ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಬಸವತತ್ವ ಮೌಲ್ಯ ಬಿತ್ತುವ ಸಾಧನ

Vishwanath S
Updated On : 25 Dec 2013, 12:44 pm

ಕನ್ನಡಪ್ರಭ ವಾರ್ತೆ, ಗದಗ, ಡಿ. 24
ಬಸವ ತತ್ವಗಳು ಜೀವನದ ಮೌಲ್ಯ ಬಿತ್ತುವ ಸಾಧನಗಳು. ಅವುಗಳ ಪ್ರಸಾರ, ಆಚರಣೆ ಕುರಿತು ಬಸವಪರ ಸಂಘಟನೆಗಳು, ಬಸವಾಭಿಮಾನಿಗಳು ಜನಮಾನಸದಲ್ಲಿ ಅವುಗಳ ಪ್ರಸಾರ ಹಾಗೂ ಜಾಗೃತಿಗೆ ಶ್ರಮಿಸಬೇಕೆಂದು ಹೈಕೋರ್ಟನ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ ಕರೆ ನೀಡಿದರು.
ಅವರು ಮಂಗಳವಾರ ಸ್ಥಳೀಯ ಶಿವಾನಂದ ನಗರದಲ್ಲಿರುವ ಬಸವಮಂಟಪದಲ್ಲಿ ಬಸವದಳದ 20ನೇ ವಾರ್ಷಿಕೋತ್ಸವದ ಅಂಗವಾಗಿ ಬಸವತತ್ವದರ್ಶನ ಕುರಿತು ಸಂತೆಕಡೂರಿನ ಬಸವನವಲಿಂಗ ಶರಣರಿಂದ 10 ದಿನಗಳ ಕಾಲ ನಡೆದ ಪ್ರವಚನ ಕಾರ್ಯಕ್ರಮದ ಸಮಾರೋಪ, ಸ್ಮರಣ ಸಂಚಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಸವಾದಿ ಶರಣರಿಂದ ರಚಿತ ವಚನಗಳ ಪ್ರವಚನವನ್ನು ಲಿಂ. ಲಿಂಗಾನಂದ ಮಹಾಸ್ವಾಮಿಗಳಿಂದ ಕೇಳಿ ಪ್ರಭಾವಿತನಾಗಿ ಬದುಕಿನುದ್ದಕ್ಕೂ ಬಸವತತ್ವಾದರ್ಶಗಳ ಪರಿಪಾಲನೆ ಮಾಡಿದ್ದರಿಂದ ಸಂತೃಪ್ತ ಬದುಕು ತಮ್ಮದಾಗಿದೆ. ಮೌಢ್ಯರಹಿತವಾದ ಜೀವನಕ್ಕೆ ಬಸವತತ್ವಗಳು ದಾರಿದೀಪವಾಗಿವೆ. ಜನಸಾಮಾನ್ಯರ ಮೌಢ್ಯಗಳಿಗಿಂತ ತಿಳಿದವರು ಎನಿಸಿಕೊಂಡಿರುವವರು ಹೊಂದಿರುವ ಮೌಢ್ಯ ಹೆಚ್ಚು ಆತಂಕಕಾರಿ ಎಂದು ಕಳವಳ ವ್ಯಕ್ತಪಡಿಸಿದರು.
ವಿಶ್ವಮಾನ್ಯವಾದ ಬಸವತತ್ವಗಳ ಪ್ರಣೀತ ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮವನ್ನಾಗಿ ಸಂವಿಧಾನದ ಮಾನ್ಯತೆ ಪಡೆವ ಕೆಲಸ ನ್ಯಾಯಾಲಯದಿಂದ ಆಗಬೇಕಾದರೆ ಲಿಂಗಾಯತ ಸಮುದಾಯದ ಎಲ್ಲ ಜನತೆ ಒಂದಾಗಬೇಕು.
ಅಲ್ಲಲ್ಲಿ ಇರುವ ತಾತ್ವಿಕ ಭಿನ್ನಾಭಿಪ್ರಾಯ ಮರೆತು ಇಡಿ ಸಮುದಾಯದ ಹಿತ ಸಾಧನೆಗೆ ಮುಂದಾಗಬೇಕು. ಬಸವ ತತ್ವನಿಷ್ಟ ಸಂಘಟನೆಗಳಲ್ಲೂ ಕೂಡ ಕೆಲವೆಡೆ ಭಿನ್ನಾಭಿಪ್ರಾಯಗಳಿರುವುದು ನಿವಾರಣೆ ಆಗಬೇಕು. ಈ ಹಿನ್ನೆಲೆಯಲ್ಲಿ ಇವ ನಮ್ಮವ ಇವ ನಮ್ಮವ ಎನ್ನುವ ಬಸವತತ್ವಗಳ ಪ್ರಸಾರ ಹಾಗೂ ಆಚರಣೆ ಇನ್ನೂ ಹೆಚ್ಚಬೇಕು ಎಂದರು.
