ಕಲಿಕೋತ್ಸವ ಮಕ್ಕಳಿಗೆ ಸೂಕ್ತ ವೇದಿಕೆ
ನರೇಗಲ್ಲ: ಕಲಿಕೋತ್ಸವ ಕಾರ್ಯಕ್ರಮವು ತರಗತಿವಾರು ಹಾಗೂ ವಿಷಯವಾರು ಪ್ರತಿ ವಿದ್ಯಾರ್ಥಿಯನ್ನು ಗುರುತಿಸಲು ಇದೊಂದು ಸೂಕ್ತ ವೇದಿಕೆಯಾಗಿದೆ ಎಂದು ರೋಣ ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಐ. ಅಸುಂಡಿ ಹೇಳಿದರು. ಅವರು ಈಚೆಗೆ ಸಮೀಪದ ಕೋಚಲಾಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನರೇಗಲ್ಲ ಕ್ಲಸ್ಟರ್ ಮಟ್ಟದ 2013-14ರ ಕಲಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರತಿಯೊಂದು ಮಗುವಿನಲ್ಲಿ ಒಂದಲ್ಲ ಒಂದು ವಿಶಿಷ್ಟ ಕಲೆ ಇದ್ದೇ ಇರುತ್ತದೆ. ಕಲಿಕೋತ್ಸವ ಎಂಬುದು ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರಸೂಸುವ ವೇದಿಕೆಯಾಗಿದೆ ಎಂದರು. ಗದಗ ಡಯಟ್ ಹಿರಿಯ ಉಪನ್ಯಾಸಕ ಕೆ.ವಿ. ಪಾಟೀಲ ಮಾತನಾಡಿ, ಮಕ್ಕಳ ಶೈಕ್ಷಣಿಕ ಹಾಗೂ ಬೌದ್ಧಿಕ ಬೆಳಣಿಗೆಗೆ ಈ ಕಾರ್ಯಕ್ರಮ ಆಯೋಜಿಸಿದ್ದು, ಅವರ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಲಿದೆ ಎಂದರು. ಪಪಂ ಅಧ್ಯಕ್ಷೆ ಬಸವ್ವ ಲಕ್ಕನಗೌಡ್ರ ಉದ್ಘಾಟಿಸಿ ಮಾತನಾಡಿದರು. ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಎ.ಜಿ. ಮಾಲಗಿತ್ತಿಮಠ ಅಧ್ಯಕ್ಷತೆ ವಹಿಸಿದ್ದರು. ಪಪಂ ಉಪಾಧ್ಯಕ್ಷೆ ಅನ್ನಪೂರ್ಣ ಗಿಂಡಿ, ಸದಸ್ಯ ಸುನೀಲ ಬಸವರಡ್ಡೇರ, ಉಪ ಯೋಜನಾಧಿಕಾರಿ ಐ.ಆರ್. ಅಕ್ಕಿ, ಕ್ಷೇತ್ರ ಸಮನ್ವಯಾಧಿಕಾರಿ ಐ.ಎಸ್. ಮಡಿವಾಳರ, ಸಿಆರ್ಪಿ ಕೆ.ಎಸ್. ಅಣಗೌಡ್ರ, ಮತ್ತು ಶಾಲಾ ಎಸ್.ಡಿ.ಎಂ.ಸಿ. ಸದಸ್ಯರು ಉಪಸ್ಥಿತರಿದ್ದರು. ಮು. ಎ.ಎಸ್. ಮಲಕಸಮುದ್ರಮಠ ಸ್ವಾಗತಿಸಿದರು. ಶಿಕ್ಷಕಿ ಶೈಲಜಾ ನಿರೂಪಿಸಿದರು. ಎಸ್.ಡಿ. ಕೊಟ್ಟೂರಶೆಟ್ರ ವಂದಿಸಿದರು.