ಹಿಂದಿ ಬೋಧನೆಯಿಂದ ಸಮಗ್ರತೆ ವೃದ್ಧಿ: ಕಡಿವಾಲರ
ಗಜೇಂದ್ರಗಡ: ದೇಶದ ಐಕ್ಯ ಮತ್ತು ಸಮಗ್ರತೆ ವೃದ್ಧಿಸುವಲ್ಲಿ ರಾಷ್ಟ್ರೀಯ ಮಾನ್ಯತೆ ಪಡೆದ ಹಿಂದಿ ಭಾಷೆಯ ಮಹತ್ವ ಅರಿತು ಮಕ್ಕಳಿಗೆ ಬೋಧಿಸಲು ಮುಂದಾಗಬೇಕು ಎಂದು ತಾಲೂಕು ಶಿಕ್ಷಣ ಇಲಾಖೆ ಸಂಯೋಜಕ ಪಿ.ಎಚ್. ಕಡಿವಾಲರ ಶಿಕ್ಷಕರಿಗೆ ಕಿವಿಮಾತು ಹೇಳಿದರು.
ಅವರು ಈಚೆಗೆ ಸಮೀಪದ ರಾಜೂರ ಗ್ರಾಮದ ಶರಣ ಬಸವೇಶ್ವರ ಪ್ರೌಢಶಾಲೆಯಲ್ಲಿ ಜಿಪಂ ಮತ್ತು ಶಿಕ್ಷಣ ಇಲಾಖೆ ವತಿಯಿಂದ ನಡೆದ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಹಿಂದಿ ವಿಷಯದ ಸುಧಾರಣೆ ಹಾಗೂ ಕ್ಲಿಷ್ಟ ಸಮಸ್ಯೆಗಳ ಪರಿಹಾರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಹಿಂದೆ ಭಾಷೆ ಬಗೆಗೆ ವಿದ್ಯಾರ್ಥಿಗಳಲ್ಲಿ ಅಭಿರುಚಿ ಹುಟ್ಟುವ ಹಾಗೆ ಪ್ರೇರೇಪಿಸಿ ಬೋಧಿಸುವುದರಿಂದ ಮಕ್ಕಳು ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಲು ಸಹಕಾರಿಯಾಗಲಿದೆ ಎಂದರು. ಸಾರ್ವಜನಿಕ ಶಿಕ್ಷಣ ಇಲಾಖೆ ಹಿಂದಿ ವಿಷಯ ಪರಿವೀಕ್ಷಕ ಎ.ಎಸ್. ಮಕಾನದಾರ ಮಾತನಾಡಿ, ಮಕ್ಕಳಿಗೆ ರಾಷ್ಟ್ರಭಾಷೆ ಕಲಿಯುವಂತೆ ಮಾಡಲು ಅಂಚೆ ಕಚೇರಿ, ಬ್ಯಾಂಕ್ ಹಿಂದಿಯಲ್ಲಿ ಬರೆದಿರುವ ಮಾಹಿತಿ ಪರಿಚಯ ಮಾಡಿಕೊಡಬೇಕು. ಭಾಷಾ ಬರವಣಿಗೆಯಲ್ಲಿ ಹೆಚ್ಚು ಒತ್ತುಕೊಡಬೇಕು ಎಂದರು. ಶಾಲಾ ಮುಖ್ಯೋಪಾಧ್ಯಾಯ ಎಸ್.ವಿ. ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಾಗಾರದಲ್ಲಿ ತಾಲೂಕಿನ 72 ಪ್ರೌಢಶಾಲೆಗಳ ಹಿಂದಿ ವಿಷಯ ಬೋಧಕರು ಉಪಸ್ಥಿತರಿದ್ದರು. ಜಿ.ಎಸ್. ನೀಲಗಾರ ಸ್ವಾಗತಿಸಿದರು. ಬಿ.ಪಿ. ಹುಬ್ಬಳ್ಳಿ ನಿರೂಪಿಸಿದರು. ಸಿ.ಎಂ. ಕಟಗಿ ವಂದಿಸಿದರು.