ವಿಜ್ಞಾನ ಜನಪ್ರಿಯತೆಗೆ ಪರಿಷತ್ತಿನ ಪಾತ್ರ ಹಿರಿದು
ಕನ್ನಡಪ್ರಭ ವಾರ್ತೆ, ಗದಗ, ಡಿ. 25
33 ವರ್ಷಗಳಲ್ಲಿ ರಾಜ್ಯ ವಿಜ್ಞಾನ ಪರಿಷತ್ತು ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಹಾಗೂ ಅದರ ಮಹತ್ವವನ್ನು ಜನ ಸಾಮಾನ್ಯರಲ್ಲಿ ವಿಶೇಷವಾಗಿ ವಿದ್ಯಾರ್ಥಿಗಳಲ್ಲಿ ಜನಪ್ರಿಯಗೊಳಿಸುವಲ್ಲಿ ಪ್ರಾಮಾಣಿಕವಾದ ಪ್ರಯತ್ನ ಮಾಡುತ್ತಿದೆ. ಕೇವಲ ಬೆರಳಿಣಿಕೆಯಷ್ಟು ಸಮಾನ ಮನಸ್ಕರಿಂದ ಪ್ರಾರಂಭವಾದ ಸಂಸ್ಥೆ ಇಡೀ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಮಾದರಿ ಸಂಸ್ಥೆಯಾಗಿ ಹೆಮ್ಮರವಾಗಿ ಬೆಳೆಯಲು ಎಚ್.ನರಸಿಂಹಯ್ಯ, ಸೇತುರಾವ, ಎಂ.ಐ.ಸವದತ್ತಿ, ಸ.ಜ.ನಾಗಲೋಟಿಮಠ ಮುಂತಾದವರ ಪರಿಶ್ರಮ ಕಾರಣವಾಗಿದೆ ಎಂದು ರಾಜ್ಯ ವಿಜ್ಞಾನ ಪರಿಷತ್‌ನ ರಾಜ್ಯಾಧ್ಯಕ್ಷ ಪ್ರಾ. ಎಸ್.ವಿ. ಸಂಕನೂರ ಹೇಳಿದರು.
ಇತ್ತೀಚಿಗೆ ನಗರದ ವಿ.ಡಿ.ಎಸ್. ಬಾಲಕಿಯರ ಪ್ರೌಢಶಾಲೆಯಲ್ಲಿ ಜರುಗಿದ ರಾಜ್ಯ ವಿಜ್ಞಾನ ಪರಿಷತ್‌ನ ಜಿಲ್ಲಾ ಘಟಕ ಗದಗದ ವಾರ್ಷಿಕ ಸರ್ವ ಸಾಧರಣ ಸಭೆಯಲ್ಲಿ ಮಾತನಾಡಿದರು.
ರಾಜ್ಯ ವಿಜ್ಞಾನ ಪರಿಷತ್ತು ಜನರಲ್ಲಿರುವ ಮೂಢನಂಬಿಕೆ ಹಾಗೂ ಮೌಢ್ಯಗಳನ್ನು ನಿವಾರಣೆ ಮಾಡಲು ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಅಧ್ಯಯನ ಮಾಡಲು ಆಸಕ್ತಿ ಬೆಳೆಸುವಲ್ಲಿ ಮಕ್ಕಳ ವಿಜ್ಞಾನ ಸಮಾವೇಶ, ರಸಪ್ರಶ್ನೆ ಕಾರ್ಯಕ್ರಮ, ವಿಜ್ಞಾನ ವಸ್ತು ಪ್ರದರ್ಶನ, ವಿದ್ಯಾರ್ಥಿ-ವಿಜ್ಞಾನಿ ಸಂವಾದ, ಪವಾಡ ರಹಸ್ಯ ಬಯಲು ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತ ಬಂದಿದೆ. ಇವುಗಳ ಜತೆಗೆ ಇತ್ತೀಚಿನ ವರ್ಷಗಳಲ್ಲಿ ಮಹಿಳೆ ಮತ್ತು ವಿಜ್ಞಾನ, ನೀನು ಮಾಡಿ ನೋಡು, ನಿಮ್ಮ ಬಳಿಗೆ ವಿಜ್ಞಾನ ಹಾಗೂ ಜನಾರೋಗ್ಯದೆಡೆಗೆ ಎಂಬ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ವಿ. ಹಳ್ಳೀಕೇರಿ, ರಾಜ್ಯ ಘಟಕದಿಂದ ವೀಕ್ಷಕರಾಗಿ ಆಗಮಿಸಿದ ಆರ್.ಎಸ್. ಪಾಟೀಲರು ಜಿಲ್ಲಾ ಘಟಕದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.ಪಿ.ಕೆ. ಕರಡಿ ಅಧ್ಯಕ್ಷತೆ ವಹಿಸಿದ್ದರು. ವಿ.ಎ.ಬಿಳಗೋಡ, ಬಿ.ಎಲ್. ಚೌಹಾಣ್, ವಿ.ಬಿ. ಮರಿಗೌಡ್ರ, ಆರ್.ವಿ. ಕೆಂಚಗುಂಡಿ, ಆರ್.ಕೆ. ಬಾಗವಾನ, ಪದ್ಮಾ ಹುಂಬಿ, ಆರ್.ಎಫ್. ಹಳೆರಿತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ವಿ. ಟೋಣಪಿ ಸ್ವಾಗತಿಸಿದರು. ಎಸ್.ಎಸ್. ಇನಾಮತಿ ನಿರೂಪಿಸಿದರು. ಎನ್.ವಿ. ಜೋಷಿ ವಂದಿಸಿದರು.