ಸಾನ್ನಿಧ್ಯವಹಿಸಿ, ಬಸವದಳದ 20ನೇ ವಾರ್ಷಿಕೋತ್ಸವ ನಿಮಿತ್ತ ಹೊರತಂದ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದ ಜ. ತೋಂಟದ ಡಾ. ಸಿದ್ದಲಿಂಗ ಶ್ರೀಗಳು ಆಶೀರ್ವಚನ ನೀಡಿ, ಬಸವತತ್ವಗಳ ಕುರಿತು ತಿಳಿವ ಹಾಗೂ ತಿಳಿದಿದ್ದನ್ನು ಶಿರಸಾವಹಿಸಿ ಜೀವನದಲ್ಲಿ ಆಚರಣೆಗೆ ತರುವ ಮನೋಭಾವ ಎಲ್ಲರದ್ದಾಗಬೇಕು. ಬಸವತತ್ವಗಳ ಪ್ರಸಾರಕ್ಕೆ ಅನುಭಾವಿಗಳ ಅವಶ್ಯಕತೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ನಿಸ್ವಾರ್ಥ, ಸರಳತೆಯ ವ್ಯಕ್ತಿತ್ವದ ಸಾಧಕರಾದ ಬಸವ ನವಲಿಂಗ ಶರಣರು 10 ದಿನಗಳ ಕಾಲ ನಡೆಸಿಕೊಂಡು ಬಂದ ಬಸವತತ್ವದರ್ಶನ ಪ್ರವಚನ ಮಾಲಿಕೆ ತುಂಬಾ ಅಭಿನಂದನೀಯ ಕಾರ್ಯ. ಇದಕ್ಕಾಗಿ ಶ್ರಮಿಸಿದ ಬಸವದಳದ ಎಲ್ಲರೂ ಅಭಿನಂದನಾರ್ಹರು ಎಂದರು. ಅಧ್ಯಕ್ಷತೆ ವಹಿಸಿದ್ದ ಬಸವದಳದ ಅಧ್ಯಕ್ಷ ಎಂ.ಬಿ. ಲಿಂಗಧಾಳ ಪ್ರಾಸ್ತಾವಿಕ ಮಾತನಾಡಿದರು.
ಕುಂದಗೋಳದ ಬಸಯ್ಯ ಶ್ರೀಗಳು, ನಗರಸಭೆ ಸದಸ್ಯ ಸದಾನಂದ ಪಿಳ್ಳೆ, ನವಕರ್ನಾಟಕ ವೇದಿಕೆ ಜಿಲ್ಲಾಧ್ಯಕ್ಷ ಶಿವಕುಮಾರ ರಾಮನಕೊಪ್ಪ, ಎಚ್.ಎಲ್. ನಾಗನಾಥ, ಆರ್.ಬಿ. ರಾಮಡಗಿ, ವಿ.ಕೆ. ಕರಿಗೌಡ್ರ, ಎಸ್.ಎಸ್. ಪಾಟೀಲ, ಶಿವಾನಂದ ಹೊಂಬಳ, ನೀಲಗುಂದಮಠ ಮುಂತಾದವರು ಪಾಲ್ಗೊಂಡಿದ್ದರು. 10 ದಿನಗಳ ಪ್ರವಚನ ನೀಡಿದ ಬಸವನವಲಿಂಗ ಶರಣರು ಹಾಗೂ ಸಾನ್ನಿಧ್ಯ ವಹಿಸಿದ್ದ ಜ. ತೋಂಟದ ಸಿದ್ದಲಿಂಗ ಶ್ರೀಗಳನ್ನು ಬಸವದಳದಿಂದ ಸನ್ಮಾನಿಸಲಾಯಿತು.
ಸೋಮವಾರ ನಿಧನರಾದ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬಸವದಳದ ಕಾರ್ಯಾಧ್ಯಕ್ಷ ಪ್ರಕಾಶ ಅಸುಂಡಿ ಸ್ವಾಗತಿಸಿದರು. ಗೌರಕ್ಕ ಬಡಿಗಣ್ಣವರ ನಿರೂಪಿಸಿದರು. ಎಸ್.ಎ. ಮುಗದ ವಂದಿಸಿದರು.
ಬಸವತತ್ವಗಳ ಕುರಿತು ತಿಳಿವ ಹಾಗೂ ತಿಳಿದಿದ್ದನ್ನು ಶಿರಸಾವಹಿಸಿ ಜೀವನದಲ್ಲಿ ಆಚರಣೆಗೆ ತರುವ ಮನೋಭಾವ ಎಲ್ಲರದ್ದಾಗಬೇಕು. ಬಸವತತ್ವಗಳ ಪ್ರಸಾರಕ್ಕೆ ಅನುಭಾವಿಗಳ ಅವಶ್ಯಕತೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ನಿಸ್ವಾರ್ಥ, ಸರಳತೆಯ ವ್ಯಕ್ತಿತ್ವದ ಸಾಧಕರಾದ ಬಸವ ನವಲಿಂಗ ಶರಣರು 10 ದಿನಗಳ ಕಾಲ ನಡೆಸಿಕೊಂಡು ಬಂದ ಬಸವತತ್ವದರ್ಶನ ಪ್ರವಚನ ಮಾಲಿಕೆ ತುಂಬಾ ಅಭಿನಂದನೀಯ ಕಾರ್ಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement