ಶಿಂಗಟಾಲೂರು ಯೋಜನೆ ಶೀಘ್ರ ಮುಗಿಸಿ
ಕನ್ನಡಪ್ರಭವಾರ್ತೆ, ಮುಂಡರಗಿ, ಡಿ. 26
ಯಾವುದೇ ಸರ್ಕಾರಿ ಹಾಗೂ ಜನೋಪಯೋಗಿ ಯೋಜನೆಗಳು ಜಾರಿಯಾಗಬೇಕಾದರೆ ಅದಕ್ಕಾಗಿ ಹೋರಾಟ ಮಾಡುವುದು ಅನಿವಾರ್ಯ ಎಂದು ಮುಂಡರಗಿ ಸಂಸ್ಥಾನಮಠದ ಜ. ನಾಡೋಜ ಡಾ. ಅನ್ನದಾನೀಶ್ವರ ಶ್ರೀಗಳು ಹೇಳಿದರು.
ಅವರು ಗುರುವಾರ ಮುಂಡರಗಿ ಪಟ್ಟಣದ ಶ್ರೀಮಠದಲ್ಲಿ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಹಮ್ಮಿಕೊಂಡಿದ್ದ ಶಿಂಗಟಾಲೂರು ಏತನೀರಾವರಿ ಯೋಜನೆ ಕಾಮಗಾರಿ ತೀವ್ರಗೊಳಿಸುವಂತೆ ಆಗ್ರಹಿಸಿ ನಡೆಸಿದ ಬೈಕ್ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದರು.
ಮುಂಡರಗಿ, ಗದಗ, ಕೊಪ್ಪಳ ಭಾಗದ ರೈತರ ಜೀವನಾಡಿಯಾಗಿರುವ ಶಿಂಗಟಾಲೂರು ಹುಲಿಗುಡ್ಡ ಏತನೀರಾವರಿ ಯೋಜನೆಯು ಈ ಭಾಗದಲ್ಲಿ ಅತಿ ಅವಶ್ಯವಾಗಿದ್ದು, ಇದಕ್ಕಾಗಿ ಜನಪ್ರತಿನಿಧಿಗಳು, ರೈತರು ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳು ನಡೆಸುವ ಹೋರಾಟಕ್ಕೆ ದೊಡ್ಡ ಶಕ್ತಿಯಿದೆ. ಸ್ಥಳೀಯ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಬಂಧಪಟ್ಟ ಇಲಾಖೆಯ ಸಚಿವರು ಮತ್ತು ಅಧಿಕಾರಿಗಳು ವಿಧಾನಸಭೆಯಲ್ಲಿ ಈ ಕುರಿತು ಮಾತನಾಡುವ ಮೂಲಕ ಕಾಮಗಾರಿಯನ್ನು ವಿಳಂಬ ಮಾಡದೇ ಶೀಘ್ರ ಪೂರ್ಣಗೊಳಿಸಬೇಕು ಎಂದರು.
ತಾಲೂಕು ಅಭಿವೃದ್ಧಿ ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್. ಗೌಡರ ಮಾತನಾಡಿ, 1992ರಲ್ಲಿ ಪ್ರಾರಂಭವಾದ ಈ ಶಿಂಗಟಾಲೂರು ಹುಲಿಗುಡ್ಡ ಏತ ನೀರಾವರಿ ಯೋಜನೆಯು 20 ವರ್ಷ ಕಳೆದರೂ ಶೇ. 20ರಷ್ಟು ಕಾಮಗಾರಿ ಪೂರ್ಣಗೊಂಡಿಲ್ಲ. ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ಭಾಗದಲ್ಲಿ ಈ ಯೋಜನೆಯು ಈಗಾಗಲೇ ಪೂರ್ಣಗೊಂಡಿದ್ದು, ಕಳೆದ 1 ವರ್ಷದಿಂದ ಅಲ್ಲಿನ ರೈತರು ಈ ಯೋಜನೆಯ ಲಾಭ ಪಡೆದುಕೊಳ್ಳುತ್ತಿದ್ದಾರೆ. ಯೋಜನೆಗಾಗಿ ಅತಿ ಹೆಚ್ಚು ಭೂಮಿ ಕಳೆದುಕೊಂಡ ಮುಂಡರಗಿ ತಾಲೂಕಿನ ರೈತರಿಗೆ ಮಾತ್ರ ಅನ್ಯಾಯವಾಗುತ್ತಲೇ ಇದೆ. ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಇಲ್ಲಿನ ಜನಪ್ರತಿನಿಧಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ತಾಲೂಕನ್ನು ಕಡೆಗಣಿಸಿದ್ದಾರೆ. ಈ ಭಾಗದ ರೈತರಿಗೆ ವರದಾನವಾಗಲಿರುವ ಈ ಯೋಜನೆಯನ್ನು ಬೇಗನೆ ಪೂರ್ಣಗೊಳಿಸಬೇಕು.
ಸರ್ಕಾರ ಈಗಾಗಲೇ ಜಿಲ್ಲೆಯ ಗದಗ, ಶಿರಹಟ್ಟಿ, ರೋಣ, ಮತ್ತು ನರಗುಂದ ತಾಲೂಕುಗಳನ್ನು ಬರಗಾಲ ಪೀಡಿತ ತಾಲೂಕುಗಳೆಂದು ಘೋಷಣೆ ಮಾಡಿದ್ದು, ಸತತ ಬರಗಾಲದಿಂದ ಬಳಲುತ್ತಿರುವ ಮುಂಡರಗಿ ತಾಲೂಕನ್ನು ಮಾತ್ರ ಬರಗಾರ ತಾಲೂಕೆಂದು ಘೋಷಿಸದೇ ಅನ್ಯಾಯ ಮಾಡಿದೆ. ಈ ಯೋಜನೆ ತೀವ್ರವಾಗಿ ಪ್ರಾರಂಭವಾದರೆ ರೈತರ ಸಮಸ್ಯೆಗಳು ಕಡಿಮೆಯಾಗುತ್ತವೆ. ಆದ್ದರಿಂದ ಸರ್ಕಾರ ಈ ಕೂಡಲೇ ಮುಂಡರಗಿ ತಾಲೂಕನ್ನು ಬರಗಾಲ ಪೀಡಿತ ತಾಲೂಕೆಂದು ಘೋಷಣೆ ಮಾಡುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಕರಬಸಪ್ಪ ಹಂಚಿನಾಳ, ಬಸವರಾಜ ನವಲಗುಂದ, ಆನಂದಗೌಡ ಪಾಟೀಲ, ಎಸ್.ವಿ. ಪಾಟೀಲ, ರಾಮಚಂದ್ರ ಗಾರವಾಡ, ಕರವೇ ಜಿಲ್ಲಾಧ್ಯಕ್ಷ ಕೆ.ಎಸ್. ಕೊಡತಗೇರಿ, ತಾಲೂಕು ಅಧ್ಯಕ್ಷ ಶಿವಾನಂದ ಬಾರಕೇರ, ಪರಶುರಾಮ ರಾಮೇನಹಳ್ಳಿ, ಯಲ್ಲಪ್ಪ ಹೂಲಗೇರಿ, ಶಂಕರಗೌಡ ಪಾಟೀಲ, ಯುವಸೇವಾ ಸಂಘಟನೆಯ ಅಧ್ಯಕ್ಷ ಪವನ್ಚೋಪ್ರಾ, ಕಾರ್ಯದರ್ಶಿ ಮಂಜುನಾಥ ಗೋಡಿ, ಕನ್ನಡಕ್ರಾಂತಿ ಸೇನೆ ಅಧ್ಯಕ್ಷ ಮಂಜುನಾಥ ಮುಧೋಳ, ಮಂಜುನಾಥ ಇಟಗಿ, ದೇವಪ್ಪ ಇಟಗಿ, ಮಂಜುನಾಥ ಕಾಗನೂರು, ಸುಭಾಸ್ ಗುಡಿಮನಿ, ಬಸನಗೌಡ ಪಾಟೀಲ, ರಾಘು ಕಟ್ಟಿಮನಿ, ಲಕ್ಷ್ಮಣ ದೇಸಾಯಿ, ಲಿಂಗರಾಜಗೌಡ ಪಾಟೀಲ, ಅಭಿಷೇಕ ಶಿಂಘೆ, ಜಲಾಲ ಕೊಪ್ಪಳ, ಅಲ್ಲಾಭಕ್ಷಿ ಅಳವಂಡಿ ಸೇರಿದಂತೆ ಅನೇಕ ಕಾರ್ಯಕರ್ತರು ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಕರ್ನಾಟಕ ರಕ್ಷಣಾ ವೇದಿಕೆಯಿಂದ ಡಿಸಿಗೆ ಮನವಿ
ಕನ್ನಡಪ್ರಭ ವಾರ್ತೆ, ಗದಗ, ಡಿ. 26
ಶಿಂಗಟಾಲೂರ ಏತನೀರಾವರಿ ಯೋಜನೆ ತ್ವರಿತಗತಿಯಲ್ಲಿ ನಡೆಯಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಎಚ್. ಶಿವರಾಮೇಗೌಡ ಬಣ) ಗುರುವಾರ ಮುಂಡರಗಿಯಿಂದ ಗದಗ ಜಿಲ್ಲಾಡಳಿತ ಭವನದವರೆಗೆ ಬೃಹತ್ ಬೈಕ್ರ್ಯಾಲಿ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.
ಮುಂಡರಗಿ ತಾಲೂಕು ಸತತ ಬರಗಾಲಕ್ಕೆ ತುತ್ತಾಗುತ್ತಿರುವುದರಿಂದ ಪಕ್ಕದಲ್ಲಿಯೇ ಹರಿದು ಸಮುದ್ರ ಸೇರುತ್ತಿರುವ ತುಂಗಭದ್ರಾ ನದಿ ನೀರನ್ನು ನೀರಾವರಿಗೊಳಪಡಿಸಿ ಮುಂಡರಗಿ, ಹೂವಿನಹಡಗಲಿ, ಕೊಪ್ಪಳ ಹಾಗೂ ಗದಗ ತಾಲೂಕಿನ ರೈತರಿಗೆ ಅನುಕೂಲವಾಗಲೆಂದು ಶಿಂಗಟಾಲೂರ ಏತನೀರಾವರಿ ಯೋಜನೆ 1992ರಲ್ಲಿ ಪ್ರಾರಂಭಗೊಂಡು 20 ವರ್ಷ ಕಳೆದರೂ ಶೇ. 70ರಷ್ಟು ಯೋಜನೆ ಪ್ರಗತಿಯಾಗಿಲ್ಲ. ಕೂಡಲೇ ಈ ಕಾಮಗಾರಿ ತ್ವರಿತಗತಿಯಲ್ಲಿ ನಡೆಯಬೇಕು ಎಂದು ಮನವಿ ಮೂಲಕ ಒತ್ತಾಯಿಸಿದರು.
ಶಿಂಗಾಟಾಲೂರ ಏತನೀರಾವರಿ ಯೋಜನೆ ಶೀಘ್ರ ಪೂರ್ಣಗೊಳಿಸಬೇಕು. ಈ ಯೋಜನೆಯಿಂದ ಮುಳುಗಡೆಯಾದ ಗ್ರಾಮಗಳಿಗೆ ಪುನರ್ವಸತಿ ಕಲ್ಪಿಸಬೇಕು. ಈ ಯೋಜನೆಯ ಕಾಮಗಾರಿ ಅನುಷ್ಠಾನದಲ್ಲಿ ಕಾಲುವೆ ನಿರ್ಮಾಣಕ್ಕೆ ಕಳೆದುಕೊಂಡ ನೀರಾವರಿ ಜಮೀನಿಗೆ ಪ್ರತಿ ಎಕರೆಗೆ ರು. 10 ಲಕ್ಷ, ಖುಷ್ಕಿ ಜಮೀನಿಗೆ ರು. 5 ಲಕ್ಷದಂತೆ ಬೆಲೆ ನಿಗದಿಗೊಳಿಸಿ, ಶೀಘ್ರ ಪರಿಹಾರ ನೀಡಬೇಕು. ಈ ಯೋಜನೆಯಲ್ಲಿ ಕಾಲುವೆ ನಿರ್ಮಾಣ ಹಾಗೂ ಜಲಸಂಗ್ರಹಾಲಯ ಕಾಮಗಾರಿಗಳು ಕಳಪೆಮಟ್ಟದವುಗಳಾಗಿದ್ದು, ತಜ್ಞ ಎಂಜಿನಿಯರುಗಳಿಂದ (ಮೂರನೇ ವ್ಯಕ್ತಿಯ ಸಂಸ್ಥೆಯಿಂದ) ತನಿಖೆ ಮಾಡಿಸಿ ಸೂಕ್ತ ಕ್ರಮಜರುಗಿಸಬೇಕು ಎಂದು ಪ್ರತಿಭಟನಾಕಾರರು ಮನವಿಯಲ್ಲಿ ಆಗ್ರಹಿಸಿದ್ದಾರೆ.
ವೇದಿಕೆಯ ಬಳ್ಳಾರಿ ಜಿಲ್ಲಾಧ್ಯಕ್ಷ ಸುರೇಶ, ವೇದಿಕೆಯ ಮುಂಡರಗಿ ತಾಲೂಕಾಧ್ಯಕ್ಷ ಶಿವಾನಂದ ಬಾರಕೇರ, ಮಹಿಳಾ ಜಿಲ್ಲಾಧ್ಯಕ್ಷೆ ಭಾಗ್ಯಶ್ರೀ ಲಮಾಣಿ, ಅಲ್ಲಾಭಕ್ಷಿ ಅಳವಂಡಿ, ಸುಭಾಶ ಗುಡಿಮನಿ, ರಾಘು ಕಟ್ಟಿಮನಿ, ಪರಶುರಾಮ ರಾಮೇನಹಳ್ಳಿ, ಯಲ್ಲಪ್ಪ ಹುಯಿಲಗೇರಿ, ಕುಮಾರ ಕಟ್ಟಿಮನಿ, ಗುರು ಹಿರೇಮಠ, ಮಹಾದೇವ ಡೊಣ್ಣಿ, ಅಂದಪ್ಪ ಚಿಕ್ಕಣ್ಣವರ, ಯಲಾಲ ಕೊಪ್ಪಳ, ಮಹೇಶ ಮುಂತಾದವರು ಪಾಲ್ಗೊಂಡಿದ್ದರು.