ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಕೊಳಚೆ ಪ್ರದೇಶಗಳ ಘೋಷಣೆಗೆ ವಿಳಂಬ: ಖಂಡನೆ

Vishwanath S
Updated On : 28 Dec 2013, 11:12 am

ಕನ್ನಡಪ್ರಭ ವಾರ್ತೆ, ಗದಗ, ಡಿ. 27
ಕರ್ನಾಟಕದಲ್ಲಿ ಅಂದಾಜು ಇದುವರೆಗೂ ಮಂಡಳಿ ಸುಮಾರು 2720 ಪ್ರದೇಶಗಳನ್ನು ಸ್ಲಂ ಎಂದು ಅಧಿಸೂಚನೆ ಹೊರಡಿಸಿದ್ದು, ಇನ್ನೂ 4 ಸಾವಿರಕ್ಕೂ ಮೇಲ್ಪಟ್ಟ ಅಘೋಷಿತ ಸ್ಲಂಗಳನ್ನು ಅಧಿಸೂಚನೆ ಹೊರಡಿಸಲು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಬೇಕೆಂದು ಸ್ಲಂ ಜನಾಂದೋಲನ ಕರ್ನಾಟಕ ಮತ್ತು ಸದಸ್ಯ ಸಂಘಟನೆಗಳ ಪದಾಧಿಕಾರಿಗಳು ವಿಧಾನಸೌಧದಲ್ಲಿರುವ ರಾಜ್ಯ ಸರ್ಕಾರದ ವಸತಿ ಇಲಾಖೆಗೆ ಭೇಟಿ ನೀಡಿ, ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಇ.ವಿ. ರಮಣರೆಡ್ಡಿಯವರಿಗೆ ಮನವಿ ಸಲ್ಲಿಸಿದರು.
ಸ್ಲಂ ಘೋಷಣೆಗೆ ಸಂಬಂಧಿಸಿದ ಚೆಕ್‌ಲಿಸ್ಟ್‌ಗಳ ದಾಖಲೆಗಳನ್ನು ಸ್ಲಂ ಬೋರ್ಡ್ ಅಧಿಕಾರಿಗಳು ಆದ್ಯತೆ ಮೇಲೆ ಮಾಡುತ್ತಿಲ್ಲ. ಸ್ಲಂ ಘೋಷಣೆಯ ಪ್ರಕ್ರಿಯ ನಡೆಸಲು ರಾಜ್ಯದ ಎಲ್ಲ ಜಿಲ್ಲೆಗಳ ಸ್ಲಂ ಬೋರ್ಡ್ ಸಹಾಯಕ ಕಾರ್ಯಪಾಲಕ ಅಭಿಯಂತರಿಗೆ ಜವಾಬ್ದಾರಿ ನೀಡಿದ್ದು ಇವರು ಹೆಚ್ಚು ತಾಂತ್ರಿಕ ಮತ್ತು ಕಾಮಗಾರಿಗಳಿಗೆ ಗಮನ ನೀಡುತ್ತಿದ್ದು ಸ್ಲಂ ಘೋಷಣೆಗೆ ಗಮನ ನೀಡುತ್ತಿಲ್ಲ ಎಂದು ಮನವಿಯಲ್ಲಿ ದೊರಲಾಗಿದೆ.
