ಕನ್ನಡಕ್ಕಾಗಿ ಕೈ ಎತ್ತುವುದು ಎಲ್ಲರ ಕರ್ತವ್ಯ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಡಿ. 24
ನಾಡಿನ ನೆಲ, ಜಲ, ಭಾಷೆ ಮತ್ತು ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಕರವೇ ಕಾರ್ಯಕರ್ತರು ಹೋರಾಟ ಮಾಡುತ್ತಾ ಬಂದಿದ್ದಾರೆ. ಅದರೆ, ಕನ್ನಡ, ಕನ್ನಡಿಗರ ಸ್ವಾಭಿಮಾನದ ರಕ್ಷಣೆಗೆ ಕೆಚ್ಚೆದೆಯಿಂದ ಹೋರಾಟಕ್ಕಿಳಿಯುವುದು ಪ್ರತಿಯೊಬ್ಬ ಕನ್ನಡಿನ ಆದ್ಯ ಕರ್ತವ್ಯವಾಗಿದೆ ಎಂದು ಗದಗ ಜಿಲ್ಲಾ ಕರವೇ ಅಧ್ಯಕ್ಷ ಹನುಮಂತಪ್ಪ ಅಬ್ಬಿಗೇರಿ ಹೇಳಿದರು.
ಅವರು ಸೋಮವಾರ ರಾತ್ರಿ ಪಟ್ಟಣದ ಬಾನುಮಾರ್ಕೆಟ್ನಲ್ಲಿ ನಡೆದ ಶಿರಹಟ್ಟಿ ತಾಲೂಕು ಕನ್ನಡಿಗರ ಸಮಾವೇಶ, ರೈತ ದಿನಾಚರಣೆ ಹಾಗೂ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ರಕ್ಷಣಾ ವೇದಿಕೆ ಕಾರ್ಯಕರ್ತರು ಯಾವುದೇ ಸ್ವಾರ್ಥವಿಲ್ಲದೇ ದೇಶದ ಬೆನ್ನೆಲುಬಾದ ರೈತರ, ಸಾಮಾನ್ಯ ಜನರ ಆಶೋತ್ತರಗಳಿಗೆ ಸ್ಫಂದಿಸುವ, ಅವರಿಗಾಗುವ ಅನ್ಯಾಯದ ವಿರುದ್ಧ ಎಂತಹ ದೈತ್ಯ ಶಕ್ತಿಯನ್ನೂ ಎದುರಿಸಿ ಸದೆ ಬಡೆಯುವ ಮನೋಬಲವನ್ನು ಹೊಂದಿದ್ದೇವೆ ಎಂದರು. ಪುರಸಭೆಯ ಅಧ್ಯಕ್ಷೆ ಗಂಗಮ್ಮ ಫಕ್ಕೀರಸ್ವಾಮಿಮಠ ಮಾತನಾಡಿ, ನಮ್ಮ ನಾಡು, ನುಡಿ ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ಕನ್ನಡದ ತಾಯಿಗೆ ಎಲ್ಲರನ್ನೂ ಸಾಕಿ ಸಲಹುವ ವಿಶಾಲ ಹೃದಯದ, ಉದಾರವಾದ ಮನಸ್ಸನ್ನು ಅನ್ಯರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಉದ್ಯೋಗದಲ್ಲಿ ಕನ್ನಡಿಗರಿಗೆ ಪ್ರಾಶಸ್ತ್ಯ ಹಾಗೂ ನಾಡಿನ ಎಲ್ಲ ಆಶೋತ್ತರಗಳ ಈಡೇರಿಕೆಗಾಗಿ ತಾಯಿ ನಾಡು ನುಡಿಯ ರಕ್ಷಣೆಗಾಗಿ ಕರ್ನಾಟಕದಲ್ಲಿದ್ದುಕೊಂಡೇ ಹೋರಾಟ ಮಾಡುವಂತಹ ಪರಿಸ್ಥಿತಿ ಉದ್ಭವವಾಗಿರುವುದು ದುರ್ದೈವದ ಸಂಗತಿಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪುರಸಭೆಯ ಮಾಜಿ ಅಧ್ಯಕ್ಷ ಎನ್.ಜಿ. ಹೊಂಬಳ ಮಾತನಾಡಿದರು. ಸ್ಥಳೀಯ ಹತ್ತಾರು ಪ್ರಗತಿಪರ ರೈತರಿಗೆ ಹಾಗೂ ಕೆಸಿಸಿ ಬ್ಯಾಂಕ್ ನಿರ್ದೇಶಕ ಶಿವಣ್ಣ ನೆಲವಿಗಿ ಅವರನ್ನು ಸನ್ಮಾನಿಸಲಾಯಿತು. ಪ್ರಾರಂಭದಲ್ಲಿ ರಾಷ್ಟ್ರಕವಿ ಜಿಎಸ್.ಎಸ್. ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಅತಿಥಿಗಳಾಗಿ ಮಾಜಿ ಶಾಸಕ ರಾಮಣ್ಣ ಲಮಾಣಿ, ಪುರಸಭೆಯ ಉಪಾಧ್ಯಕ್ಷ ಎಂ.ಆರ್. ಪಾಟೀಲ, ಅಂಜುಮನ್ ಕಮಿಟಿ ಅಧ್ಯಕ್ಷ ಗೌಸುಸಾಬ ಕಾರಡಗಿ, ಪುರಸಭೆಯ ಮಾಜಿ ಅಧ್ಯಕ್ಷೆ ಜಯಮ್ಮ ಕಳ್ಳಿ, ಸದಸ್ಯ ನಾಗಪ್ಪ ಓಂಕಾರಿ, ವಿಜಯಕುಮಾರ ಹತ್ತಿಕಾಳ, ಲೋಕೇಶ ದೊಡ್ಡಮನಿ, ಜಿಲ್ಲಾ ಕರವೇ ಕಾರ್ಯದರ್ಶಿ ಡಾ. ಜಯಕುಮಾರ ಬ್ಯಾಳಿ, ಉಪಾಧ್ಯಕ್ಷ ಮಹೇಶ ಮೇಟಿ, ಮುತ್ತಣ್ಣ ಅನ್ವಲ, ಮೆಹಬೂಬ ಕುರ್ತಕೋಟಿ, ಮಾಲತೇಶ ರಗಟಿ, ದತ್ತು ಬಾಕಳೆ, ತಾಲೂಕು ಕರವೇ ಕಾರ್ಯದರ್ಶಿ ತನ್ವೀರ ಮುಳಗುಂದ, ನಗರ ಘಟಕ ಅಧ್ಯಕ್ಷ ನಾಗೇಶ ಅಮರಾಪುರ ಮುಂತಾದವರು ಉಪಸ್ಥಿತರಿದ್ದರು. ಕರೇವಾಡಿಮಠ ನಿರೂಪಿಸಿದರು. ತಾಲೂಕು ಕರವೇ ಅಧ್ಯಕ್ಷ ಶರಣು ಗೋಡಿ ಸ್ವಾಗತಿಸಿದರು. ಹೊಳಲಪ್ಪಗೌಡ ಪಾಟೀಲ ವಂದಿಸಿದರು.