ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಗ್ರಾಪಂ ಅಧ್ಯಕ್ಷನನ್ನು ಕೂಡಿ ಹಾಕಿ ಪ್ರತಿಭಟನೆ

Vishwanath S
Updated On : 28 Dec 2013, 11:13 am

ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಡಿ. 27
ಬಸವಾ ವಸತಿ, ಇಂದಿರಾ ಆವಾಸ ಯೋಜನೆ ಫಲಾನುಭವಿಗಳ ಆಯ್ಕೆಯಲ್ಲಿ ತಾಲೂಕಿನ ಯಳವತ್ತಿ ಗ್ರಾಮ ಪಂಚಾಯಿತಿಯಲ್ಲಿ ಅವ್ಯವಹಾರ ನಡೆಸಲಾಗಿದೆ ಎಂದು ಆರೋಪಿಸಿ, ಮಾಡಳ್ಳಿ ಗ್ರಾಮಸ್ಥರು ಶುಕ್ರವಾರ ಗ್ರಾಪಂ ಅಧ್ಯಕ್ಷ ಬಸವರಾಜ ನಿಲಗುಂದ ಅವರನ್ನು ಕಾರ್ಯಾಲಯದಲ್ಲಿಯೇ ಕೂಡಿ ಹಾಕಿ, ಬಾಗಿಲು ಹಾಕಿ ಪ್ರತಿಭಟನೆ ನಡೆಸಿದರು.
ಬಸವಾ ವಸತಿ ಯೋಜನೆ ಮತ್ತು ಇಂದಿರಾ ಆವಾಸ ಯೋಜನೆಯಡಿ ಒಟ್ಟು 42 ಮನೆಗಳು ಮಂಜೂರಾಗಿದ್ದು, ಇದರಲ್ಲಿ ಯಳವತ್ತಿ ಪಂಚಾಯಿತಿ ವ್ಯಾಪ್ತಿಯ ಮಾಡಳ್ಳಿ ಗ್ರಾಮಕ್ಕೆ 14 ಮನೆಗಳನ್ನು ನೀಡಿದ್ದು, ಆ ಗ್ರಾಮದ 7 ಸದಸ್ಯರು ತಮ್ಮ ಸಂಬಂಧಿಗಳಿಗೆ ಮನೆ ನೀಡಿದ್ದಾರೆ.
ಬೇರೆ ಫಲಾನುಭವಿಗಳು ಮನೆ ಕೊಡಿಸುವಂತೆ ಕೇಳಿದರೆ ಅವರಿಂದ ರು. 20 ಸಾವಿರ ಕೇಳುತ್ತಿದ್ದಾರೆ. ಸದಸ್ಯರ ತಾರತಮ್ಯ ನೀತಿ ಫಲಾನುಭವಿಗಳ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಪ್ರತಿಭಟನಾ ನಿರತ ಗೌರಮ್ಮ ಬಾವಿಕಟ್ಟಿ, ಪುಟ್ಟವ್ವ ಹೊಸಮನಿ ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ ಸಾಲಿನಲ್ಲಿ ಬಸವಾ ವಸತಿ ಯೋಜನೆಯಡಿ ಮಂಜೂರಾದ 136 ಮನೆಗಳು ಗ್ರಾಪಂ ಸದಸ್ಯರ ತಾರತಮ್ಯ ನೀತಿಯಿಂದ ಸರ್ಕಾರಕ್ಕೆ ವಾಪಸ್ ಹೋಗಿವೆ. ಬರೀ ಲಂಚದ ಹಣಕ್ಕೆ ಕೈಚಾಚುತ್ತಿರುವ ಸದಸ್ಯರ ಸದಸ್ಯತ್ವ ರದ್ದತಿಗೆ ಚುನಾವಣಾ ಯೋಗಕ್ಕೆ ಪತ್ರಬರೆಯುವ ಜತೆಗೆ ಪಂಚಾಯಿತಿ ಸೂಪರ್ ಸೀಡ್ ಮಾಡುವಂತೆ ಪ್ರಕಾಶ ಬೆಳವಟಗಿ, ಫಕ್ಕಿರೇಶ ಭಜಂತ್ರಿ, ಮಂಜುನಾಥ ಗಡೆಣ್ಣವರ ಆಗ್ರಹಿಸಿದರು.
ಯಳವತ್ತಿ ಗ್ರಾಪಂ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೈಗೊಂಡ ಬಹುತೇಕ ಕಾಮಗಾರಿಗಳು ಸಂಪೂರ್ಣ ಕಳಪೆ ಗುಣಮಟ್ಟದಿಂದ ಕೂಡಿವೆ. ಕೃಷಿ ಹೊಂಡ, ರಸ್ತೆ, ಚರಂಡಿ, ಹೊಳಗಟ್ಟಿ, ಶಾಲಾ ಕಾಂಪೌಂಡ್ ನಿರ್ಮಾಣ ಮಾಡಿರುವುದಾಗಿ ಹೇಳಿ ಕೋಟ್ಯಂತರ ಹಣದ ಬೋಗಸ್ ಬಿಲ್ ತೆಗೆದಿದ್ದಾರೆ. ಗ್ರಾಮಕ್ಕೆ ಯಾವುದೇ ಮೂಲ ಸೌಲಭ್ಯ ಕಲ್ಪಿಸದೇ ಬಾರೀ ಹಣದ ಅವ್ಯವಹಾರ ನಡೆಸಿದ್ದಾರೆ. ಲೋಕಾಯುಕ್ತ ಅಧಿಕಾರಿಗಳಿಗೂ ದೂರ ನೀಡಲಾಗಿದ್ದು, ಸಮಗ್ರ ತನಿಖೆ ನಡೆಸಬೇಕು ಎಂದು ರೈಮನ್‌ಸಾಬ ನದಾಫ್, ಹೇಮಣ್ಣ ಕೋಣಿ ಆಗ್ರಹಿಸಿದರು.
