ಬಿಜೆಪಿಯಲ್ಲಿ ಗರಿಗೆದರಿದ ಚಟುವಟಿಕೆ
ಕನ್ನಡಪ್ರಭ ವಾರ್ತೆ, ಗದಗ, ಡಿ. 27
ಬಿಜೆಪಿ ವಿರುದ್ಧ ಬಂಡೆದ್ದು ಕೆಜೆಪಿ ಸ್ಥಾಪನೆ ಮಾಡಿ, ರಾಜ್ಯದಲ್ಲಿ ಬಿಜೆಪಿ ಸೋಲಿಗೆ ಪರೋಕ್ಷ ಕಾರಣರಾಗಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಮತ್ತೆ ಬಿಜೆಪಿಗೆ ಕರೆತರುವ ಪ್ರಯತ್ನಗಳು ಅಂತಿಮ ಹಂತ ತಲುಪುತ್ತಿದ್ದಂತೆ ಜಿಲ್ಲಾ ಬಿಜೆಪಿಯಲ್ಲಿಯೂ ರಾಜಕೀಯ ಚಟುವಟಿಕೆ ಗರಿಗೆದರಿವೆ.
ಅದರಲ್ಲಿಯೂ ಬಿಎಸ್‌ವೈ ಹಿಂದೆಯೇ ಹಿಂದುಳಿದ ವರ್ಗದ ನಾಯಕ ಎಂದು ಗುರುತಿಸಿಕೊಂಡಿರುವ ಶ್ರೀರಾಮುಲು ಮತ್ತೆ ಬಿಜೆಪಿಗೆ ಬರುತ್ತಾರೆ ಎನ್ನುವ ಸುದ್ದಿಯಂತೂ ಜಿಲ್ಲೆಯ ಮಟ್ಟಿಗೆ ದೊಡ್ಡ ಚರ್ಚೆಯ ವಸ್ತುವಾಗಿದೆ.
ಡಿ. 27ರಂದು ಬಿಜೆಪಿ ರಾಜ್ಯ ಕಾರ್ಯಕಾರಣಿ ಸಭೆ ನಡೆಯುತ್ತಿದ್ದಂತೆ ಬಿಎಸ್‌ವೈ ಮರಳಿ ಬಿಜೆಪಿಗೆ ಬರುವುದು ಖಚಿತವಾಗಿದ್ದು, ಈ ಹಿನ್ನೆಲೆಯಲ್ಲಿ ಬಿರುಸಿನ ರಾಜಕೀಯ ಚಟುವಟಿಕೆ ಶುರುವಾಗಿದೆ. ಕೆಲ ಕೆಜೆಪಿ ಮುಖಂಡರು ಬೆಂಗಳೂರಿಗೆ ತೆರಳಿ ಅಲ್ಲಿನ ಸಭೆಯಲ್ಲಿ ಪಾಲ್ಗೊಂಡಿದ್ದರೆ, ಇನ್ನುಳಿದವರು ಗದಗ ನಗರದಲ್ಲಿಯೇ ಸಭೆ ನಡೆಸಿ, ಮರು ಸೇರ್ಪಡೆಯ ನಂತರ ಗದಗನಲ್ಲಿ ಬೃಹತ್ ಸಮಾವೇಶ ನಡೆಸುವ ನಿಟ್ಟಿನಲ್ಲಿಯೂ ಗಂಭೀರ ಚಿಂತನೆ ನಡೆಸಿದ್ದು, ಪಕ್ಷವನ್ನು ಬೇರು ಮಟ್ಟದಲ್ಲಿ ಮತ್ತಷ್ಟು ಗಟ್ಟಿಗೊಳಿಸುವ ಕಾರ್ಯಕ್ಕೆ ಮುಂದಾಗಲು ನಿರ್ಧರಿಸಿದ್ದಾರೆ.
ಅಭಿಮಾನಿಗಳು ಅಪಾರ: ಬಿಎಸ್‌ವೈ ಗದುಗಿಗೆ ಬೀಗರು, ಮೇಲಾಗಿ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ, ಗದಗ ಜಿಲ್ಲೆಯಲ್ಲಿಯೂ ಲಿಂಗಾಯತ ಸಮುದಾಯಗಳೇ ಹೆಚ್ಚಾಗಿರುವುದರಿಂದ ಸಹಜವಾಗಿ ಇಲ್ಲಿ ಉತ್ತಮ ಪ್ರಭಾವವನ್ನೇ ಹೊಂದಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಲಿಂಗಾಯತ ಮತಗಳ ವಿಭಜನೆ ಕಾಂಗ್ರೆಸ್‌ಗೆ ವರದಾನವಾಯಿತು ಎನ್ನುವುದು ಬಹಿರಂಗ ಸತ್ಯವಾಗಿದೆ. ಹಲವಾರು ಕಾರ್ಯಕರ್ತರು ಬಿಎಸ್‌ವೈ ಬಿಜೆಪಿಯಿಂದ ಬಿಟ್ಟು ಹೋದರೂ ಅವರೆಲ್ಲ ಬಿಜೆಪಿಯಲ್ಲಿಯೇ ಉಳಿದಿದ್ದರು. ಆದರೆ, ಪಕ್ಷ ಸಂಘಟನೆ, ಚುನಾವಣೆಯಂತಹ ಸಂದರ್ಭದಲ್ಲಿ ಮಾತ್ರ ಸಕ್ರಿಯವಾಗಿ ಕೆಲಸ ಮಾಡುತ್ತಿರಲಿಲ್ಲ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಅವರ ದೇಹಗಳು ಮಾತ್ರ ಬಿಜೆಪಿಯಲ್ಲಿದ್ದರೂ ಅವರು ಮಾತ್ರ ಬಿಎಸ್‌ವೈ ಜಪ ಮಾಡುತ್ತಿದ್ದರು.
ಕೆಜೆಪಿ ಸಮಾವೇಶದಲ್ಲಿ ಭಾಗಿ: ಕಳೆದ ವರ್ಷ ಡಿ. 9ರಂದು ಹಾವೇರಿಯಲ್ಲಿ ಕೆಜೆಪಿ ನಡೆಸಿದ ಸಮಾವೇಶದಲ್ಲಿ 3 ಬಿಜೆಪಿ ಮಾಜಿ ಶಾಸಕರು ಪಾಲ್ಗೊಂಡು, ಕೆಜೆಪಿಯಿಂದಲೇ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಸೂಚನೆ ನೀಡಿದ್ದರು. ಆದರೆ, ಕೊನೆ ಕ್ಷಣದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಹಾಗಾಗಿ ಬಿಎಸ್‌ವೈ ಮರಳಿ ಬಿಜೆಪಿಗೆ ಬಂದಲ್ಲಿ ಮತ್ತಷ್ಟು ರಾಜಕೀಯ ಚಟುವಟಿಕೆ ಸಹಜವಾಗಿಯೇ ಬಿರುಸು ಪಡೆದುಕೊಳ್ಳಲಿವೆ. ಇನ್ನು ಕೆಜೆಪಿ ಅಭ್ಯರ್ಥಿಗಳಾಗಿ ಕಣಕ್ಕಿಳಿದು ಸೋಲನುಭವಿಸಿದವರೆಲ್ಲರೂ ಬಿಜೆಪಿಯಲ್ಲಿ ಪ್ರಭಾವವನ್ನು ಹೊಂದಿದವರೇ ಆಗಿದ್ದು, ಬಿಎಸ್‌ವೈ ಮರು ಆಗಮನದ ಮೂಲಕ ಬಿಜೆಪಿ ಮತ್ತಷ್ಟು ಗಟ್ಟಿಗೊಳ್ಳಲಿದೆ.
