ಅಪಾಯಕಾರಿ ಅಸೂಟಿ ಕೆರೆ
ಕನ್ನಡಪ್ರಭ ವಾರ್ತೆ, ನರಗುಂದ, ಡಿ. 23
ಪಟ್ಟಣದಿಂದ ಒಂದು ಕಿ.ಮೀ. ದೂರದಲ್ಲಿ ರೋಣ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಅಸೂಟಿ ಕೆರೆ ಈ ಮಾರ್ಗದಲ್ಲಿ ಪ್ರಯಾಣಿಸುವವರಿಗೆ ಸದಾ ಆತಂಕವನ್ನು ಉಂಟುಮಾಡುತ್ತಲೇ ಇದೆ. ಈ ವರೆಗೆ ಹಲವು ಅಪಘಾತಗಳು ಇಲ್ಲಿ ಸಂಭವಿಸಿದ್ದರೂ ಯಾವುದೇ ಜನಪ್ರತಿನಿಧಿಗಳು, ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿಲ್ಲ.
ಈ ಕೆರೆ ಹುಬ್ಬಳ್ಳಿ-ಸೋಲ್ಲಾಪುರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿದ್ದು, ನಿತ್ಯ ಸಂಚರಿಸುವ ವಾಹನಗಳು ಸ್ವಲ್ಪವೇ ಏಮಾರಿದರೂ ಅಪಾಯ ಖಚಿತ. ಈ ಹಿಂದೆ ಸಂಭವಿಸಿದ ಹಲವು ಅಪಘಾತಗಳನ್ನು ಅದಕ್ಕೆ ಉದಾಹರಣೆಯಾಗಿ ನೀಡಬಹುದು.
ಅದೃಷ್ಟಕ್ಕೆ ಈ ಕೆರೆಯಲ್ಲಿ ನೀರು ತುಂಬಿರುವಾಗ ಯಾವುದೇ ವಾಹನ ಬಿದ್ದಿಲ್ಲ. ಹಾಗಾಗಿ ಭಾರಿ ಅನಾಹುತವಾಗಲಿ, ಜೀವಹಾನಿಯಾಗಲಿ ಈ ವರೆಗೆ ಆಗಿಲ್ಲ. ಒಮ್ಮೆ ಈ ಕೆರೆಯಲ್ಲಿ ವಾಹನ ಬಿದ್ದಾಗ ಹಿಂದೆಯೇ ಬಂದ ಇನ್ನೊಂದು ವಾಹನದಲ್ಲಿದ್ದ ಪ್ರಯಾಣಿಕರು ಜೀವರಕ್ಷಣೆ ಮಾಡಿದ್ದರು.
ಇಕ್ಕಟ್ಟು ರಸ್ತೆ: ಪಟ್ಟಣದ ರೈತರು ಹೆಚ್ಚು ನೀರಾವರಿ ಜಮೀನಗಳನ್ನು ಹೊಂದಿರುವ ಇದೇ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ. ಹಾಗಾಗಿ ಚಕ್ಕಡಿ, ಟ್ರ್ಯಾಕ್ಟರ್‌ಗಳೂ ಹೆಚ್ಚಿನ ಪ್ರಮಾಣದಲ್ಲಿ ಸಂಚರಿಸುತ್ತವೆ. ಇದು ವೇಗವಾಗಿ ಚಲಿಸುವ ವಾಹನಗಳಿಗೆ ಗೊಂದಲ ಉಂಟುಮಾಡುತ್ತವೆ. ಅಲ್ಲದೆ ಚಕ್ಕಡಿ, ಟ್ರ್ಯಾಕ್ಟರ್‌ಗಳು ರಸ್ತೆ ಬಿಟ್ಟಿಳಿಯುವುದು ಅನಿವಾರ್ಯವಾಗುತ್ತದೆ. ಆದರೆ ರಸ್ತೆ ಪಕ್ಕ ಸಾಕಷ್ಟು ಸ್ಥಳಾವಕಾಶವೂ ಇಲ್ಲ. ಈ ಸಂದರ್ಭದಲ್ಲಿ ಅಪಾಯ ಸಾಧ್ಯತೆ ಹೆಚ್ಚು.
ಇಷ್ಟೆಲ್ಲ ಅಪಾಯಕಾರಿಯಾಗಿದ್ದರೂ ಈ ವರೆಗೆ ಈ ಕೆರೆಗೆ ತಡೆಗೋಡೆ ನಿರ್ಮಿಸುವುದಾಗಲಿ, ರಸ್ತೆ ಅಗಲಗೊಳಿಸುವ ಕಾರ್ಯವಾಗಲಿ ಆಗಿಲ್ಲ. ಭಾರಿ ಅನಾಹುತ ಸಂಭವಿಸುವ ಪೂರ್ವದಲ್ಲಿಯೇ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಾಗಲಿ, ಲೋಕೋಪಯೋಗಿ ಇಲಾಖೆಯವರಾಗಲಿ, ತಾಲೂಕು ಆಡಳಿತವಾಗಲಿ ಎಚ್ಚೆತ್ತು ಕ್ರಮ ಕೈಗೊಳ್ಳಬೇಕಿದೆ.
ಎಸ್.ಜಿ. ತೆಗ್ಗಿನಮನಿ