ಪಟ್ಟುಬಿಡದ ಪ್ರತಿಭಟನಾಕಾರರು: ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ಸಿಇಒ ವೀರಣ್ಣ ತುರುಮರಿ ಆಗಮಿಸಿ, ಫಲಾನುಭವಿಗಳ ಸಮಸ್ಯೆ ಮತ್ತು ಬೇಡಿಕೆ ಕುರಿತು ಚರ್ಚೆ ನಡೆಸಬೇಕು. ಅನೇಕ ವರ್ಷಗಳಿಂದ ಗುಡಿಸಲಲ್ಲಿಯೇ ವಾಸಮಾಡುತ್ತಿರುವ ಅರ್ಹ ಫಲಾನುಭವಿಗಳಿಗೆ ಮನೆ ನೀಡುವ ಭರವಸೆಯನ್ನು ಲಿಖಿತವಾಗಿ ನೀಡುವವರೆಗೂ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಹನಮಪ್ಪ ಮಜ್ಜಿಗುಡ್ಡ, ರಾಜಶ್ರೀ ಬಡಿಗೇರ, ರುದ್ರವ್ವ ಗಡದವರ, ಶಂಕ್ರಮ್ಮ ನರೇಗಲ್, ಸರೋಜವ್ವ ಶೇಖಸನದಿ ಈರವ್ವ ಹಡಪದ ಪಟ್ಟುಹಿಡಿದರು.
ಸ್ಥಳಕ್ಕೆ ಆಗಮಿಸಿದ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವೈ.ಎಲ್. ಹಂಪಣ್ಣ ಮಾತನಾಡಿ, ಸಮಯಕ್ಕೆ ಸರಿಯಾಗಿ ಗ್ರಾಮ ಸಭೆನಡೆಸಿ ಯೋಗ್ಯ, ಅರ್ಹ ಫಲಾನುಭವಿಗಳನ್ನು ಗ್ರಾಮ ಸಭೆಯಲ್ಲಿ ಆಯ್ಕೆ ಮಾಡಿ ಯಾದಿ ನೀಡದೇ ಇರುವುದರಿಂದ ಕಳೆದ ಸಾಲಿನಲ್ಲಿ ಯಳವತ್ತಿ ಗ್ರಾಪಂಗೆ ಮಂಜೂರಾದ 136 ಬಸವಾ ವಸತಿ ಮನೆಗಳು ಸೇರಿ ಹೆಚ್ಚುವರಿಯಾದ ಒಟ್ಟು 3 ಸಾವಿರ ಮನೆಗಳ ಅನುಮೋದನೆ ಮಾಡದೇ ಸರ್ಕಾರದ ಮಟ್ಟದಲ್ಲಿ ರದ್ದಾಗಿವೆ. ಇದರಲ್ಲಿ ಅಧಿಕಾರಿಗಳ ಪಾತ್ರವೇನೂ ಇಲ್ಲ ಎಂದರು.
ಈ ಸಾಲಿನಲ್ಲಿ ಯಳವತ್ತಿ ಗ್ರಾಪಂಗೆ ಮಂಜೂರಾದ 42 ಮನೆಗಳ ಹಂಚಿಕೆಗೆ ಗ್ರಾಮಸ್ಥರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅನುಮೋದನೆ ನೀಡಿಲ್ಲ. ಕಳಪೆ ಕಾಮಗಾರಿ, ಹಣದ ಅವ್ಯವಹಾರ, ಸದಸ್ಯರ ಸದಸ್ಯತ್ವ ರದ್ದತಿ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಹೇಳಿದರು. ಜತೆಗೆ ಬರುವ ಜನವರಿ 10 ರಂದು ಮಾಡಳ್ಳಿ ಗ್ರಾಮದಲ್ಲಿಯೇ ಗ್ರಾಮಸಭೆ ನಡೆಸಿ, ಎಲ್ಲವನ್ನೂ ಕೂಲಂಕಷವಾಗಿ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿ ಗ್ರಾಮಸ್ಥರು ನೀಡಿದ ಮನವಿ ಸ್ವೀಕರಿಸಿ ಲಿಖಿತವಾಗಿ ಭರವಸೆ ನೀಡಿದ್ದರಿಂದ ಪ್ರತಿಭಟನೆ ಹಿಂದಕ್ಕೆ ಪಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement