ಅಟಲ್ಜಿ ಜನ್ಮದಿನಾಚರಣೆ
ಲಕ್ಷ್ಮೇಶ್ವರ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 90ನೇ ಹುಟ್ಟು ಹಬ್ಬವನ್ನು ಪಟ್ಟಣದ ಸೋಮೇಶ್ವರ ದೇವಸ್ಥಾನದಲ್ಲಿ ಬುಧವಾರ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ಶಿರಹಟ್ಟಿ ಮತಕ್ಷೇತ್ರದ ಬಿಜೆಪಿ ಅಧ್ಯಕ್ಷ ನಾಗರಾಜ ಕುಲಕರ್ಣಿ ಮಾತನಾಡಿ, ವಾಜಪೇಯಿ ಅವರು ತಮ್ಮ ಆಡಳಿತದ ಅವಧಿಯಲ್ಲಿ ನಮ್ಮ ದೇಶದ ಪ್ರಗತಿಗೆ ಅಪಾರ ಕಾಣಿಕೆ ನೀಡಿದ್ದಾರೆ. ಅವರ ಜೀವನದ ಆದರ್ಶಗಳು ಇಂದಿಗೂ ಪ್ರಸ್ತುತ ಎಂದರು. ಈ ಸಂದರ್ಭದಲ್ಲಿ ಪುರಸಭೆಯ ಸದಸ್ಯ ಗಣೇಶ ಬೇವಿನಮರದ, ರಾಮಣ್ಣ ರಿತ್ತಿ, ರಾಜು ಅರಳಿ, ರಾಘವೇಂದ್ರ ಪೂಜಾರ, ಮಂಜುನಾಥ ಮಾಗಡಿ, ಅರುಣ ಪಾಟೀಲ್, ಮಾಲತೇಶ ತೋಟದ, ಶಿವು ಮನ್ನೂರ, ರುದ್ರಾಕ್ಷಿ ಹಿರೇಮಠ, ನಮೋ ಬ್ರಿಗೇಡ್ಸ್ನ ಸಂಚಾಲಕ ಅಮರೇಶ ಗಾಂಜಿ, ವೆಂಕು ಜಾಧವ, ಖಂಡೋಬಾ ನವಲೆ, ಸತೀಶ ಅಳಗುಂಡಗಿ, ಮಾಲತೇಶ ತೊಂಡಗಾರ, ಶ್ರೀಕಾಂತ, ಮಲ್ಲು, ಕಾರ್ತಿಕ, ನಾಗರಾಜ ಮುಂತಾದವರು ಇದ್ದರು.
ಕಾಂಗ್ರೆಸ್ನಿಂದ ಹಿಂದುಳಿದವರ ಕಲ್ಯಾಣ
ಗಜೇಂದ್ರಗಡ: ಸರ್ವ ಸಮುದಾಯದ ಏಳ್ಗೆಯ ಜತೆಗೆ ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಕಾಂಗ್ರೆಸ್ ಸರ್ಕಾರ ಅದ್ಯತೆ ನೀಡಿದೆ ಎಂದು ಕೆಸಿಸಿ ಬ್ಯಾಂಕ್ ಅಧ್ಯಕ್ಷ ಐ.ಎಸ್. ಪಾಟೀಲ ಹೇಳಿದರು. ಅವರು ಈಚೆಗೆ ಸ್ಥಳೀಯ ಕನಕದಾಸ ಶಿಕ್ಷಣ ಸಮಿತಿಯ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಿಸಿ ಮಾತನಾಡಿದರು. ಸರ್ಕಾರ ಶಾಲಾ ಮಕ್ಕಳಿಗೆ ಉಚಿತವಾಗಿ ನೀಡುವ ಅಕ್ಷರ ದಾಸೋಹ ಬಿಸಊಿಟ, ಪಠ್ಯಪುಸ್ತಕ, ಸಮವಸ್ತ್ರ, ಸೈಕಲ್ ಯೋಜನೆ ಸದುಪಯೋಗ ಪಡಿಸಿಕೊಂಡು ವಿದ್ಯಾರ್ಥಿಗಳು ವಿದ್ಯಾರ್ಜನೆಯತ್ತ ಹೆಚ್ಚು ಗಮನಹರಿಸಬೇಕು ಎಂದರು. ಪಾಲಕರಾದಿಯಾಗಿ ಶಿಕ್ಷಕರು, ವಿದ್ಯಾರ್ಥಿಗಳಲ್ಲಿ ಪ್ರೀತಿ, ವಿಶ್ವಾಸ, ಮುಂತಾದ ಮೌಲ್ಯಯುತ ಮತ್ತು ಆದರ್ಶ ತತ್ವಗಳನ್ನು ಅಳವಡಿಸುವಂತಾಗಬೇಕು. ಇದು ಕಲಿಕೆಗೆ ಪೂರಕವಾಗಲಿದೆ. ಶಿಕ್ಷಣ ಸಂಸ್ಥೆಗಳು ಸಮಾಜ ಪರಿವರ್ತನೆಯ ಗುರಿ ಹೊಂದಿರಬೇಕು. ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಕೊಡಿ ಎಂದರು. ಸಂಸ್ಥೆಯ ಅಧ್ಯಕ್ಷ ರವಿ ದಂಡಿನ ಮಾತನಾಡಿದರು. ನ್ಯಾಯವಾದಿ ವಿ.ಆರ್. ಗುಡಿಸಾಗರ, ಚಂಬಣ್ಣ ಚವಡಿ, ಉಮೇಶ ರಾಠೋಡ, ನ್ಯಾಯವಾದಿ ಅವಧೂತ ಶಶಿಧರ ಹೂಗಾರ ಮುಂತಾದವರು ಉಪಸ್ಥಿತರಿದ್ದರು.
ನಾಳೆ ಬಿಜೆಪಿ ಸಭೆ
ಲಕ್ಷ್ಮೇಶ್ವರ: ಪಟ್ಟಣದ ಸಾಲೇಶ್ವರ ಕಲ್ಯಾಣ ಮಂಟಪದಲ್ಲಿ ಡಿ. 28ರ ಬೆಳಗ್ಗೆ 10 ಗಂಟೆಗೆ ಬಿಜೆಪಿ ನಗರ ಘಟಕದ ಕಾರ್ಯಕರ್ತರ ಸಭೆ ಕರೆಯಲಾಗಿದೆ. ಪಕ್ಷದ ಸಂಘಟನೆ, ಮುಂಬರುವ ಲೋಕಸಭಾ ಚುನಾವಣೆ ಕುರಿತು ಚರ್ಚಿಸಲಾಗುವುದು. ಪಕ್ಷದ ಹಿರಿಯ ಮುಖಂಡರು, ಎಲ್ಲ ಮೋರ್ಚಾಗಳ ಪದಾಧಿಕಾರಿಗಳು, ಪುರಸಭೆ, ಎಪಿಎಂಸಿ ಹಾಲಿ ಹಾಗೂ ಮಾಜಿ ಸದಸ್ಯರು ಪಾಲ್ಗೊಳ್ಳಲಿದ್ದಾರೆ. ಕಾರಣ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತಮ್ಮ ಸಲಹೆ, ಸೂಚನೆ ನೀಡುವ ಮೂಲಕ ಸಭೆಯನ್ನು ಯಶಸ್ವಿಗೊಳಿಸುವಂತೆ ಪಕ್ಷದ ನಗರ ಘಟಕದ ಅಧ್ಯಕ್ಷ ಶಿವಯೋಗಿ ಅಂಕಲಕೋಟಿ ಹಾಗೂ ಪ್ರಧಾನ ಕಾರ್ಯದರ್ಶಿ ಮಂಜುನಾಥ ಮಾಗಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಳೆ ತರಬೇತಿ
ಗದಗ: ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರ ಹುಲಕೋಟಿ, ಸಸ್ಯತಳಿಗಳ ಹಾಗೂ ರೈತರ ಹಕ್ಕುಗಳ ಸಂರಕ್ಷಣೆ ಪ್ರಾಧಿಕಾರ ನವದೆಹಲಿ ಇವರ ಸಹಯೋಗದೊಂದಿಗೆ ಡಿ. 28ರ ಬೆಳಗ್ಗೆ 10ಗಂಟೆಗೆ ಸಸ್ಯ ತಳಿಗಳ ರಕ್ಷಣೆ ಹಾಗೂ ರೈತರ ಹಕ್ಕುಗಳ ಕುರಿತು ಜಾಗೃತಿ ಮತ್ತು ತರಬೇತಿ ಕಾರ್ಯಾಗಾರವನ್ನು ತಾಲೂಕಿನ ಹುಲಕೋಟಿ ಗ್ರಾಮದಲ್ಲಿ ಏರ್ಪಡಿಸಲಾಗಿದೆ. ಸಸ್ಯ ತಳಿಗಳ ಸಂರಕ್ಷಣೆ, ಸುಧಾರಣೆ ಹಾಗೂ ತಳಿ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡ ರೈತರ ಹಕ್ಕುಗಳನ್ನು ಗುರುತಿಸುವುದು ಹಾಗೂ ರೈತರ ಹಕ್ಕುಗಳ ಕಾಯ್ದೆ 2001ರ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸುವುದು ಈ ಕಾರ್ಯಾಗಾರದ ಉದ್ದೇಶವಾಗಿದೆ. ಕಾರ್ಯಾಗಾರದ ಉದ್ಘಾಟನೆಯನ್ನು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ ನೆರವೇರಿಸುವವರು. ಅತಿಥಿಗಳಾಗಿ ನವದೆಹಲಿಯ ಸಸ್ಯ ತಳಿಗಳ ಹಾಗೂ ರೈತರ ಹಕ್ಕುಗಳ ಸಂರಕ್ಷಣೆ ಪ್ರಾಧಿಕಾರದ ಅಧ್ಯಕ್ಷ ಡಾ. ಆರ್.ಆರ್. ಹಂಚಿನಾಳ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಹಾಗೂ ಮಾಜಿ ಶಾಸಕ ಡಿ.ಆರ್. ಪಾಟೀಲ, ಜಂಟಿ ಕೃಷಿ ನಿರ್ದೇಶಕ ಸಿ.ಬಿ. ಬಾಲರಡ್ಡಿ ಇವರು ಭಾಗವಹಿಸುವರು. ಅಧ್ಯಕ್ಷತೆಯನ್ನು ಹುಲಕೋಟಿಯ ಅಗ್ರಿಕಲ್ಚರಲ್ ಸೈನ್ಸ್ ಫೌಂಡೇಶನ್ನ ಚೇರ್ಮನ್ ಕೊರವನವರ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.
ನಾಳೆ ವಿದ್ಯುತ್ ವ್ಯತ್ಯಯ
ಗದಗ: 110 ಕೆವಿ ನರಗುಂದ ಮತ್ತು ಕೊಣ್ಣೂರು ಉಪವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ತ್ರೈಮಾಸಿಕ ನಿರ್ವಹಣಾ ಕೆಲಸ ಕೈಗೊಳ್ಳುತ್ತಿರುವುದರಿಂದ ಡಿ. 28ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯ ವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಕಾರಣ 110 ಕೆವಿ ನರಗುಂದ ಮತ್ತು ಕೊಣ್ಣೂರು ಉಪಕೇಂದ್ರಗಳಿಂದ ಪೂರೈಕೆಯಾಗುತ್ತಿರುವ ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳ 11 ಕೆವಿ ವಿತರಣಾ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಕಾರಣ ಸಾರ್ವಜನಿಕರು ಪ್ರಕಟಣೆ ಗಮನಿಸಿ ಹೆಸ್ಕಾಂನ ಇಲಾಖೆಯೊಂದಿಗೆ ಸಹಕರಿಸುವಂತೆ ಹೆಸ್ಕಾಂನ ಕಾರ್ಯನಿರ್ವಾಹಕ ಅಭಿಯಂತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಾಜಪೇಯಿ ಜನ್ಮದಿನ: ವಿದ್ಯಾರ್ಥಿಗಳಿಗೆ ನೋಟ್ಪುಸ್ತಕ ವಿತರಣೆ
ಗದಗ: ಭಾರತದ ಮಾಜಿ ಪ್ರಧಾನಮಂತ್ರಿ ಅಟಲ್ಬಿಹಾರಿ ವಾಜಪೇಯಿ ಅವರ ಹುಟ್ಟು ಹಬ್ಬವನ್ನು ಗದಗ ತಾಲೂಕು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಮಹೇಶ ಶಿರಹಟ್ಟಿ ಇವರ ನೇತೃತ್ವದಲ್ಲಿ ಯಲಿಶಿರೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನೋಟ್ಪುಸ್ತಕ ಹಾಗೂ ಪೆನ್ ವಿತರಣೆ ಮಾಡುವ ಮೂಲಕ ಆಚರಿಸಲಾಯಿತು. ಜಿಲ್ಲಾ ಭಾಜಪ ಯುವ ಮೋರ್ಚಾ ಉಪಾಧ್ಯಕ್ಷ ಸುಭಾಸ ಸುಂಕದ, ಗಂಗಾಧರ ಬೆಟಗೇರಿ, ಮಲ್ಲಪ್ಪ ಹಳ್ಳಿ, ವಿರೂಪಾಕ್ಷಪ್ಪ ಬ್ಯಾಳಿ, ಉಡಚಪ್ಪ ಹರಿಹರ, ಕೃಷ್ಣಾ ಅಂಬೋರೆ, ರಮೇಶ ಕಳಸಾಪುರ, ಮೈಲಾರಪ್ಪ ಏಲಿ, ಎಂ.ಡಿ. ಹಡಪದ, ನಾಗರಾಜ ಕುಂದ್ರಳ್ಳಿ, ಚಂದ್ರು ಪಾಟೀಲ ಗ್ರಾಮದ ಅನೇಕ ಹಿರಿಯರು ಹಾಗೂ ಯುವ ಮೋರ್ಚಾ ಕಾರ್ಯಕರ್ತರು ಉಪಸ್ಥಿತರಿದ್ದರು.
ಕನ್ನಡಕ್ಕಾಗಿ ಕರವೇ ನಿರಂತರ ಹೋರಾಟ
ನರೇಗಲ್ಲ: ಕನ್ನಡಕ್ಕಾಗಿ ಕರವೇ ನಿರಂತರ ಹೋರಾಡುತ್ತಾ ಬಂದಿದೆ. ಕನ್ನಡಿಗರ ಸಹಕಾರವೂ ಮಖ್ಯ ಎಂದು ತಾಲೂಕು ಕಸಾಪ ಅಧ್ಯಕ್ಷ ಡಾ. ಶಿವರಾಜ ಗುರಿಕಾರ ಹೇಳಿದರು.
ಅವರು ಸಮೀಪದ ಹಾಲಕೇರೆ ಗ್ರಾಮದಲ್ಲಿ ಮಂಗಳವಾರ ರಾತ್ರಿ ಗ್ರಾಮದ ಅನ್ನದಾನೇಶ್ವರ ಕಲ್ಯಾಣ ಮಂಟಪದಲ್ಲಿ ಹಾಲಕೇರೆ ಕರವೇ ಗ್ರಾಮ ಘಟಕ ಉದ್ಘಾಟನೆ, ಕನ್ನಡ ರಾಜ್ಯೋತ್ಸವ ಹಾಗೂ ಗಣ್ಯಮಾನ್ಯರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಬಡವರಿಗೆ, ದೀನದಲಿತರಿಗೆ ಅಲ್ಪ ಸಂಖ್ಯಾತರಿಗೆ ಸಮಸ್ಯೆ ಬಂದಲ್ಲಿ, ಅವರಿಗೆ ಸೂಕ್ತ ನ್ಯಾಯ ಒದಗಿಸುವ ಕಾರ್ಯ ಕರ್ನಾಟಕ ರಕ್ಷಣಾ ವೇದಿಕೆ ಮಾಡುತ್ತಿದೆ ಎಂದರು. ಕರವೇ ಜಿಲ್ಲಾಧ್ಯಕ್ಷ ಹನುಮಂತ ಅಬ್ಬಿಗೇರಿ ಮಾತನಾಡಿದರು. ಶಾಖಾ ಶಿವಯೋಗವುಂದಿರ ನಿಡಗುಂದಿಕೊಪ್ಪದ ಶಿವಬಸವ ಶ್ರೀಗಳು ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ಕರವೇ ತಾಲೂಕಾಧ್ಯಕ್ಷ ನಿಂಗಪ್ಪ ಹೊನ್ನಾಪುರ, ರಾಜ್ಯ ಪ್ರಶಸ್ತಿ ಪುರಸ್ಕೃತ ಸಿದ್ಧಲಿಂಗಯ್ಯಸ್ವಾಮಿ ಸೊಪ್ಪಿಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಪಂ ಸದಸ್ಯ ಅಂದಪ್ಪ ಬಿಚ್ಚೂರ, ಗ್ರಾಪಂ ಅಧ್ಯಕ್ಷೆ ಯಮನವ್ವ ಪೂಜಾರ, ಗ್ರಾಪಂ ಉಪಾಧ್ಯಕ್ಷೆ ಅಂದಮ್ಮ ಕುರಿ, ಶಿವಪುತ್ರಪ್ಪ ಹೊನವಾಡ, ಗ್ರಾಪಂ ಸದಸ್ಯ ಗಿರೀಶಗೌಡ ಮುಲ್ಕಿಪಾಟೀಲ, ಮುತ್ತಣ್ಣ ಕಡೇಮನಿ, ಈಶಪ್ಪ ಪ್ರಭಣ್ಣವರ, ದುರಗಪ್ಪ ವಡ್ಡರ, ಶಾರದಾ ಶಡ್ಲಗೇರಿ, ಯಲ್ಲವ್ವ ತಲೇಖಾನ, ಎಂ.ವಿ. ಗಾಣಿಗೇರ, ಅಂದಪ್ಪ ಎಮ್ಮೆ, ಸುರೇಶ ಹಾಲಕೇರೆ, ಜಿಲ್ಲಾ ಕರವೇ ಉಪಾಧ್ಯಕ್ಷ ವೀರೇಶ ಬಿಚ್ಚೂರ, ಜಯಕುಮಾರ ಬ್ಯಾಳಿ, ಬಸವರಾಜ ಕಾಳೆ, ಮೌಲಾಸಾಬ್ ಕುಂದಗೋಳ, ಸಂಗಯ್ಯ ಬೂಸನೂರಮಠ, ಎಸ್.ವಿ. ಹಳ್ಳಿಕೇರಿ ಮುಂತಾದವರು ಇದ್ದರು.