ವಾಹನ ಪಲ್ಟಿ: ಓರ್ವ ಸಾವು
ಗದಗ: ಜಿಲ್ಲೆಯ ರೋಣ ತಾಲೂಕಿನ ಅಬ್ಬಿಗೇರಿ ಹಾಗೂ ಕೋಟುಮಚಗಿ ಗ್ರಾಮದ ಮಧ್ಯೆ ಶುಕ್ರವಾರ ಸಂಜೆ ವಾಹನವೊಂದು ಪಲ್ಟಿಯಾದ ಪರಿಣಾಮ ವ್ಯಕ್ತಿಯೋರ್ವ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ. ಮೃತನನ್ನು ಮುಂಡರಗಿ ತಾಲೂಕಿನ ಹಿರೇವಡ್ಡಟ್ಟಿ ಗ್ರಾಮದ ಹೆಗ್ಗಪ್ಪ ಏಣಗಿ (45) ಎಂದು ಗುರುತಿಸಲಾಗಿದೆ. ವಾಹನದಲ್ಲಿದ್ದವರು ಹಿರೇವಡ್ಡಟ್ಟಿ ಗ್ರಾಮದಿಂದ ರೋಣ ತಾಲೂಕಿನ ಮಾಡಲಗೇರಿ ಗ್ರಾಮಕ್ಕೆ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ತೆರಳುತ್ತಿದ್ದರು ಎನ್ನಲಾಗಿದ್ದು. ಈ ಘಟನೆಯಲ್ಲಿ 10ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು ಅವರೆಲ್ಲ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೈಕ್ ಕದ್ದು ಪೊಲೀಸ್ ನಾಪತ್ತೆ!
ರಾಣಿಬೆನ್ನೂರು: ನಗರ ಠಾಣೆಯ ಹಿಂಬದಿಯಲ್ಲಿ ನಿಲ್ಲಿಸಿದ್ದ ತನ್ನ ಇಲಾಖೆ ಸಿಬ್ಬಂದಿಯ ಬೈಕ್ ಕದ್ದ ಪೊಲೀಸ್ ಕಾನ್ಸ್ಟೇಬಲ್ ಒಬ್ಬ, ಈತ ತಾನೂ ಆರೋಪಿ ಎಂದು ಗೊತ್ತಾದ ಮೇಲೆ ತಲೆ ಮರೆಸಿಕೊಂಡಿರುವ ಪ್ರಕರಣ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ನಗರ ಠಾಣೆಯ ಜೀಪ್ ಚಾಲಕ ಮಂಜುನಾಥ ಕೆಂಗೋಂಡ 2011ರ ನವೆಂಬರ್ನಲ್ಲಿ ಠಾಣೆಯ ಹಿಂದೆ ಕೆಎ 27, ಎನ್ 4502 ಸಂಖ್ಯೆಯ ಹೀರೋ ಹೊಂಡಾ ಬೈಕ್ ನಿಲ್ಲಿಸಿದ್ದರು. ಕರ್ತವ್ಯ ಮುಗಿಸಿ ಬಂದು ನೋಡಿದಾಗ ಬೈಕ್ ನಾಪತ್ತೆಯಾಗಿತ್ತು. ಈ ಕುರಿತು ಅವರು ದೂರು ನೀಡಿದ್ದರು.
ಪಿಎಸ್ಐ ಸುರೇಶ ಯಳ್ಳೂರ ಪ್ರಕರಣ ದಾಖಲಿಸಿಕೊಂಡು, ಅನುಮಾನ ಬಂದ ಕೆಲವರನ್ನು ಕರೆದು ವಿಚಾರಿಸಿದ್ದರು. ಸುಳಿವಿನ ಆಧಾರದಲ್ಲಿ ತಮ್ಮದೇ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿರುವ, ಅಂತರವಳ್ಳಿ ರಸ್ತೆ ನಿವಾಸಿ ನಿಂಗಪ್ಪ ಹರಪನಹಳ್ಳಿ ಎಂಬವರ ಅಳಿಯ, ಎಎಂ ಬೈಕ್ ಪಾಯಿಂಟ್ ಗ್ಯಾರೇಜಿನ ಮಾಲೀಕ ಅಶೋಕ ಚಲವಾದಿ ಎಂಬಾತನನ್ನು ಕಳೆದ ಡಿ. 25ರಂದು ಠಾಣೆಗೆ ಕರೆಸಿ, ವಿಚಾರಣೆ ನಡೆಸಿದರು. ಆಗ ತನ್ನ ಮಾವ ನಿಂಗಪ್ಪ ಹರಪನಹಳ್ಳಿ ಜತೆ ಶಾಮೀಲಾಗಿ ನಗರ ಠಾಣೆಯ ಹಿಂದೆ ನಿಲ್ಲಿಸಿದ್ದ ಬೈಕ್ ಕದ್ದಿರುವುದಾಗಿ ಒಪ್ಪಿಕೊಂಡ. ಈ ಹಿನ್ನೆಲೆಯಲ್ಲಿ ಅಶೋಕ್ ಚಲವಾದಿಯನ್ನು ಬಂಧಿಸಲಾಗಿದೆ. ತಾನೂ ಸೆರೆಯಾಗುವ ಭೀತಿಯಿಂದ ನಿಂಗಪ್ಪ ಹರಪನಹಳ್ಳಿ ಡಿ. 25ರಿಂದ ಕರ್ತವ್ಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದಾನೆ ಎಂದು ಪಿಎಸ್ಐ ಸುರೇಶ ಯಳ್ಳೂರು ತಿಳಿಸಿದ್ದಾರೆ.