ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಅಕ್ರಮ ಗಣಿಗಾರಿಕೆಗೆ ಕರಗಿದ ಕಲ್ಲುಗುಡ್ಡ

Vishwanath S
Updated On : 28 Dec 2013, 11:12 am

ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಡಿ. 27
ಕೈಯಲ್ಲಿ ಜೀವ ಹಿಡಿದುಕೊಂಡು ಹೊಲದಲ್ಲಿ ಕೆಲಸ ಮಾಡುತ್ತಿರುವ ರೈತರು ಹಾಗೂ ಕೃಷಿ ಕೂಲಿ ಕಾರ್ಮಿಕರು, ಇನ್ನೊಂದೆಡೆ ಬಿರುಕು ಬಿಡುತ್ತಿರುವ ಮನೆಗಳು, ಕುಸಿಯುತ್ತಿರುವ ಅಂತರ್ಜಲ ಮಟ್ಟ, ನೆಲದೊಳಗೆ ಸಿಕ್ಕಿ ಹಾಕಿಕೊಳ್ಳುತ್ತಿರುವ ಕೊಳವೆಬಾವಿ ಮೋಟಾರ್‌ಗಳು. ಇವೆಲ್ಲ ಅಕ್ರಮ ಕಲ್ಲುಗಣಿ ಸ್ಫೋಟದಿಂದ ಆಗುತ್ತಿರುವ ಅನಾಹುತಗಳ ಸರಮಾಲೆ.
ಸಮೀಪದ ಆದ್ರಳ್ಳಿ, ನಾದಿಗಟ್ಟಿ, ಕುಂದ್ರಳ್ಳಿ ಸುತ್ತಮುತ್ತಲೂ ಇರುವ ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಿರಂತರವಾಗಿ ಸಾಗಿದ್ದರೂ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ. ಅಕ್ರಮ ಕಲ್ಲು ಗಣಿಗಾರಿಕೆಗೆ ಬೃಹತ್ ಕಲ್ಲು ಬಂಡೆಗಳ ಗುಡ್ಡಗಳು ದಿನ ಬೆಳಗಾಗುವುದರೊಳಗಾಗಿ ಬರಿದಾಗುತ್ತಿವೆ. ಡೈನಮೈಟ್‌ಗಳ ಸ್ಫೋಟದ ಶಬ್ದಕ್ಕೆ ಮನೆ ಮಠಗಳು ಗಡಗಡ ನಡುಗುತ್ತಿವೆ. ಸ್ಫೋಟದಿಂದ ಸಿಡಿದ ಕಲ್ಲುಗಳು ಯಾವ ಕ್ಷಣದಲ್ಲಿ ನಮ್ಮ ಮೇಲೆ ಬಿದ್ದು ಪ್ರಾಣ ಹೋದರೆ ಎನ್ನುವ ಭೀತಿಯಿಂದ ಕೃಷಿ ಕಾರ್ಯಕ್ಕೆ ಕೂಲಿ ಕಾರ್ಮಿಕರು ಸಿಗುತ್ತಿಲ್ಲ.  ಪ್ರಾಣಿ ಪಕ್ಷಿ ಸಂಕುಲಗಳು ಕಣ್ಮರೆಯಾಗುತ್ತ ಸಾಗುತ್ತಿದ್ದರೂ ಪ್ರಕೃತಿ ನಾಶದ ಹಾದಿ ಬಿಟ್ಟಿಲ್ಲ. ಅರಣ್ಯ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಇದಕ್ಕೆ ಪರೋಕ್ಷವಾಗಿ ಸಹಕಾರ ನೀಡುತ್ತಿದ್ದಾರೆ ಎಂದು ಕುಂದ್ರಳ್ಳಿ ಹಾಗೂ ಆದ್ರಳ್ಳಿಯ ಗ್ರಾಮಸ್ಥರು ಆರೋಪಿಸುತ್ತಾರೆ.
ಹಾಳಾಗುತ್ತಿರುವ ಕೃಷಿ: ಇನ್ನೂ ರೈತರ ಹೊಲದಲ್ಲಿನ ಕೊಳವೆಬಾವಿ ನೀರು ಪಾತಾಳವನ್ನು ಕಾಣುತ್ತಿವೆ. ಕಲ್ಲುಗುಡ್ಡಗಳನ್ನು ಒಡೆಯಲು ಬಳಸುತ್ತಿರುವ ಡೈನಮೈಟ್‌ಗಳ ಸ್ಫೋಟಕ್ಕೆ ಭೂಮಿಯು ಅದುರುತ್ತಿದ್ದು ಕೊಳವೆಬಾವಿ ಒಳಗಡೆ ಇರುವ ಮೋಟಾರ್‌ಗಳು ಅದರಲ್ಲಿಯೇ ಸಿಕ್ಕಿಹಾಕಿಕೊಂಡು ಕೆಟ್ಟು ಹೋಗುತ್ತಿವೆ. ಇನ್ನೂ ಕೆಲವೆಡೆ ಈ ಹಿಂದೆ ಇದ್ದ ನೀರು ಈಗ ಕಾಣಿಯಾಗಿ ಕೊಳವೆಬಾವಿ ಬಂದ್ ಆಗಿವೆ. ಕೃಷಿ ಹಾಗೂ ತೋಟಗಾರಿಕೆಯ ಬದುಕು ಹಾಳಾಗಿ ಹೋಗುತ್ತಿದೆ ಎಂಬುದು ರೈತರ ನೋವಿನ ನುಡಿಯಾಗಿದೆ.
ಕಣ್ಮುಚ್ಚಿ ಕುಳಿತ ಅಧಿಕಾರಿಗಳು: ಅಮೂಲ್ಯವಾದ ಪ್ರಕೃತಿ ಸಂಪತ್ತು ಅಕ್ರಮ ಗಣಿಗಾರಿಕೆಗೆ ನಾಶವಾಗುತ್ತಿರುವುದನ್ನು ಕಂಡ ಅಧಿಕಾರಿಗಳು ಏನು ಮಾಡುತ್ತಿದ್ದಾರೆ, ಅಕ್ರಮ ಕಲ್ಲು ಗಣಿಗಾರಿಕೆ ಮಾಡುತ್ತಿರುವವರ ಮೇಲೆ ಯಾಕೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದಾಗಿ ಗ್ರಾಮಸ್ಥರು ಪ್ರಶ್ನಿಸುತ್ತಾರೆ. ಇನ್ನೂ ಒಂದು ಹೆಜ್ಜೆ ಹೋದ ಗ್ರಾಮಸ್ಥರು, ಅಕ್ರಮವಾಗಿ ಕಲ್ಲುಗಣಿಗಾರಿಕೆ ಮಾಡುತ್ತಿರುವ ಲೂಟಿಕೋರರು ತಾಲೂಕು ಅರಣ್ಯ ಅಧಿಕಾರಿಗಳಿಗೆ ಪ್ರತಿ ತಿಂಗಳು ಮುಟ್ಟಬೇಕಾದ
ಬಾಬತ್ತು ಮುಟ್ಟಿಸುತ್ತಾರೆ. ಹೀಗಾಗಿ ಅವರು ಬಾಯಿ ಮುಚ್ಚಿಕೊಂಡು ಕುಳಿತಿದ್ದಾರೆ ಎಂದು ನೇರವಾಗಿ ಆರೋಪಿಸುತ್ತಾರೆ.
ಅಕ್ರಮ ಗಣಿಗಾರಿಕೆಯ ಕಲ್ಲುಗಳನ್ನು ರಾಜಾರೋಷವಾಗಿ ಟ್ರ್ಯಾಕ್ಟರ್‌ನಲ್ಲಿ ತುಂಬಿಕೊಂಡು ಸಾಗಿಸುತ್ತಿದ್ದರೂ ಯಾವ ಅಧಿಕಾರಿಗಳು ಅವರ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ. ಹೋಗಲಿ ಬಿಡು ಸರ್ಕಾರಕ್ಕೆ ಸಲ್ಲಬೇಕಾದ ರಾಜಸ್ವವನ್ನಾದರೂ ಸಲ್ಲಿಸುತ್ತಿದ್ದಾರೆ ಎಂದರೆ ಅದು ಕೂಡ ಇಲ್ಲ. ಇನ್ನು ಮೀಸಲು ಅರಣ್ಯ ಪ್ರದೇಶದಲ್ಲಿನ ಒಂದು ಹಿಡಿ ಮಣ್ಣು ಕೂಡ ಮುಟ್ಟಲು ಸಾರ್ವಜನಿಕರಿಗೆ ಅವಕಾಶವಿಲ್ಲ. ಹೀಗಿದ್ದಾಗ್ಯೂ ಇಲ್ಲಿನ ಅರಣ್ಯ ಅಧಿಕಾರಿಗಳು ಏಕೆ ಸುಮ್ಮನಿದ್ದಾರೋ ಗೊತ್ತಾಗುತ್ತಿಲ್ಲ. ಅಕ್ರಮ ಕಲ್ಲು ಗಣಿಗಾರಿಕೆಯನ್ನು ತಡೆಯುವ ನಿಟ್ಟಿನಲ್ಲಿ ಅಧಿಕಾರಿಗಳು ಶೀಘ್ರವಾಗಿ ಕ್ರಮ ಕೈಗೊಳ್ಳದೆ ಹೋದಲ್ಲಿ ಕುಂದ್ರಳ್ಳಿ, ಆದ್ರಳ್ಳಿ, ಸಂಕದಾಳ ಹಾಗೂ ನಾದಿಗಟ್ಟಿ ತಾಲೂಕು ದಂಡಾಧಿಕಾರಿಗಳ ಕಚೇರಿ ಹಾಗೂ ಅರಣ್ಯ ಇಲಾಖೆಯ ಕಚೇರಿಯ ಮುಂದೆ ಧರಣಿ ಸತ್ಯಾಗ್ರಹ ಮಾಡುವುದಾಗಿ ಗ್ರಾಮಸ್ಥರು ಹೇಳಿದರು. ತಾಲೂಕು ಅರಣ್ಯ ಅಧಿಕಾರಿ ಹಿರೇಮನಿ ಅವರನ್ನು ದೂರವಾಣಿ ಮುಖಾಂತರ ಸಂಪರ್ಕಿಸಲು ಯತ್ನಿಸಿದರೆ ಮೊಬೈಲ್ ರಿಂಗಣಿಸಿದರೂ ಎತ್ತುವ ಸೌಜನ್ಯವನ್ನು ತೋರುತ್ತಿಲ್ಲ.


-ಅಶೋಕ ಸೊರಟೂರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement