಯೋಗಿಸಿಕೊಂಡು ವಿದ್ಯೆ ಸಂಪಾದಿಸಿ, ದೇಶದ ಸಮರ್ಥ ನಾಯಕರಾಗಿ ಹೊರಹೊಮ್ಮಿ ಎಂದು ಎಸ್ಡಿಎಂಸಿ ಅಧ್ಯಕ್ಷ ಎಸ್.ಎಂ. ಆರಗಿದ್ದಿ ಹೇಳಿದರು.
ಸ್ಥಳೀಯ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಪ್ರಸಕ್ತ ಸಾಲಿನ ಉಚಿತ ಸಮವಸ್ತ್ರ ವಿತರಣೆ ಸಮಾರಂಭದಲ್ಲಿ ಮಕ್ಕಳಿಗೆ ಸಮವಸ್ತ್ರ ವಿತರಿಸಿ ಮಾತನಾಡಿದರು. ಸಾಹಿತಿ ಎಫ್.ಎಸ್. ಕರಿದುರಗನವರ ಮಾತನಾಡಿ, ಶಿಕ್ಷಣ ಇಲಾಖೆ ಎಲ್ಲ ಮಕ್ಕಳಲ್ಲಿ ಸಮಾನತೆ ಮೂಡಿಸುವ ದಿಸೆಯಲ್ಲಿ ಏಕರೂಪದ ಸಮವಸ್ತ್ರದಂತಹ ಹಲವಾರು ಏಕತಾ ಮನೋಭಾವ ಮೂಡಿಸುವಂತಹ ಯೋಜನೆಗಳ ಮೂಲಕ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಶ್ರಮಿಸುತ್ತದೆ. ಶಿಕ್ಷಕ ಸಮೂಹ ಇಲಾಖೆಯ ಶ್ರಮಕ್ಕೆ ಸಹಕರಿಸಿ ಮಕ್ಕಳಲ್ಲಿ ಅಡಗಿರುವ ಕಲಾ ಕೌಶಲ್ಯತೆ ಅನಾವರಣಗೊಳಿಸುವತ್ತ ಮುಂದಾಗಬೇಕಿದೆ ಎಂದರು. ಮುಖ್ಯೋಪಾಧ್ಯಾಯ ಬಿ.ವೈ. ಕರ್ನೂಲ, ಅಶ್ರಫಲಿ ಗೊಡೇಕಾರ, ಅಬ್ದುಲಸಾಬ್ ಕಾತರಕಿ, ಎಸ್.ಕೆ. ಖೇಡಗಿ, ಬಿ.ಎಚ್. ಬಾಗವಾನ, ಎಸ್.ಬಿ. ಹನುಮಕ್ಕನವರ ಮುಂತಾದವರು ಉಪಸ್ಥಿತರಿದ್ದರು.