ದುಶ್ಚಟದಿಂದ ಜೀವನ ಹಾಳು
ಲಕ್ಷ್ಮೇಶ್ವರ: ಮಾನವ ಜನ್ಮ ದೇವರು ಕೊಟ್ಟ ಅಮೂಲ್ಯ ಕಾಣಿಕೆಯಾಗಿದೆ ದುಶ್ಚಟಗಳ ದಾಸರಾಗಿ ಮಾನವ ಜನ್ಮ ಹಾಳು ಮಾಡಿಕೊಳ್ಳಬೇಡಿ ಎಂದು ಬಾಲೆಹೊಸೂರಿನ ಕುಮಾರ ದಿಂಗಾಲೇಶ್ವರ ಶ್ರೀಗಳು ಹೇಳಿದರು.
ಅವರು ಸೋಮವಾರ ಸಮೀಪದ ಸೂರಣಗಿ ಗ್ರಾಮದಲ್ಲಿ 2014ರ ಮಾರ್ಚ್ 7, 8 ಮತ್ತು 9 ರಂದು ನಡೆಯುವ ಬಾಲೆಹೊಸೂರ ದಿಂಗಾಲೇಶ್ವರ ಮಠ ಹಾಗೂ ದಾಸೋಹ ಮನೆಯ ಲೋಕಾರ್ಪಣೆ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿರುವ 111 ಗ್ರಾಮಗಳ ಪಾದಯಾತ್ರೆ ಹಾಗೂ ಚಟಭಿಕ್ಷೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮನುಷ್ಯ ಕುಲಕ್ಕೆ ಅಂಟಿಕೊಂಡಿರುವ ಶಾಪಗಳ ವಿಮೋಚನೆಗೆ ನಾವುಗಳು ಪ್ರಯತ್ನಿಸಬೇಕಾಗಿದೆ. ನಮ್ಮ ಜನ್ಮ ಪಾವನವಾಗಬೇಕಾದರೆ ನಮ್ಮ ಆಚಾರ ವಿಚಾರಗಳು ಶುದ್ಧವಾಗಿರಬೇಕು. ಗ್ರಾಮದಲ್ಲಿ ಪ್ರತಿಯೊಂದು ಮನೆಯು ಶೌಚಾಲಯ ಹೊಂದುವ ಮೂಲಕ ತಮ್ಮ ಮನೆಯ ಹೆಣ್ಣು ಮಕ್ಕಳ ಮಾನ ರಕ್ಷಣೆಗೆ ಮುಂದಾಗುವ ಕಾರ್ಯ ಮಾಡಬೇಕು. ನಿಮ್ಮಲ್ಲಿನ ದುಶ್ಚಟಗಳನ್ನು ನಮ್ಮ ಜೋಳಿಗೆಗೆ ಹಾಕಿ ಸದ್ಗುಣಗಳನ್ನು ಪಡೆದುಕೊಳ್ಳಬೇಕು. ನಿಮ್ಮೂರಲ್ಲಿ ಯಾವುದಾದರೂ ಅನಾಥ ಮಕ್ಕಳಿದ್ದರೆ ಅವುಗಳನ್ನು ಶ್ರೀಮಠಕ್ಕೆ ನೀಡಿದಲ್ಲಿ ಆ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಿ ದೇಶದ ಉತ್ತಮ ಪ್ರಜೆಯಾಗುವಂತೆ ರೂಪಿಸುವ ಜವಾಬ್ದಾರಿ ನಮ್ಮದು ಎಂದರು.
ಕೆಎಂಎಫ್ ಅಧ್ಯಕ್ಷ ಬಸವರಾಜ ಅರಬಗೊಂಡ ಕ್ಷೀರ ಕುಂಭೋತ್ಸವಕ್ಕೆ ಹಾಲನ್ನು ಕೆಎಂಎಫ್ ಸಂಸ್ಥೆಯ ವತಿಯಿಂದ ನೀಡಲಾಗುವುದು ಎಂದರು. ಗುಡೂರಿನ ಅನ್ನದಾನೀಶ್ವರ ಶ್ರೀಗಳು ಪ್ರಾಸ್ತಾವಿಕ ಮಾತನಾಡಿದರು.
ತಂಬಾಕು, ಮದ್ಯ, ಗುಟಕಾ ಬಿಡಿ, ಸಿಗರೇಟ್ ಚಟಕ್ಕೆ ಅಂಟಿಕೊಂಡಿರುವ ಜನತೆಯನ್ನು ವೇದಿಕೆಯ ಮೇಲೆ ಕರೆಯಿಸಿ ಅವರಿಂದ ಚಟ ಬಿಡುತ್ತೇವೆ ಎಂದು ಪ್ರಮಾಣ ಮಾಡಿಸಿಕೊಂಡು, ಮಾದಕ ವಸ್ತುಗಳನ್ನು ತಮ್ಮ ಜೋಳಿಗೆಗೆ ಹಾಕಿಸಿಕೊಂಡು ಅವರಿಂದ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿಸಿದ್ದು ವಿಶೇಷವಾಗಿತ್ತು. ಹಂದಿಗನೂರಿನ ಶಿವಲಿಂಗ ಶ್ರೀಗಳು, ನೀರಲಗಿಯ ನಿಜಶಿವಲಿಂಗ ಶ್ರೀಗಳು, ಹಾರನಾಳದ ಸಂಗನಬಸವ ಶ್ರೀಗಳು ಫಕ್ಕಿರಯ್ಯ ಹಿರೇಮಠ, ಡಾ. ಎನ್.ವಿ. ಹೆಬಸೂರ, ಬಸಣ್ಣ ಸಾಸಲವಾಡ, ವೀರಪ್ಪ ದುರಗದ, ಎಸ್.ಬಿ. ಅಣ್ಣಿಗೇರಿ ಮುಂತಾದವರು ಉಪಸ್ಥಿತರಿದ್ದರು. ನಾಗರಾಜ ಪೂಜಾರ ಹಾಗೂ ಎಸ್.ಎಸ್. ಇಟಗಿ ನಿರೂಪಿಸಿದರು.