ಡಾ. ಸರೋಜಿನಿ ಮಹಿಷಿ ವರದಿ ಜಾರಿಗೊಳಿಸಿ
ಕನ್ನಡಪ್ರಭ ವಾರ್ತೆ, ಮುಂಡರಗಿ, ಡಿ. 26
ಕನ್ನಡಿಗರ ಬಹುದಿನಗಳ ಕನಸಾಗಿರುವ ಡಾ. ಸರೋಜಿನಿ ಮಹಿಷಿ ವರದಿ ಜಾರಿಗೆ ತರಬೇಕೆಂದು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಅನೇಕ ಬಾರಿ ಒತ್ತಾಯಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಈ ಯೋಜನೆ ಜಾರಿಯಾಗುವವರೆಗೂ ತಾಲೂಕು ಕನ್ನಡ ಜನಾಭಿವೃದ್ಧಿ ವೇದಿಕೆ ಹಾಗೂ ವಿವಿಧ ಸಂಘಟನೆಗಳು ಪ್ರತಿ ತಿಂಗಳಿನ ಕೊನೆಯ ಗುರುವಾರ ಪ್ರತಿಭಟನೆ ನಡೆಸಿ, ಸರ್ಕಾರಕ್ಕೆ ಮನವಿ ಅರ್ಪಿಸುವುದಾಗಿ ಕನ್ನಡ ಜನಾಭಿವೃದ್ಧಿ ವೇದಿಕೆ ಸಂಸ್ಥಾಪಕ ಅಧ್ಯಕ್ಷ ದೇವಪ್ಪ ಇಟಗಿ ಹೇಳಿದರು.
ಅವರು ಗುರುವಾರ ತಾಲೂಕು ಕನ್ನಡ ಜನಾಭಿವೃದ್ಧಿ ವೇದಿಕೆ, ಕನ್ನಡಕ್ರಾಂತಿ ಸೇನೆ ಹಾಗೂ ವಿವಿಧ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಡಾ. ಸರೋಜಿನಿ ಮಹಿಷಿ ವರದಿ ಜಾರಿಗೆ ತರಬೇಕೆಂದು ಆಗ್ರಹಿಸಿ ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಕರ್ನಾಟಕ ತನ್ನದೇ ಆದ ಇತಿಹಾಸ, ಸಂಸ್ಕೃತಿ, ನೆಲ, ಜಲ, ಭಾಷೆ ಹೊಂದಿರುವ ರಾಜ್ಯವಾಗಿದ್ದು, ಇಲ್ಲಿನ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಈ ರಾಜ್ಯದ ಜನತೆ ಅನೇಕ ವರ್ಷಗಳನ್ನು ಕಳೆದರೂ ಡಾ. ಸರೋಜಿನಿ ಮಹಿಷಿ ವರದಿ ಜಾರಿಗೆ ತರಲು ಸಾಧ್ಯವಾಗದಿರುವುದು ವಿಷಾದಕರ ಎಂದರು. ಮಂಜುನಾಥ ಇಟಗಿ ಮಾತನಾಡಿ, ನಿರುದ್ಯೋಗ ಸಮಸ್ಯೆಗೆ ಸರ್ಕಾರ ಸ್ಪಂದನೆ ಮಾಡಿ ಯುವಕರಿಗೆ ಅನುಕೂಲ ಮಾಡಿಕೊಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಂಪುಟದ ಸಚಿವರು ಸರ್ವಾನುಮತದಿಂದ ಒತ್ತಾಯಿಸಿ ಶೀಘ್ರ ಡಾ. ಸರೋಜಿನಿ ಮಹಿಷಿ ವರದಿಯನ್ನು ಜಾರಿಗೆ ತರಬೇಕು ಎಂದರು. ಪಟ್ಟಣದ ಕೋಟೆ ಭಾಗದ ಹನುಮಂತದೇವರ ದೇವಸ್ಥಾನದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆ ಜಾಗೃತ ವೃತ್ತ, ಕೊಪ್ಪಳ ವೃತ್ತದ ಮೂಲಕ ತಹಸೀಲ್ದಾರ್ ಕಚೇರಿಗೆ ತೆರಳಿ ತಹಸೀಲ್ದಾರ್ ಎಸ್.ಆರ್. ಶಿರಕೋಳ ಅವರ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಾಲೂಕು ಕನ್ನಡ ಜನಾಭಿವೃದ್ಧಿ ವೇದಿಕೆ ಅಧ್ಯಕ್ಷ ಮಂಜುನಾಥ ಕಟ್ಟಿಮನಿ, ಹನುಮಂತರಾಜ ಹದಗಾರ, ಹನುಮಂತ ಅಣ್ಣಿಗೇರಿ, ಪರಶುರಾಮ ಹಟ್ಟಿ, ಪ್ರವೀಣ ವಡ್ಡಟ್ಟಿ, ಹನುಮಂತ ಭಜಂತ್ರಿ, ಫಕ್ಕೀರೇಶ ಬ್ಯಾಲವಾಡಗಿ, ರವಿಕುಮಾರ್ ಪಾಟೀಲ, ಕನ್ನಡ ಕ್ರಾಂತಿ ಸೇನೆ ಅಧ್ಯಕ್ಷ ಮಂಜುನಾಥ ಮುಧೋಳ, ತಾಲೂಕು ಯುವ ಸೇವಾ ಸಂಘಟನೆಯ ಅಧ್ಯಕ್ಷ ಪವನ್ ಚೋಪ್ರಾ, ಕಾರ್ಯದರ್ಶಿ ಮಂಜುನಾಥ ಗೋಡಿ, ಕುಮಾರ ಬನ್ನಿಕೊಪ್ಪ, ನಾಗರಾಜ ಕೋಳಿ, ಸಂತೋಷ ಹಿರೇಮನಿ, ಬಸವರಾಜ ಭಾವಿಮನಿ ಮುಂತಾದವರು ಉಪಸ್ಥಿತರಿದ್ದರು.