ಸ್ಲಂ ಬೋರ್ಡ್‌ನಲ್ಲಿ ಕಂದಾಯ ವಿಭಾಗಕ್ಕೆ ಜವಾಬ್ದಾರಿ ನೀಡಿ 90 ದಿನಗಳಲ್ಲಿ ಪ್ರಸ್ತಾವನೆ ಸಲ್ಲಿಸಿದ್ದ ಸ್ಲಂಗಳ ಅಧಿಸೂಚನೆ ಹೂರಡಿಸಲು ಎಲ್ಲ ಜಿಲ್ಲಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಬೇಕು. 2005ರಿಂದ 2013ರ ವರೆಗೆ ಕರ್ನಾಟಕ ಸರ್ಕಾರ ವಸತಿ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಕೊಳಗೇರಿ ಮಂಡಳಿಯಿಂದ ಸ್ವಾಧೀನ ಪತ್ರ, ಪರಿಚಯ ಪತ್ರ, ಹಕ್ಕುಪತ್ರ ನೀಡಲು ಸುಮಾರು 14 ಸುತ್ತೋಲೆಗಳನ್ನು ಹೊರಡಿಸಲಾಗಿದ್ದು, ಯಾರೂ ಸರ್ಕಾರದ ಆದೇಶ ಪಾಲಿಸುತ್ತಿಲ್ಲ. ಆದ್ದರಿಂದ 1975ರಲ್ಲಿ ಜಾರಿಗೆ ಬಂದ ಸ್ಲಂ ಕಾಯ್ದೆ ಸೆಕ್ಷೆನ್ 4ರ ಪ್ರಕಾರ ಘೋಷಣೆಯಾದ ಸ್ಲಂ ಪ್ರದೇಶದ ನಿವಾಸಿಗಳಿಗೆ ನೊಂದಣಿ ಪತ್ರವನ್ನು ನೀಡಲು ಸ್ಲಂ ಬೋರ್ಡ್ ಆಯುಕ್ತರಿಗೆ ನಿರ್ದೇಶನ ನೀಡಬೇಕು. 2009ರಿಂದ ರಾಜ್ಯದಲ್ಲಿ ಜಾರಿಗೆ ಬಂದಿರುವ ಸ್ಲಂ ಫ್ರೀ ಸಿಟಿ (ಕೊಳಗೇರಿ ಮುಕ್ತ ನಗರ) ಮತ್ತು ರಾಜೀವ್ ಗಾಂಧಿ ಅವಾಸ್ ಯೋಜನೆಯನ್ನು ಜನ ಪಾಲ್ಗೊಳ್ಳುವಿಕೆ ಮತ್ತು ತೀರ್ಮಾನಗಳಿಗೆ ಆದ್ಯತೆ ನೀಡುವ ಪುನರ್ ವಿಮರ್ಶೆಗೊಳಪಡಿಸಿ, ಸ್ಲಂ ನಿವಾಸಿಗಳಿಗೆ ಇನ್ಸೆಂಟಿವ್ ಮಾದರಿಯಲ್ಲಿ ಮನೆ ನಿರ್ಮಿಸಿ ಕೊಡಲು ರಾಜ್ಯ ಸರ್ಕಾರ ಮುಂದಾಗಲಿ ಎಂದು ಮನವಿಯಲ್ಲಿ ತಿಳಿಸಿದರು. ಮನವಿ ನೀಡುವ ನಿಯೋಗದಲ್ಲಿ ಸ್ಲಂ ಜನಾಂದೋಲನ ರಾಜ್ಯ ಸಂಚಾಲಕ ಎ. ನರಸಿಂಹಮೂರ್ತಿ, ಸ್ಲಂ ಜನಾಂದೋಲನ ಕರ್ನಾಟಕ ವಿಭಾಗೀಯ ಸಂಚಾಲಕ ಹಾಗೂ ಗದಗ ಜಿಲ್ಲಾ ಕೊಳಚೆ ನಿವಾಸಿಗಳ ಹಿತರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಇಮ್ತಿಯಾಜ್ ಮಾನ್ವಿ, ಗುಲ್ಬರ್ಗ ಸಂಚಾಲಕ ಅಲ್ಲಮಪ್ರಭು ನಿಂಬರ್ಗಾ, ರಾಯಚೂರ ಸಂಚಾಲಕ ಜನಾರ್ದನ ಹಳ್ಳಿಬೆಂಚಿ, ಬಿಜಾಪುರ ಸಂಚಾಲಕ ಅಕ್ರಮ ಮಸಾಳಕರ, ಧಾರವಾಡ ಸಂಚಾಲಕ ರಸೂಲ ನದಾಫ, ಮಹಿಳಾ ರಾಜ್ಯ ಸಂಚಾಲಕಿ ಚಂದ್ರಮ್ಮ, ಹರೀಷ  ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement