ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಇಂದು ಆರಾಧನಾ ಮಹೋತ್ಸವ

Vishwanath S
Updated On : 26 Dec 2013, 11:11 am

ಗದಗ: ರಾಮನಾಮವನ್ನು ಪ್ರಚಾರ ಪಡಿಸಿದ ಸಂತ ಬ್ರಹ್ಮಚೈತನ್ಯ ಗೋಂದಾವಲೆಕರ ಮಹಾರಾಜರ 100ನೇ ಆರಾಧನಾ ಮಹೋತ್ಸವವು ಡಿ. 26 ಹಾಗೂ 27ರಂದು ನಗರದ ಇತಿಹಾಸ ಪ್ರಸಿದ್ಧ ತ್ರಿಕೂಟೇಶ್ವರ ದೇವಸ್ಥಾನದಲ್ಲಿ ನೆರವೇರಲಿದೆ. ಡಿ. 26ರಂದು ಬೆಳಗ್ಗೆ 6ಕ್ಕೆ ಅಭಿಷೇಕ, 9ಕ್ಕೆ ಶೈಲಜಾ ಕುಲಕರ್ಣಿ ಇವರಿಂದ ಭಕ್ತಿ ಸಂಗೀತ ಕಾರ್ಯಕ್ರಮ, ಬೆಳಗ್ಗೆ 10ಕ್ಕೆ ಸದ್ಗುರು ಬ್ರಹ್ಮಚೈತನ್ಯ ಹಾಗೂ ಬ್ರಹ್ಮಾನಂದರ ಭಾವಚಿತ್ರ ಹಾಗೂ ಪಾದುಕೆಗಳ ಮೆರವಣಿಗೆಯು ವೀರನಾರಾಯಣ ದೇವಸ್ಥಾನದಿಂದ ತ್ರಿಕೂಟೇಶ್ವರ ದೇವಸ್ಥಾನದವರೆಗೆ ನೆರವೇರುವುದು. 11 ಗಂಟೆಗೆ ಮಹಾಭಾಗವತ ಸೇವಾ ಸಮಿತಿ ಉಪಾಧ್ಯಕ್ಷ ಎಲ್.ಡಿ. ಪಾಟೀಲ ಅಧ್ಯಕ್ಷತೆಯಲ್ಲಿ ಬ್ರಹ್ಮಚೈತನ್ಯ ಮಹಾರಾಜರ ಬಗೆಗೆ ಜಮಖಂಡಿಯ ರಾಮಪುರದ ಸದಾನಂದ ರಘುನಾಥ. ಭಸ್ಮೇ ಮಹಾರಾಜ ಪ್ರವಚನ ನೀಡುವರು. ಸಂಜೆ 5ಕ್ಕೆ ಸರಸ್ವತಿ ಭಗಿನಿ ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮ, 6ಕ್ಕೆ ದಿಗಂಬರಶಾಸ್ತ್ರಿ ಕುರ್ತಕೋಟಿ ಅವರಿಂದ ಕೀರ್ತನೆ, ರಾತ್ರಿ 7ಕ್ಕೆ ವೆಂಕಟೇಶ ಕುಲಕರ್ಣಿ ಹಾಗೂ ಮಾಲತಿ ಕುಲಕರ್ಣಿ ಇವರಿಂದ ಭಕ್ತಿ ಸಂಗೀತ ನಂತರ ಮಂತ್ರಪುಷ್ಪ, ಅಷ್ಟಾವಧಾನ, ಹಾಗೂ ಶೇಜಾರತಿ ನಡೆಯಲಿವೆ. ಡಿ. 27ರಂದು ಬೆಳಗ್ಗೆ 4.30ಕ್ಕೆ ಮಹಾರಾಜರಿಗೆ ಕಾಕಡಾರತಿ, 5.30ಕ್ಕೆ ಪಾದುಕಾಭಿಷೇಕ, 5.50ಕ್ಕೆ ಮಂಗಳಾರತಿ ನೆರವೇರುವುದು. ಬೆಳಗ್ಗೆ 8.30ಕ್ಕೆ ರತ್ನಾಕರಭಟ್ಟ ಜೋಶಿ ಇವರ ನೇತೃತ್ವದಲ್ಲಿ ರಾಮತಾರಕ ಹೋಮ, 10ಕ್ಕೆ ದಿಗಂಬರ ಶಾಸ್ತ್ರಿಗಳಿಂದ ಕೀರ್ತನ ನೆರವೇರಲಿದೆ. 11ಕ್ಕೆ 100ನೇ ಆರಾಧನಾ ಮಹೋತ್ಸವದ ವಿಶೇಷ ಕಾರ್ಯಕ್ರಮ ಹಾಗೂ ಸದ್ಗುರು ಸ್ಮರಣ ಸಂಚಿಕೆ ಲೋಕಾರ್ಪಣೆ ಕಾರ್ಯಕ್ರಮ ಜರುಗಲಿದ್ದು, ಸಾನ್ನಿಧ್ಯವನ್ನು ರಾಮಕೃಷ್ಣ ವಿವೇಕಾನಂದ ಆಶ್ರಮದ ನಿರ್ಭಯಾನಂದ ಸರಸ್ವತಿ ಶ್ರೀಗಳು ವಹಿಸಲಿದ್ದಾರೆ. ರತ್ನಾಕರಭಟ್ಟ ಜೋಶಿ ಅಧ್ಯಕ್ಷತೆ ವಹಿಸುವರು. ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಸ್ಮರಣ ಸಂಚಿಕೆ ಲೋಕಾರ್ಪಣೆ ಮಾಡುವರು. ಅತಿಥಿಗಳಾಗಿ ಮಾಜಿ ಶಾಸಕ ಡಿ.ಆರ್. ಪಾಟೀಲ, ಗುರಣ್ಣ ಬಳಗಾನೂರ ಆಗಮಿಸುವರು. ಇದೇ ಸಂದರ್ಭದಲ್ಲಿ ಮಹಾರಾಜರ ಉತ್ಸವಕ್ಕೆ ಸಹಾಯ ಸಹಕಾರ ಸೇವೆ ಸಲ್ಲಿಸುತ್ತಾ ಬಂದ ಭಕ್ತರಿಗೆ ಸನ್ಮಾನಿಸಲಾಗುವುದು. ಮಧ್ಯಾಹ್ನ 1ಕ್ಕೆ ಮಹಾಮಂಗಳಾರತಿ ಹಾಗೂ ಮಹಾಪ್ರಸಾದ ಏರ್ಪಡಿಸಲಾಗಿದೆ. ಸಂಜೆ 4ಕ್ಕೆ ಭಗಿನಿ ಭಜನಾ ಮಂಡಳಿಯವರಿಂದ ಭಜನೆ ಜರುಗುವುದು. ರಾತ್ರಿ 8ಕ್ಕೆ ಮಂತ್ರಪುಷ್ಪ ಅಷ್ಟಾವಧಾನ ಶೇಜಾರತಿಯೊಂದಿಗೆ ಕಾರ್ಯಕ್ರಮಗಳು ಸಂಪನ್ನಗೊಳ್ಳುವವು ಎಂದು ಬ್ರಹ್ಮಚೈತನ್ಯ ಉತ್ಸವ ಮಂಡಳಿಯ ಅಧ್ಯಕ್ಷ ಬಾಬಣ್ಣ ನೀಲಗುಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಪಕಸಬು ರೈತರ ಬದುಕಿಗೆ ಆಧಾರ
ರೋಣ: ರೈತರು ಆರ್ಥಿಕ ಸಬಲತೆ ಹೊಂದಲು ಕೃಷಿಯೊಂದಿಗೆ ಹೈನುಗಾರಿಕೆ, ಜೇನು ಸಾಕಾಣಿಕೆ, ಕುರಿ ಸಾಕಾಣಿಕೆ, ಕೊಳಿ, ಮೊಲ ಸಾಕಾಣಿಕೆ ಸೇರಿದಂತೆ ವಿವಿಧ ಉಪಕಸಬುಗಳಲ್ಲಿ ತೊಡಗಬೇಕು. ಉಪಕಸಬುಗಳು ಬದುಕಿಗೆ ಆಧಾರವಾಗುತ್ತವೆ ಎಂದು ಚನ್ನವೀರೇಶ್ವರ ಸಾವಯವ ಕೃಷಿ ಪರಿವಾರ ತಾಲೂಕು ಅಧ್ಯಕ್ಷ ಮೇಘರಾಜ ಬಾವಿ ಹೇಳಿದರು.
ಅವರು ಸೋಮವಾರ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ರಾಷ್ಟ್ರೀಯ ರೈತ ದಿನಾಚರಣೆ ಹಾಗೂ ಎಣ್ಣೆ ಕಾಳು ಅಭಿವೃದ್ಧಿ ಯೋಜನೆಯಡಿ ತಾಲೂಕು ಮಟ್ಟದ ರೈತ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶವು ಕೃಷಿ ಪ್ರಧಾನವಾಗಿದ್ದು, ಇತ್ತೀಚಿನ ದಿನಗಳಲ್ಲಿ ಕೃಷಿಯತ್ತ ಜನರ ಒಲವು ಕಡಿಮೆಯಾಗುತ್ತಿದ್ದು, ಒಕ್ಕಲುತನ ಕುಂಠಿತವಾಗುತ್ತಿದೆ. ಆದ್ದರಿಂದ ಯುವಕರು ಒಕ್ಕಲುತನದತ್ತ ಮುಖಮಾಡಬೇಕು. ಅಂದಾಗ ಒಕ್ಕಲುತನ ಚೇತರಿಕೆಯಾಗುತ್ತದೆ. ರೈತರ ಬೆಳೆದ ಬೆಳೆಗೆ ಯೋಗ್ಯ ದರ ನಿಗಧಿಯಾಗಬೇಕು. ಆ ನಿಟ್ಟಿನಲ್ಲಿ ರೈತರು ಒಗ್ಗಟ್ಟಿನಿಂದ ಹೋರಾಡಬೇಕು. ಇಲ್ಲದಿದ್ದಲ್ಲಿ ರೈತರ ಬದುಕು ಕುಗ್ಗುತ್ತದೆ ಎಂದರು. ಕೃಷಿ ವಿಜ್ಞಾನಿ ಡಾ. ಎಸ್. ಹಲಗಲಿಮಠ, ಎಪಿಎಂಸಿ ಸದಸ್ಯ ಪಿ.ಸಿ. ಪೊಲೀಸ್‌ಪಾಟೀಲ, ರಾಜಣ್ಣ ಹುಲಿ, ತಾಪಂ ಸದಸ್ಯೆ ಗಾಯತ್ರಿ ನಾಗನೂರ, ವಂಕಣ್ಣ ಬಂಗಾರಿ, ತಾಲೂಕು ಸಹಾಯಕ ಕೃಷಿ ನಿರ್ದೇಶಕ ಎಸ್.ಎ. ಸೂಡಿಶೆಟ್ಟರ ಮಾತನಾಡಿದರು.
ತಾಲೂಕು ಕೃಷಿಕ ಸಮಾಜ ಅಧ್ಯಕ್ಷ ಶಿವಣ್ಣ ಅರಹುಣಸಿ ಕಾರ್ಯಕ್ರವನ್ನು ಉದ್ಘಾಟಿಸಿದರು. ತಾಪಂ ಅಧ್ಯಕ್ಷೆ ತಿಪ್ಪವ್ವ ದೊಡಮನಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮತ್ತು ತಾಲೂಕು ಮಟ್ಟದ ಉತ್ತಮ ಕೃಷಿಕ ಪ್ರಶಸ್ತಿ ಪುರಸ್ಕೃತ ಹನುಮಂತಪ್ಪ ಪಟ್ಟೇದ, ಅನಸೂಯಾ ಪರಡ್ಡಿ, ರೇವತಿ ಜೋಗರಡ್ಡಿ ಮತ್ತು ಮುತ್ತಪ್ಪ ಮೇಟಿ ಅವರನ್ನು ಸನ್ಮಾನಿಸಲಾಯಿತು. ತಾಪಂ ಉಪಾಧ್ಯಕ್ಷೆ ಶೈಲಜಾ ಯರಗೇರಿ, ತಾಪಂ ಸದಸ್ಯ ಅಂದಪ್ಪ ಬಿಚ್ಚೂರ, ಮಾಲನಬಿ ಗಡಾದ, ರೇಣುಕಾ ಹಟ್ಟಿಮನಿ, ಬಸನಗೌಡ ಶಿರಗುಂಪಿ, ಮಾಜಿ ಸದಸ್ಯ ಎಂ.ಬಿ. ಕೋಳೆರಿ, ಹುಚ್ಚಪ್ಪ ನವಲಗುಂದ, ಪರ್ವತಗೌಡ ಪಾಟೀಲ ಮುಂತಾದವರು ಉಪಸ್ಥಿತರಿದ್ದರು. ಶಿವಪುತ್ರಪ್ಪ ದೊಡ್ಡಮನಿ ಸ್ವಾಗತಿಸಿ, ನಿರೂಪಿಸಿದರು. ವಿ.ಎಸ್. ಬಾವಿ ವಂದಿಸಿದರು.
ಜಯಂತಿ ಆಚರಣೆ
ಗಜೇಂದ್ರಗಡ: ಎಸ್.ಎಂ. ಭೂಮರಡ್ಡಿ ಸಂಯುಕ್ತ ಪ್ರೌಢ ಶಾಲೆಯಲ್ಲಿ ಈಚೆಗೆ ಶ್ರೇಷ್ಟ ಗಣಿತ ಶಾಸ್ತ್ರ ತಜ್ಞ ಶ್ರೀನಿವಾಸ ರಾಮಾನುಜಮ್‌ರ 126ನೇ ಜಯಂತ್ಯುತ್ಸವ ಆಚರಿಸಲಾಯಿತು. ಈ ಸಂದರ್ಭದಲ್ಲಿ ಬಿ.ಎ. ಕೆಂಚರೆಡ್ಡಿ, ಎಂ.ಟಿ. ಕುಲಕರ್ಣಿ ಮತ್ತು ಶಾಲೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಬೇಡಿಕೆ: ಅಯ್ಯಪ್ಪ ವ್ರತಧಾರಿಗಳಿಂದ ಮನವಿ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಡಿ. 25
ಅಯ್ಯಪ್ಪ ವ್ರತಧಾರಿಗಳ ವಿವಿಧ ಬೇಡಿಕೆ ಈಡೇರಿಸಲು ಸರ್ಕಾರ ಮುಂದಾಗಬೇಕು ಎಂದು ವ್ರತಾಚರಣೆ ನಿರತ ಅಯ್ಯಪ್ಪ ಭಕ್ತರು ಹಾಗೂ ಶ್ರೀರಾಮ ಸೇನಾ ಕಾರ್ಯಕರ್ತರು ಸೋಮವಾರ ವಿಶೇಷ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರೂ ಸಮಾನರು ತತ್ವದ ಅಡಿಯಲ್ಲಿ ವ್ರತ ಆಚರಿಸುವರಿಗೆ ಅಯ್ಯಪ್ಪ ಸನ್ನಿಧಿಗೆ ತೆರಳುವವರಿಗೆ ಕನಿಷ್ಠ ರು. 5 ಸಾವಿರ, ಎಲ್ಲ ತಾಲೂಕಿನಲ್ಲಿ ಸಮುದಾಯ ಭವನ ನಿರ್ಮಾಣ, ಬಸ್ ವ್ಯವಸ್ಥೆ, ಕೇರಳದಲ್ಲಿ ವಿಧಿಸುವ ತೆರಿಗೆಯಲ್ಲಿ ವಿನಾಯಿತಿ, ದೇವಾಲಯ ನಿರ್ಮಾಣಕ್ಕೆ ಸ್ಥಳ,ಶಬರಿಮಲೆಯಲ್ಲಿ ರಾಜ್ಯ ಭಕ್ತರಿಗೆ ಅನುಕೂಲತೆ ಕಲ್ಪಿಸಲು ಸರ್ಕಾರ ಮುಂದಾಗಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ. ಕೇಂದ್ರ, ರಾಜ್ಯ ಸರ್ಕಾರ ಮತ ಓಲೈಕೆಯಲ್ಲಿ ಹಿಂದುಗಳನ್ನು ಕಡೆಗಣಿಸಿದೆ.
ಅಲ್ಪ ಸಂಖ್ಯಾತರ ತುಷ್ಟೀಕರಣದಲ್ಲಿ ತೊಡಗಿದೆ. ಆದರೆ ಮುಜರಾಯಿ ಇಲಾಖೆ ಸುಪರ್ದಿಯಲ್ಲಿರುವ ಹಿಂದು ದೇವಾಲಯದಿಂದ ಬರುವ ಕೋಟ್ಯಂತರ ರುಪಾಯಿ ಆದಾಯ ಬಹು ಪಾಲನ್ನು ಬೇರೆ ಧರ್ಮ ಅನುಕೂಲತೆ ಕಲ್ಪಿಸಲು ಬಳಕೆಯಾಗುತ್ತಿರುವುದನ್ನು ಕೈ ಬಿಡಬೇಕು ಎಂದು ಶ್ರೀರಾಮಸೇನೆ ರೋಣ ತಾಲೂಕು ಸಂಚಾಲಕ ಮೇಘರಾಜ ಕಾಟಾಪುರ, ಸುರೇಶ ಗೋರೆಬಾಳ, ಆನಂದ ರಾಠೋಡ, ಮಾರುತಿ ರಾಠೋಡ, ಮೈಲಾರಪ್ಪ ಅರಳಿಗಿಡದ, ಹನುಮಂತಪ್ಪ ಯರಗೇರಿ ಒತ್ತಾಯಿಸಿದರು.
ಮೇವಿಗೆ ಬೆಂಕಿ: ಹಾನಿ
ಗಜೇಂದ್ರಗಡ: ಸಮೀಪದ ಗೋಗೇರಿ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ಟ್ರ್ಯಾಕ್ಟರ್‌ನಲ್ಲಿ ಸಾಗಿಸುತ್ತಿದ್ದ ಮೇವಿಗೆ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ರು. 25 ಸಾವಿರ ಮೇವು ಸುಟ್ಟು ಭಸ್ಮವಾಗಿದೆ. ಅಗ್ನಿ ಶಾಮಕ ದಳ ಉರಿಯುವ ಬೆಂಕಿ ನಂದಿಸಲು ಹರಸಾಹಸ ನಡೆಸಿ, ಹೆಚ್ಚಿನ ನಷ್ಟ ತಪ್ಪಿಸಿದರು. ಗ್ರಾಮದ ಹನುಮಪ್ಪ ಕಳಕಪ್ಪ ಹೊರಪೇಟಿ ಎಂಬುವರಿಗೆ ಸೇರಿದ್ದು ಎನ್ನಲಾಗಿದ್ದು, ಈ ಕುರಿತು ಗ್ರಾಮ ಲೆಕ್ಕಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಹಾನಿಯ ಪರಿಶೀಲನೆ ನಡೆಸಿದರು.
ಮುಂಡರಗಿ: ಇಂದು ಸಭೆ
ಮುಂಡರಗಿ: ಮುಂಡರಗಿ ತಾಲೂಕನ್ನು ಬರಗಾಲ ಪ್ರದೇಶದಿಂದ ಕೈಬಿಟ್ಟಿರುವ ಹಿನ್ನೆಲೆಯಲ್ಲಿ ಡಿ. 26ರಂದು ಬೆಳಗ್ಗೆ 11 ಗಂಟೆಗೆ ಪಟ್ಟಣದ ಪುರಸಭೆಯ ಉದ್ಯಾನವನದಲ್ಲಿ ತಾಲೂಕು ಅಭಿವೃದ್ಧಿ ಹೋರಾಟ ವೇದಿಕೆ, ಕನ್ನಡಕ್ರಾಂತಿಸೇನೆ, ಕನ್ನಡ ಜನಾಭಿವೃದ್ಧಿ ವೇದಿಕೆ, ಕರವೇ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಸಭೆ ಜರುಗಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಲಹೆ ಸೂಚನೆಗಳನ್ನು ನೀಡಬೇಕು ಎಂದು ತಾಲೂಕು ಅಭಿವೃದ್ಧಿ ವೇದಿಕೆಯ ಅಧ್ಯಕ್ಷ ವೈ.ಎನ್. ಗೌಡರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಶಿಬಿರ ಉದ್ಘಾಟನೆ
ಗದಗ: ಸ್ನಾತಕೋತ್ತರ ಸಮಾಜಕಾರ್ಯ ಕೇಂದ್ರ (ಎಂ.ಎಸ್.ಡಬ್ಲ್ಯೂ) ಸಮಾಜಕಾರ್ಯ ಪದವಿ ಮಹಾವಿದ್ಯಾಲಯ ಗದಗ ಇದರ ಆಶ್ರಯದಲ್ಲಿ ಡಿ. 26ರಂದು ತಾಲೂಕಿನ ಎಚ್.ಎಸ್. ವೆಂಕಟಾಪುರ ಗ್ರಾಮದ ಕೆ.ಎಚ್. ಪಾಟೀಲ ರಂಗಮಂಟಪದಲ್ಲಿ ಸಮಾಜಕಾರ್ಯ ಶಿಬಿರದ ಉದ್ಘಾಟನೆ ಜರುಗಲಿದೆ. ಉದ್ಘಾಟನೆಯನ್ನು ಮಾಜಿ ಶಾಸಕ ಡಿ.ಆರ್. ಪಾಟೀಲ ನೆರವೇರಿಸುವರು. ಕನಕದಾಸ ಶಿಕ್ಷಣ ಸಮಿತಿಯ ಅಧ್ಯಕ್ಷ ಡಾ. ಬಿ.ಎಫ್. ದಂಡಿನ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಸಿ.ಎಸ್. ಬೊಮ್ಮನಹಳ್ಳಿ, ಸಿ.ಜಿ. ಕೊರವನವರ, ಜಿಪಂ ಸದಸ್ಯ ರೇವಣ್ಣಪ್ಪ ಕೊಂಡಿಕೊಪ್ಪ, ಬೆಳಹೊಡ ಗ್ರಾಪಂ ಅಧ್ಯಕ್ಷ ಎಸ್.ಎಚ್. ಮಲ್ಲಸಮುದ್ರ, ಎಚ್.ಎಸ್. ವೆಂಕಟಾಪುರ ಪಿಡಿಒ ಶಿವಪುತ್ರಯ್ಯ ಹಳೇಮಠ, ಬೆಳಹೊಡ ಗ್ರಾಪಂ ಸದಸ್ಯೆ ರೇಖಾ ಹುಡೇದ, ನೀಲಕಂಠಪ್ಪ ಹಕ್ಕರಕಿ, ಇಂದ್ರವ್ವ ಮಲ್ಲಸಮುದ್ರ, ಎಚ್.ಟಿ. ಹುಡೇದ ಪಾಲ್ಗೊಳ್ಳುವರು ಎಂದು ಶಿಬಿರಾಧ್ಯಕ್ಷ ಸಿ.ಎಸ್.ಬೊಮ್ಮನಹಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ತಪಾಸಣಾ ಶಿಬಿರ
ಗದಗ: ಗದಗ-ಬೆಟಗೇರಿ ಇನ್ನರ್‌ವ್ಹೀಲ್ ಕ್ಲಬ್ ಹಾಗೂ ಗದುಗಿನ ಕೆ.ಎಲ್.ಇ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಆಶ್ರಯದಲ್ಲಿ ಇಲ್ಲಿನ ಎಸ್.ಎಂ. ಕೃಷ್ಣ ನಗರದ ಆಶ್ರಯ ಕಾಲೋನಿಯಲ್ಲಿ ಡಿ. 26ರ ಮಧ್ಯಾಹ್ನ 2ಕ್ಕೆ ಉಚಿತ ರಕ್ತ ತಪಾಸಣೆ ಹಾಗೂ ಮಧುಮೇಹ ತಪಾಸಣಾ ಶಿಬಿರ ನಡೆಯಲಿದೆ. ಅಧ್ಯಕ್ಷತೆಯನ್ನು ಇನ್ನರ್‌ವೀಲ್ ಕ್ಲಬ್‌ನ ಅಧ್ಯಕ್ಷೆ ಅನ್ನಪೂರ್ಣಾ ವರವಿ ವಹಿಸುವರು. ಅತಿಥಿಗಳಾಗಿ ಡಾ. ಡಿ.ವಿ. ವೈಕುಂಠೆ, ಕೆ.ಎಲ್.ಇ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯೆ ಬೌರಮ್ಮ ಯಾದವಾಡ ಆಗಮಿಸುವರು. ಜೆ.ಎ. ಪಾಟೀಲ ಹಾಗೂ ಉಪನ್ಯಾಸಕ ಪಿ.ಎನ್. ಮುನವಳ್ಳಿ ಹಾಗೂ ನಾಗಶ್ರೀ ಪೂಜಾರಿ ಉಪಸ್ಥಿತರಿರುವರು ಎಂದು ಪ್ರೊ. ವೀಣಾ ತಿರ್ಲಾಪುರ ಹಾಗೂ ಸುಲೋಚನಾ ಐಹೋಳಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement