ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸಾಹಿತ್ಯ ಕ್ಷೇತ್ರ ಬಡವಾಗಿದೆ: ಸೊಲಗಿ

Vishwanath S
Updated On : 25 Dec 2013, 12:44 pm

 ಕನ್ನಡಪ್ರಭ ವಾರ್ತೆ, ಮುಂಡರಗಿ, ಡಿ. 24
ಗೋವಿಂದ್ ಪೈ, ಕುವೆಂಪು ಅವರ ನಂತರ ಬಂದಂತಹ ಮತ್ತೊಬ್ಬ ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪನವರು ನಮ್ಮಿಂದ ಕಣ್ಮರೆಯಾದರೂ ಅವರು ಕಟ್ಟಿಕೊಟ್ಟಿರುವ ಸಾಹಿತ್ಯ, ಕಾವ್ಯ ನಮ್ಮ ಜತೆ ನಿತ್ಯ ನಿರಂತರವಾಗಿ, ಚಿರಸ್ಥಾಯಿಯಾಗಿ ಉಳಿದಿರುತ್ತದೆ. ಜಿ.ಎಸ್. ಶಿವರುದ್ರಪ್ಪನವರಿಲ್ಲದ ಸಾಹಿತ್ಯ ಕ್ಷೇತ್ರ ಬಡವಾಗಿದೆ ಎಂದು ಮಕ್ಕಳ ಸಾಹಿತಿ ಡಾ. ನಿಂಗು ಸೊಲಗಿ ಹೇಳಿದರು.
ಅವರು ಮಂಗಳವಾರ ಮುಂಡರಗಿ ಪುರಸಭೆ ಆವರಣದಲ್ಲಿರುವ ಗಾಂಧಿ ಭವನದಲ್ಲಿ ಕನ್ನಡಕ್ರಾಂತಿ ಸೇನೆ ಆಯೋಜಿಸಿದ್ದ ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡ ಸಾಹಿತ್ಯ, ಸಂಸ್ಕೃತಿ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಒಬ್ಬ ಕವಿ ತನ್ನ ಕಾವ್ಯವನ್ನು ಹೇಗೆ ಸೃಷ್ಟಿ ಮಾಡಬಲ್ಲ ಎನ್ನುವುದನ್ನು ಜಿ.ಎಸ್. ಶಿವರುದ್ರಪ್ಪನವರನ್ನು ನೋಡಿಯೇ ಕಲಿಯಬೇಕು. ಅವರ ಪ್ರತಿ ಕವಿತೆಯಲ್ಲಿಯೂ ಮಾನವೀಯತೆ, ಕರುಣೆ, ಉದಾರತೆ, ಪ್ರೀತಿ, ದೈವಪ್ರಭೆ, ಸೌಂದರ್ಯಪ್ರಜ್ಞೆ ದಟ್ಟವಾಗಿ ತುಂಬಿರುತ್ತದೆ. ಕೋಮು ಸೌಹಾರ್ದತೆಗೆ ಮತ್ತು ಸೃಜನಶೀಲ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಾಗ ಅದನ್ನು ಕಟುವಾಗಿಯೇ ವಿರೋಧಿಸಿದವರು. ಪ್ರೀತಿ ಸ್ನೇಹಗಳಲ್ಲೇ ದೇವರನ್ನು ಕಂಡ ಜಿ.ಎಸ್. ಶಿವರುದ್ರಪ್ಪನವರು ವಿಶ್ವಮಾನವತೆ ಸಾರಿದ್ದಾರೆ ಎಂದರು. ಅಧ್ಯಕ್ಷತೆ ವಹಿಸಿದ್ದ ವೈ.ಎನ್. ಗೌಡರ ಮಾತನಾಡಿ, ಜಿ.ಎಸ್.ಎಸ್. ಒಬ್ಬ ಮೇರು ವ್ಯಕ್ತಿತ್ವದ ವ್ಯಕ್ತಿಯಾಗಿದ್ದರು. ಅವರ ಕಾವ್ಯದುದ್ದಕ್ಕೂ ಕುವೆಂಪು ಅವರ ಆಶಯಗಳು, ವಿಚಾರಗಳಿವೆ. ಅವರ ಕವಿತೆಗಳಿಗೆ ಮನೆಗಳನ್ನು, ಮನಸ್ಸುಗಳನ್ನು ಒಂದು ಗೂಡಿಸುವ ಶಕ್ತಿ ಇತ್ತು. ಇಂತಹ ಹಿರಿಯ ಸಾಹಿತ್ಯಕೊಂಡಿ ಕಳಚಿರುವುದು ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ನಷ್ಟವಾಗಿದೆ ಎಂದರು. ಎಚ್.ಬಿ. ವಡ್ಡಟ್ಟಿ, ಭಾಗ್ಯಲಕ್ಷ್ಮಿ ಬಿಳಿಮಗ್ಗದ, ಬಸವರಾಜ ರಾಮೇನಹಳ್ಳಿ, ಮಂಜುನಾಥ ಇಟಗಿ ಮಾತನಾಡಿದರು.  ಲಿಂಗರಾಜಗೌಡ ಪಾಟೀಲ, ಅಂದಪ್ಪ ಬೆಲ್ಲದ, ನಾಗಭೂಷಣ ಹಿರೇಮಠ, ನಾಗರಾಜ ಕೋಳಿ, ಮಾರುತಿ ಅಳವಂಡಿ, ಯುವಸೇವಾ ಸಂಘಟನೆಯ ಅಧ್ಯಕ್ಷ ಪವನ್ಚೋಪ್ರಾ, ಮಾರುತಿ ಕವಲೂರ, ಕೃಷ್ಣಾ ರಾಮೇನಹಳ್ಳಿ, ಕಸಾಪ ಅಧ್ಯಕ್ಷ ಎಸ್.ಬಿ. ಹಿರೇಮಠ, ಮಾರುತಿ ಅಳವಂಡಿ, ಜಗದೀಶ ಪತ್ರಿಮಠ, ಸಂತೋಷ ಹಿರೇಮನಿ, ಹನುಮಂತ ಅಣ್ಣಿಗೇರಿ, ರಾಜು ರಾಮೇನಹಳ್ಳಿ, ಗಣೇಶ ಹಾತಲಗೇರಿ, ರಾಮಚಂದ್ರ ಡೊಣ್ಣಿ, ಹನುಮಂತ ಕಟ್ಟಿಮನಿ ಮುಂತಾದವರು ಉಪಸ್ಥಿತರಿದ್ದು, ನುಡಿನಮನ ಸಲ್ಲಿಸಿದರು. ದೇವಪ್ಪ ಇಟಗಿ ಗಾನ ನಮನ ಸಲ್ಲಿಸಿದರು. ಕನ್ನಡಕ್ರಾಂತಿ ಸೇನೆ ಅಧ್ಯಕ್ಷ ಮಂಜುನಾಥ ಮುಧೋಳ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement