ಶಿಕ್ಷಣದಿಂದ ಆದರ್ಶ ಸಮಾಜ ನಿರ್ಮಾಣ
ಶಿರಹಟ್ಟಿ: ತಂತ್ರಜ್ಞಾನ ಹಾಗೂ ದೂರದರ್ಶನಗಳ ಪ್ರಭಾವ ಎದುರಿಸಿ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಆದರ್ಶ ಸಮಾಜ ನಿರ್ಮಾಣ ಮಾಡುವಂತೆ ಜಿಲ್ಲಾಪಂಚಾಯಿತಿ ಅಧ್ಯಕ್ಷೆ ಕಮಲವ್ವ ಸಜ್ಜನ ಹೇಳಿದರು. ಅವರು ತಾಲೂಕಿನ ಮಾಚೇನಹಳ್ಳಿ ಗ್ರಾಮದ ನಿಂಗರಡ್ಡಿ ತಿಮ್ಮರಡ್ಡಿ ತಾರಿಕೊಪ್ಪ ಸರ್ಕಾರಿ ಪ್ರೌಢ ಶಾಲೆಯಲ್ಲಿ 2013-14ನೇ ಸಾಲಿನಲ್ಲಿ 8ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ವ್ಯಾಸಂಗ ಮಾಡುವ ವೇಳೆ ವಿದ್ಯಾರ್ಥಿಗಳು ಮೊಬೈಲ್ ದಾಸರಾಗುತ್ತಿದ್ದಾರೆ. ಇದರಿಂದಾಗಿ ತಮ್ಮ ಕಲಿಯುವ ದಿನಗಳಲ್ಲಿ ಪಾಠ-ಆಟದ ಕಡೆ ನಿರ್ಲಕ್ಷ್ಯ ಹೊಂದಿ ವಿದ್ಯಾರ್ಜನೆಯಿಂದ ಹೊರಗುಳಿಯುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ಕಲಿಯುವ ವಯಸ್ಸಿನಲ್ಲಿ ಕಲಿತು ತಮ್ಮ ತಂದೆ-ತಾಯಿಗೆ ಗೌರವ ತರುವಂತ ಕೆಲಸ ಮಾಡುವುದು ಅವಶ್ಯ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ ಮಾತನಾಡಿದರು. ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಶಿವಪುತ್ರಪ್ಪ ಮಾದರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯ ಶಂಕರ ಮರಾಠೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಗೌರಮ್ಮ ಕಲ್ಲೇದಾರ, ಸದಸ್ಯ ಮಂಜಪ್ಪ ಸೊರಟೂರ, ತಾಪಂ ಸದಸ್ಯ ಗುಡದಪ್ಪ ಸೊರಟೂರ, ಬಸನಗೌಡ ಪಾಟೀಲ, ರಮೇಶ ಬಡ್ನಿ, ಈರಣ್ಣ ಕೆಲೂರ, ಈರಣ್ಣ ಬನ್ನಿಕೊಪ್ಪ ಮುಂತಾದವರು ಉಪಸ್ಥಿತರಿದ್ದರು. ಶಿಕ್ಷಕ ಎಲ್.ಆರ್. ಜಯರಾಜ ಸ್ವಾಗತಿಸಿದರು. ಎ.ಎಸ್. ಥೋರಾತ ನಿರೂಪಿಸಿದರು. ಎಸ್.ಎನ್. ದರ್ಜಿ ವಂದಿಸಿದರು.