ಬೃಹತ್ ಸಮಾವೇಶಕ್ಕೆ ಚಿಂತನೆ
ಒಡೆದು 3 ತುಂಡಾಗಿರುವ ರಾಜ್ಯ ಬಿಜೆಪಿ ಮೂಲಗಳ ಪ್ರಕಾರ ರಾಜ್ಯಕ್ಕೆ ನರೇಂದ್ರ ಮೋದಿ ಬಂದು ಹೋದ ನಂತರ ಜನವರಿ ಕೊನೆಯ ವಾರದಲ್ಲಿ ಗದಗ ನಗರದಲ್ಲಿಯೇ ಬೃಹತ್ ಸಮಾವೇಶವನ್ನು ಏರ್ಪಡಿಸುವುದು. ಈ ಸಮಾವೇಶದಲ್ಲಿ ಬಿಎಸ್‌ವೈ, ಶ್ರೀರಾಮುಲು ಉಪಸ್ಥಿತರಿದ್ದು, ಜಿಲ್ಲಾ ಬಿಜೆಪಿ ಕಾರ್ಯಕರ್ತರಿಗೆ ದೊಡ್ಡ ಮಟ್ಟದ ಹುಮ್ಮಸ್ಸು ತುಂಬುವುದು. ಹಿಂದಿನ ಎಲ್ಲ ಕಹಿ ಘಟನೆಗಳನ್ನು ಮರೆತು, ಹೊಸ ದಿಕ್ಕಿನತ್ತ ಪಕ್ಷವನ್ನು ಸಾಗಿಸಲು ಚಿಂತನೆ ಮಾಡುವುದು. ಆ ಮೂಲಕ ನಾವೆಲ್ಲಾ ಲೋಕಸಭಾ ಚುನಾವಣೆಯಲ್ಲಿ ಒಂದಾಗಿ ಬರುತ್ತೇವೆ ಎನ್ನುವ ಸಂದೇಶ ಹಾಗೂ ಅವರನ್ನು ಟೀಕಿಸಿದ್ದ ವಿರೋಧ ಪಕ್ಷಗಳಿಗೆ ಒಗ್ಗಟ್ಟಿನ ಬಲ ತೋರಿಸುವ ಉದ್ಧೇಶ ಹೊಂದಿದ್ದಾರೆ ಎನ್ನಲಾಗಿದೆ.
ಶ್ರೀರಾಮುಲು ಅಭಿಮಾನಿಗಳಲ್ಲೂ ಉತ್ಸಾಹ
2008ರ ಚುನಾವಣೆಯಲ್ಲಿ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಶ್ರೀರಾಮುಲು ಹಾಗೂ ಬಿಎಸ್‌ವೈ ಪ್ರಭಾವ ಜೋರಾಗಿತ್ತು. 5 ವರ್ಷಗಳಿಂದ ಗದಗ ನಗರದಲ್ಲಿ ಸಾಮೂಹಿಕ ವಿವಾಹಗಳನ್ನು ನಡೆಸಿಕೊಂಡು ಬಂದು, ಜಿಲ್ಲೆಯ ಬಡವರ ಪಾಲಿಗೆ ಬಿ. ಶ್ರೀರಾಮುಲು ಆಶಾಕಿರಣವಾಗಿ ಜನಮನ ಗೆದ್ದಿದ್ದಾರೆ. ಆದರೆ, ಕಾರಣಾಂತರಗಳಿಂದ ಅವರು ಬಿಎಸ್‌ಆರ್ ಸ್ಥಾಪಿಸಿದ ನಂತರ ಜಿಲ್ಲೆಯ ಕೆಲ ಪ್ರಮುಖ ನಾಯಕರು ಬಿಜೆಪಿಯಲ್ಲಿಯೇ ಉಳಿದಿದ್ದರು. ಆದರೆ ಶ್ರೀರಾಮುಲು ಅವರೂ ಮತ್ತೆ ಬಿಜೆಪಿಗೆ ಬರುತ್ತಿರುವ ಸುದ್ದಿ ಹರಿದಾಡುತ್ತಿದ್ದಂತೆ ಅವರ ಅಭಿಮಾನಿಗಳಲ್ಲಿ ಸಾಕಷ್ಟು ಉತ್ಸಾಹಕ್ಕೆ ಕಾರಣವಾಗಿದೆ.
-ಶಿವಕುಮಾರ ಕುಷ್ಟಗಿ