ಬಸ್ ನಿಲ್ದಾಣದ ದುರವಸ್ಥೆ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಡಿ. 23
ಪಟ್ಟಣದ ಬಸ್ ನಿಲ್ದಾಣ ಸೂಕ್ತ ನಿರ್ವಹಣೆ ಇಲ್ಲದೆ, ನಿರ್ಲಕ್ಷ್ಯದಿಂದ ಅವ್ಯವಸ್ಥೆಯ ಆಗರವಾಗಿದೆ.
ವಾ.ಕ.ರಾ.ರ. ಸಾರಿಗೆ ಸಂಸ್ಥೆ ಬಸ್ ನಿಲ್ದಾಣ ತುಂಬೆಲ್ಲಾ ತಗ್ಗು ದಿನ್ನೆಗಳದ್ದೇ ಪಾರುಪತ್ಯ. ನಿಲ್ದಾಣದ ಆವರಣದ ಸುತ್ತಲೂ ಅಶುಚಿತ್ವ ತಾಂಡವವಾಡುತ್ತಿದೆ. ಇದು ಐತಿಹಾಸಿಕ ನಗರದ ಕಳಂಕಕ್ಕೆ ಕಾರಣವಾಗಿದೆ. ಇಲ್ಲಿಗೆ ಆಗಮಿಸುವ ಸಾರ್ವಜನಿಕರು ಅವ್ಯವಸ್ಥೆ ಕಂಡು ಹಿಡಿಶಾಪ ಹಾಕಿ ಹೋಗದೇ ಇರಲಾರರು. ಐತಿಹಾಸಿಕ ಪಟ್ಟಣ ಎಂದು ದೂರದಿಂದ ಭವ್ಯ ಗುಡ್ಡದ ದೃಶ್ಯ ನೋಡಿ ಅದ್ಭುತ ಎಂದು ಬಣ್ಣಿಸುತ್ತಾರೆ. ಆದರೆ, ಬಸ್‌ನಿಲ್ದಾಣದಲ್ಲಿ ಕಾಲಿರಿಸಿದರೆ ಇಲ್ಲಿನ ಅವ್ಯವಸ್ಥೆ ಕಂಡು ಪ್ರಯಾಣಿಕರು ಇದೇನಾ ಐತಿಹಾಸಿಕ ನಗರ ಎಂದು ಮೂಗು ಮುರಿಯುವಂತಾಗಿದೆ. ಇದು ಪಟ್ಟಣಕ್ಕೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ.
ಕಾಂಪೌಂಡ್ ಗೋಡೆಯೇ ಮೂತ್ರಾಲಯ: ವಿಶಾಲವಾದ ಆವರಣದ ಕಾಂಪೌಂಡ್ ಗೋಡೆಯ ಸುತ್ತಲೂ ಬಯಲು ಶೌಚಾಲಯವಾಗಿ ಮಾರ್ಪಟ್ಟಿದೆ. ಪ್ರಯಾಣಿಕರು ಬಸ್‌ಗಳು ನಿಲ್ಲುವ ಸ್ಥಳದ ಎದುರಿನಲ್ಲಿಯೇ ಮೂತ್ರ ವಿಸರ್ಜನೆ ಮಾಡುವುದರಿಂದ ಗಲೀಜು ಗಬ್ಬೆದ್ದು ನಾರುತ್ತಿದೆ. ಅಲ್ಲದೇ ಇದರಿಂದ ಮಹಿಳೆಯರು ತೀವ್ರ ಮುಜುಗರ ಸ್ಥಿತಿ ಎದುರಿಸುತ್ತಿದ್ದಾರೆ.
ನಿಲ್ದಾಣದ ತುಂಬೆಲ್ಲಾ ಕಸವೋ ಕಸ..ಬಸ್ ನಿಲ್ದಾಣದ ಪಕ್ಕದ ಕೆಲ ಅಂಗಡಿ ಮಾಲೀಕರು ಕಸದ ರಾಶಿಯನ್ನು ನಿಲ್ದಾಣದ ಆವರಣದಲ್ಲಿಯೇ ಶೇಖರಿಸುವುದರಿಂದ ಇಲ್ಲಿ ಹಂದಿಗಳು ವಾಸಸ್ಥಾನ ಮಾಡಿಕೊಂಡಿವೆ. ಇಲ್ಲಿಂದ ಹೊರಡುವ ದುರ್ವಾಸನೆಯಿಂದ ಪ್ರಯಾಣಿಕರು ಬಾಯಿ, ಮೂಗು ಮುಚ್ಚಿಕೊಂಡು ಸಂಚರಿಸುವಂತಹ ದುಸ್ಥಿತಿ ನಿರ್ಮಾಣವಾಗಿದೆ. ಪ್ರಯಾಣಿಕರು ತೀವ್ರ ಪ್ರಯಾಸ ಪಡುತ್ತಿದ್ದರೂ ಅಧಿಕಾರಿಗಳು ಜಾಣ ಕುರುಡತನ ಪ್ರದರ್ಶಿಸುತ್ತಿದ್ದಾರೆ. ಸಾರಿಗೆ ಸಂಸ್ಥೆಯ ಭದ್ರತಾ ಸಿಬ್ಬಂದಿಯಂತೂ ನಮಗೂ ಇದಕ್ಕೂ ಏನೂ ಸಂಬಂಧ ಇಲ್ಲವೆಂಬಂತೆ ವರ್ತಿಸುತ್ತಿದ್ದಾರೆ.
ಕಿತ್ತುಹೋದ ಡಾಂಬರೀಕರಣ: ನಿಲ್ದಾಣದಲ್ಲಿ ಮೂಲ ಸೌಲಭ್ಯಗಳ ಕೊರತೆ ನೀಗಿಸಲು ಯಾರೂ ಇಲ್ಲದಂತಾಗಿದೆ. ನಿಲ್ದಾಣದಲ್ಲಿ ಡಾಂಬರೀಕರಣ ಮಾಡಿದ್ದರೂ ತಗ್ಗು ದಿನ್ನೆಗಳು ಹೆಚ್ಚಿವೆ. ನಿಲ್ದಾಣ ತಗ್ಗು ಪ್ರದೇಶದಲ್ಲಿ ಇದ್ದುದರಿಂದ ಪಟ್ಟಣದ ಎಲ್ಲ ಬಡಾವಣೆಗಳ ಚರಂಡಿ ಕೊಳಚೆ, ಮಳೆ ನೀರು ಭಾರಿ ಪ್ರಮಾಣದಲ್ಲಿ ಹರಿದು ಸೇರುತ್ತದೆ. ಪ್ರತಿ ತಿಂಗಳು ಗಜೇಂದ್ರಗಡ ಸಾರಿಗೆ ಘಟಕದಿಂದ ಲಕ್ಷಾಂತರ ಹಣ ಆದಾಯ ಬರುತ್ತದೆ. ಇದು ಗದಗ ವಿಭಾಗದಲ್ಲೇ ಅತಿ ಹೆಚ್ಚು ಲಾಭದಾಯಕ ಘಟಕವೆಂಬ ಖ್ಯಾತಿ ಇದೆ. ಆದರೆ, ನಿಲ್ದಾಣದ ದುರವಸ್ಥೆ ಪಟ್ಟಣದ ಘನತೆಗೆ ಚ್ಯುತಿ ತಂದಿದೆ. ಇದನ್ನು ತ್ವರಿತವಾಗಿ ಸರಿ ಪಡಿಸಬೇಕು. ಉದಾಸೀನತೆ ತೋರಿದರೆ ಪ್ರತಿಭಟನೆಗೆ ಇಳಿಯಬೇಕಾಗುತ್ತದೆ ಎಂದು ಇಲ್ಲಿನ ಸಾರ್ವಜನಿಕರು ಎಚ್ಚರಿಸಿದ್ದಾರೆ.
ಡಿ.ಜಿ. ಮೋಮಿನ್