ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಶ್ರದ್ಧಾಂಜಲಿ ಸಭೆ

Vishwanath S
Updated On : 25 Dec 2013, 12:47 pm

ಗದಗ: ಮೇರು ಕವಿ, ಸಮನ್ವಯದ ಹರಿಕಾರ, ಭಾವತನ್ಮಯತೆಯನ್ನು ಲೀಲಾಜಾಲವಾಗಿ ಅಭಿವ್ಯಕ್ತಗೊಳಿಸಿದವರು ಜಿ.ಎಸ್. ಶಿವರುದ್ರಪ್ಪನವರು ಎಂದು ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಶಿವಪ್ಪ ಕುರಿ ಹೇಳಿದರು. ಅವರು ಮಂಗಳವಾರ ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಾಲಯದಲ್ಲಿ ನಡೆದ ಜಿ.ಎಸ್.ಎಸ್. ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಾ. ಕೆ.ಎಚ್. ಬೇಲೂರ, ಕೆ.ಬಿ. ತಳಗೇರಿ, ಜಿಲ್ಲಾ ಗೌರವ ಕಾರ್ಯದರ್ಶಿ ಶರಣು ಗೋಗೇರಿ, ಡಾ. ಸಂಗಮೇಶ ತಮ್ಮನಗೌಡರ, ಕೋಶಾಧ್ಯಕ್ಷ ಮಲ್ಲೇಶ ಡಿ.ಎಚ್, ಮಲ್ಲಿಕಾರ್ಜುನ ಪೂಜಾರ, ಡಿ.ಎಸ್. ತಳವಾರ, ಬಿ.ಜಿ. ಹಿರೇಮಠ, ಕಿಶೋರಬಾಬು ನಾಗರಕಟ್ಟಿ, ಜಿ.ಎಸ್. ಯತ್ನಟ್ಟಿ, ರಮೇಶ ಸಜ್ಜಗಾರ, ಆರ್.ಸಿ. ಕಟ್ಟಿಮನಿ, ಆರ್.ಎಂ. ಹಿರೇಮಠ, ಮಲ್ಲಿಕಾರ್ಜುನ ಗೌಡಪ್ಪಗೌಡರ, ಅಶೋಕ ಸಾವಂತ, ಮುತ್ತಣ್ಣ ಬದ್ನಿಕಾಯಿ, ಶಿವು ಬಿನ್ನಾಳ, ಬಸವರಾಜ ಬಬ್ಲಿ, ಕೆ.ಬಿ. ಕುರಿ, ಬೂದೀಶ ಬೀರಗೊಣ್ಣವರ, ಪ್ರಕಾಶ ಗಿಡ್ಡಣ್ಣವರ, ಮಹಾಂತೇಶ ಮದ್ನೂರ, ಬಸಯ್ಯ ನಂದಿಕೋಲಮಠ ಮುಂತಾದವರು ಉಪಸ್ಥಿತರಿದ್ದರು.
ಕವಿ ನಿಧನಕ್ಕೆ ಸಂತಾಪ
ಗದಗ: ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಅವರ ನಿಧನಕ್ಕೆ ಗದಗ ಜಿಲ್ಲಾ ಪದವಿ ಮಹಾವಿದ್ಯಾಲಯಗಳ ಕನ್ನಡ ಅಧ್ಯಾಪಕರ ಪರಿಷತ್ತು ಅಧ್ಯಕ್ಷರು ಮತ್ತು ಪದಾಧಿಕಾರಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ. ಜಿಲ್ಲಾ ಕನ್ನಡ ಅಧ್ಯಾಪಕರ ಪರಿಷತ್ತಿನ ಅಧ್ಯಕ್ಷ ಆರ್.ಎಲ್. ಪೊಲೀಸ್ಪಾಟೀಲ, ಚನ್ನಪ್ಪ ಹುಡೇದಗಡ್ಡಿ, ಎಂ.ಎಸ್. ಪಾಟೀಲ, ಶಕುಂತಲಾ ಸಿಂಧೂರ, ಆರ್.ಎಂ. ಕಲ್ಲನಗೌಡರ. ಡಾ. ಪ್ರಭು. ಗಂಜಿಹಾಳ, ಡಾ. ರಿಯಾಜ ಭಾಷಾ, ರಾಜಶೇಖರ ದಾನರಡ್ಡಿ, ಆರ್.ಎಸ್. ತಿಗಡಿ, ಸಿ.ಎಂ. ಕಾಳಣ್ಣವರ, ಎಫ್.ಎನ್. ಕುರುಬರ, ಗದಗ ಜಿಲ್ಲೆಯ ಎಲ್ಲ ಪದವಿ ಮಹಾವಿದ್ಯಾಲಯಗಳ ಕನ್ನಡ ಪ್ರಾಧ್ಯಾಪಕರು ಸಂತಾಪ ಸೂಚಿಸಿದ್ದಾರೆ.
ಜನರ ಮನಗೆದ್ದವರು
ಗದಗ: ಬಿರುಕು ಬಿಟ್ಟ ಮನಸ್ಸುಗಳ ಮಧ್ಯೆ ಸೇತುವೆ ಕಟ್ಟುವುದು ಹೇಗೆ ಹಾಗೂ ಎದೆ ತುಂಬಿ ಹಾಡಿದೆನು ಎಂಬ ಹಾಡಿನೊಂದಿಗೆ ಜನರ ಮನವನ್ನು ಗೆದ್ದವರು ರಾಷ್ಟ್ರಕವಿ ಹಿರಿಯ ವಿಮರ್ಶಕ ಡಾ. ಜಿ.ಎಸ್. ಶಿವರುದ್ರಪ್ಪನವರು ಎಂದು ಗದಗ ಕಸಾಪ ಕಾರ್ಯದರ್ಶಿ ಕವಿತಾ ದಂಡಿನ ಹೇಳಿದರು. ಈ ಕುರಿತು ಪ್ರಕಟಣೆ ನೀಡಿರುವ ಅವರು ಕವಿ ಶಿವರುದ್ರಪ್ಪನವರು ಅಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿ ನವ್ಯ ಹಾಗೂ ನವೋದಯ ಕಾವ್ಯಗಳ ಮೂಲಕ ಕವಿತೆಗಳನ್ನು ರಚಿಸಿ ಹೆಸರಾದವರು. ರಾಜ್ಯ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ದಾವಣಗೆರೆಯಲ್ಲಿ ನಡೆದ 61ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಅಲ್ಲದೇ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದ ಜಿ.ಎಸ್.ಎಸ್. ನಿಧನದಿಂದಾಗಿ ರಾಷ್ಟ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ತಿಳಿಸಿದ್ದಾರೆ.
ಕಲಿಕೋತ್ಸವ ಯಶಸ್ವಿಯಾಗಲಿ
ಗದಗ: ಪ್ರತಿಭಾವಂತ ಮಕ್ಕಳನ್ನು ಗುರುತಿಸುವ ಕಾರ್ಯ ಕಲಿಕೋತ್ಸವದ ಮೂಲಕ ಆಗಲಿ ಎಂದು ಎಸ್ಡಿಎಂಸಿ ಅಧ್ಯಕ್ಷ ನಾಮೇಶ ಹೊಸಳ್ಳಿ ಹೇಳಿದರು.
ಅವರು ಈಚೆಗೆ ತಾಲೂಕಿನ ಅಡವಿಸೋಮಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ 2013-14ನೇ ಸಾಲಿನ ಅಡವಿಸೋಮಾಪುರ ಕ್ಲಸ್ಟರ್ಮಟ್ಟದ ಕಲಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಈ ಕಾರ್ಯಕ್ರಮದ ಮೂಲಕ ಗುರುತಿಸಿ, ಪ್ರತಿಭಾವಂತ ಮಕ್ಕಳಿಗೆ ಕಲಿಕೆಯಲ್ಲಿ ಸಹಾಯಕವಾಗುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ಸರ್ಕಾರ ಹಮ್ಮಿಕೊಂಡು ಅನುಕೂಲಕರವಾದ ವಾತಾವರಣವನ್ನು ನಿರ್ಮಾಣ ಮಾಡಿದೆ. ಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿ, ಶಿಕ್ಷಣ ರಂಗದಲ್ಲಿ ಪ್ರಗತಿಯನ್ನು ಸಾಧಿಸಲು ಶ್ರಮಿಸುತ್ತಿದೆ. ಎಲ್ಲ ಯೋಜನೆಗಳು ಯಶಸ್ವಿಯಾಗಲಿ ಎಂದರು.
ಕ್ಲಸ್ಟರ್ ಸಿಆರ್ಪಿ ಜಿ.ಎಸ್. ಸರಖಾಜಿ ಮಾತನಾಡಿ, ಕಲಿಕೋತ್ಸವ ಕಾರ್ಯಕ್ರಮವು ರಾಜ್ಯಾದ್ಯಂತ ನಡೆಯುತ್ತಿದ್ದು, ಮಕ್ಕಳು ತಮ್ಮಲ್ಲಿರುವ ಕೌಶಲ್ಯಗಳನ್ನು ಇಂತಹ ವೇದಿಕೆ ಬಳಸಿಕೊಂಡು ಪ್ರಗತಿ ಸಾಧಿಸಬೇಕು. ಮಕ್ಕಳ ಕಲಿಕೆಯನ್ನು ಒಂದು ಉತ್ಸವವಾಗಿ ಜಾತ್ರೆಯಾಗಿ, ಹಬ್ಬವಾಗಿ ಆಚರಿಸುವಂತಹ ಉತ್ಸವ ಇದಾಗಿದೆ ಎಂದರು. ಕ್ಲಸ್ಟರ್ನ ಎಲ್ಲ ಶಾಲೆಯ ಮಕ್ಕಳು ಕಲಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಶಾಲೆಯ ಪ್ರಧಾನ ಗುರುಮಾತೆ ಎಸ್.ಎಚ್. ದಂಡಿಗದಾಸರ, ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಬಿ.ಎಸ್. ಭಜಂತ್ರಿ, ಎಸ್ಡಿಎಂಸಿ ಸದಸ್ಯೆ ಹಂಪವ್ವ ಅಸುಂಡಿ, ಸರೋಜಾ ಪುರದ, ಬಿ.ಎಚ್. ಚಕ್ರಣ್ಣವರ, ಐ.ಕೆ. ಅಣ್ಣಿಗೇರಿ, ಪರಶುರಾಮ ಪಾಟೀಲ, ವೈ.ಕೆ. ಚೌಡಾಪುರ, ಎಂ.ಎಫ್. ಕೋಲಕಾರ, ಮಂಜುನಾಥ ಡೋಣಿ ಮುಂತಾದವರು ಉಪಸ್ಥಿತರಿದ್ದರು. ಎಂ.ಎಚ್.ದೊಡ್ಡಮನಿ ಸ್ವಾಗತಿಸಿ, ನಿರೂಪಿಸಿದರು. ಬಿ.ಎಸ್. ಚವಡಿ ವಂದಿಸಿದರು.
ಅಧ್ಯಯನದಲ್ಲಿ ಆತ್ಮವಿಶ್ವಾಸವಿರಲಿ
ಗದಗ: ವಿದ್ಯಾರ್ಥಿಗಳು ಅಧ್ಯಯನದಲ್ಲಿ ಏಕಾಗೃತೆಯೊಂದಿಗೆ ಆತ್ಮವಿಶ್ವಾಸವನ್ನು ಬೆಳೆಸಿಕೊಂಡಾಗ ಉತ್ತಮ ಯಶಸ್ಸು ದೊರೆಯಲು ಸಾಧ್ಯ ಎಂದು ಕೆಎಲ್ಇ ಸಂಸ್ಥೆಯ ಸಿಬಿಎಸ್ಇ ಶಾಲೆಯ ಪ್ರಾಚಾರ್ಯೆ ಕವಿತಾ ಕುಲಕರ್ಣಿ ಹೇಳಿದರು. ಅವರು ಈಚೆಗೆ ನಗರದ ಶಿವಾನಂದ ಪಪೂ ವಿಜ್ಞಾನ ಕಾಲೇಜಿನಲ್ಲಿ ಮಹಿಳಾ ವಿಭಾಗದ ಆಶ್ರಯದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉತ್ತಮ ಆಸೆಗಳು ವಿದ್ಯಾರ್ಥಿಯ ಪ್ರಗತಿಗೆ ಸಹಕಾರಿಯಾಗುತ್ತವೆ. ಪರೀಕ್ಷೆಯ ಕುರಿತು ಅನಗತ್ಯವಾದ ಭಯವನ್ನು ಬಿಟ್ಟು ಸ್ಪಷ್ಟ ಯೋಜನೆಯೊಂದಿಗೆ ನಿಯಮಿತವಾಗಿ ಅಧ್ಯಯನ ಮಾಡಬೇಕು. ವಿಷಯಕ್ಕೆ ಸಂಬಂಧಿಸಿದಂತೆ ಪರಸ್ಪರ ಚರ್ಚಿಸಿದಾಗ ಸ್ಪಷ್ಟ ತಿಳಿವಳಿಕೆ ಮೂಡಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಸ್.ವಿ. ಸಂಕನೂರ ಮಾತನಾಡಿ, ಅಧ್ಯಯನದಲ್ಲಿ ಆಸಕ್ತಿಯಿರಬೇಕು. ಬರಿ ಯಶಸ್ಸಿನ ಕನಸನ್ನು ಕಾಣುವುದಷ್ಟೇ ಅಲ್ಲ, ಅದರ ಕುರಿತು ಯೋಚಿಸಿ ನಂತರ ಕನಸನ್ನು ನನಸಾಗಿಸುವ ಕ್ರಿಯೆಯಲ್ಲಿ ತೊಡಗಿದಾಗ ಯಶಸ್ಸು ಸಿಗಲು ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ಮಹಿಳಾ ವಿಭಾಗದ ಮುಖ್ಯಸ್ಥೆ ಕೌಶಲ್ಯ ರಡ್ಡೇರ, ಸುಸ್ಮಿತಾ ಜೋಷಿ, ಲೀಲಾ ಹರ್ಲಾಪುರ ಮುಂತಾದವರು ಉಪಸ್ಥಿತರಿದ್ದರು. ಸಂಗೀತಾ ಶಿವಸಿಂಪಿ ಪ್ರಾರ್ಥಿಸಿದರು. ನಂದಾ ಹಾಗೂ ಶಾವಣಿ ನಿರೂಪಿಸಿದರು. ಮಹಿಳಾ ವಿಭಾಗದ ಕಾರ್ಯದರ್ಶಿ ವೈಷ್ಣವಿ ವಂದಿಸಿದರು.
ಜಿ.ಎಸ್.ಎಸ್. ನಿಧನ: ಶ್ರೀಗಳ ಸಂತಾಪ
ಮುಂಡರಗಿ: ರಾಷ್ಟ್ರಕವಿ ಜಿ.ಎಸ್.ಎಸ್. ನಿಧನದಿಂದ ಕನ್ನಡ ಸಾರಸ್ವತ ಲೋಕ ಬಡವಾಗಿದೆ. ಭಗವಂತನು ಅವರ ಕುಟುಂಬಕ್ಕೆ ಹಾಗೂ ಅಪಾರ ಅವರ ಶಿಷ್ಯ ಬಳಗಕ್ಕೆ ಅವರ ಅಗಲಿಕೆಯ ನೋವು ಭರಿಸುವ ಶಕ್ತಿ ನೀಡಲಿ ಎಂದು ಜ. ನಾಡೋಜ, ಡಾ. ಅನ್ನದಾನೀಶ್ವರ ಶ್ರೀಗಳು ತಿಳಿಸಿದ್ದಾರೆ.
ಕವಿ ನಿಧನಕ್ಕೆ ಸಂತಾಪ
ಮುಂಡರಗಿ:  ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರ ನಿಧನಕ್ಕೆ ಮಾಜಿ ಸಚಿವ ಎಸ್.ಎಸ್. ಪಾಟೀಲ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ. ಜಿ.ಎಸ್. ಶಿವರುದ್ರಪ್ಪನವರ ನಿಧನದಿಂದಾಗಿ ಸಾಹಿತ್ಯದ ಲೋಕದ ಮತ್ತೊಂದು ಹಿರಿಯ ಕೊಂಡಿ ಕಳಚಿದಂತಾಗಿದೆ. ಅವರ ಸಾಹಿತ್ಯ ಕೃಷಿಯಿಂದ ಇಡೀ ಜಗತ್ತಿಗೆ ದೊಡ್ಡ ಕೊಡುಗೆ ದೊರೆತಂತಾಗಿದೆ ಎಂದು ತಿಳಿಸಿದ್ದಾರೆ.
ಶಿವರುದ್ರಪ್ಪ ನಿಧನ: ಚುಸಾಪ ಸಂತಾಪ
ಗದಗ: ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ನಿಧನಕ್ಕೆ ಗದಗ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ತೀವ್ರ ಶೋಕ ವ್ಯಕ್ತಪಡಿಸಿದೆ. ಸೋಮವಾರ ಸಂಜೆ ಪರಿಷತ್ನ ಕಾರ್ಯಾಲಯದಲ್ಲಿ ಸಭೆ ಸೇರಿದ ಪದಾಧಿಕಾರಿಗಳು ಜಿ.ಎಸ್. ಶಿವರುದ್ರಪ್ಪ ಅವರ ನಿಧನ ಕನ್ನಡ ಕಾವ್ಯ ಲೋಕಕ್ಕೆ ತುಂಬಲಾಗದ ಹಾನಿಯಾಗಿದೆ ಎಂದು ಅಭಿಪ್ರಾಯಪಟ್ಟು, ಅಗಲಿದ ಹಿರಿಯ ಕವಿಯ ಆತ್ಮಕ್ಕೆ ಚಿರಶಾಂತಿ ಕೋರಿ ಮೌನ ಆಚರಿಸಿದರು. ಸಭೆಯಲ್ಲಿ ಗದಗ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ವಿ. ಬಡಿಗೇರ, ಮನೋಹರ ಮೇರವಾಡೆ, ಸಾಹಿತಿ ಬಿ.ಎಸ್. ಹಿಂಡಿ, ಬಸವರಾಜ ಗಣಪ್ಪನವರ, ಪಾಂಡುರಂಗ ಓಸೇಕರ, ಅಮೃತೇಶ ಹೊಸಳ್ಳಿ, ಕಸಾಪ ಕಾರ್ಯದರ್ಶಿ ಕವಿತಾ ದಂಡಿನ, ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅ.ಓಂ. ಪಾಟೀಲ ಮುಂತಾದವರು ಪಾಲ್ಗೊಂಡಿದ್ದರು.
ನೌಕರರ ಸಹಕಾರಿ ಸಂಘಕ್ಕೆ ಆಯ್ಕೆ
ಶಿರಹಟ್ಟಿ:  ಶಿರಹಟ್ಟಿ ತಾಲೂಕು ಸರ್ಕಾರಿ ಪ್ರೌಢಶಾಲಾ ನೌಕರರ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಮಂಡಳಿ ಅಧ್ಯಕ್ಷರಾಗಿ ಎಚ್.ಬಿ. ರಡ್ಡೇರ, ಉಪಾಧ್ಯಕ್ಷರಾಗಿ ಎಂ.ಡಿ. ತಳ್ಳಳ್ಳಿ ಆಯ್ಕೆಯಾದರು. ನಿರ್ದೇಶಕ ಮಂಡಳಿಗೆ ಎಲ್.ಟಿ. ಪಾಟೀಲ, ಜಿ.ಡಿ. ಕಲ್ಲಣ್ಣವರ, ವಿ.ಆರ್. ಅರ್ಕಸಾಲಿ, ಜಿ.ಡಿ. ಈರಕ್ಕನವರ, ಐ.ಎಸ್. ಮಡಿವಾಳರ, ಸಿ.ವೈ. ಮೇಗಿಲಮನಿ, ಎಂ.ಎ. ಮಕಾನದಾರ, ಎಸ್.ಎ. ಗೊರವನಕೋಳ, ಎಸ್.ಆರ್. ಹಿರೇಮಠ, ಎಸ್.ಎಚ್. ಕದಂ, ಉಮಾ ನಾಯಕ ಹಾಗೂ ಗೌರವ ಕಾರ್ಯದರ್ಶಿಯಾಗಿ ಡಿ.ಬಿ. ಲಮಾಣಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement