ಸದಾಶಿವ ಆಯೋಗ ವರದಿ ಜಾರಿಗೊಳಿಸಿ
ಕನ್ನಡಪ್ರಭ ವಾರ್ತೆ, ಗದಗ, ಡಿ. 27
ಸದಾಶಿವ ಆಯೋಗ ವರದಿ ಯಥಾವತ್ತಾಗಿ ಜಾರಿಗೆ ತರುವಂತೆ ಆಗ್ರಹಿಸಿ ದಲಿತ ಸಂಘಟನಾ ಸಮಿತಿ ವತಿಯಿಂದ ಈಚೆಗೆ ಗದಗಕ್ಕೆ ಆಗಮಿಸಿದ್ದ ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಅವರಿಗೆ ಮನವಿ ಸಲ್ಲಿಸಲಾಯಿತು.
ಶತಮಾನಗಳಿಂದಲೂ ಶೋಷಣೆಗೆ ಒಳಗಾದ ಅಸ್ಪ್ರಶ್ಯ ಜನಾಂಗಗಳಿಗೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದತ್ತವಾಗಿ ಶೇ. 15 ಮೀಸಲಾತಿ ಕಲ್ಪಿಸಿ ಆ ಜನಾಂಗದ ಬದುಕಿನ ಬದಲಾವಣೆಗೆ ಸಮಾನ ಮನಸ್ಕರೊಂದಿಗೆ ಪ್ರಯತ್ನಿಸಿದರು.
ಕರ್ನಾಟಕದಲ್ಲಿ ಅಸ್ಪ್ರಶ್ಯ ಜಾತಿಗಳಾದ ಹೊಲೆಯ, ಮಾದಿಗ, ಮಹರ, ಮಾಂಗ, ಮಾಲ, ಮಾದಿಗ ಪರಯ-ಚಕ್ಲಿಯನ ಚಮ್ಮಾರ ಸಮಗಾರ, ಮೋಚಿ, ಮಚಗಾರ, ದೋಬಿ, ಡೋರ, ಡಕ್ಕಲಿಗ, ಮಾಸ್ತಿಕ ಇತ್ಯಾದಿ ಜಾತಿ ಬಂಧುಗಳಿಗೆ ಇರುವ ಶೇ. 15 ಮೀಸಲಾತಿ ಸಂವಿಧಾನದ ಆಶಯದಂತೆ ನ್ಯಾಯ ಸಮ್ಮತವಾಗಿ ತಲುಪದೆ ಇರುವುದಾಗಿ ನ್ಯಾ. ಎ.ಜೆ. ಸದಾಶಿವ ಆಯೋಗದ ವರದಿಯಲ್ಲಿ ಸ್ಪಷ್ಟವಾಗಿ ಹೊರಬಂದಿದ್ದು, ಅಲ್ಲದೇ ಜಾತಿವಾರು ಮೀಸಲಾತಿ ಪ್ರಮಾಣ ನೀಡಲು ಕೂಡ ಶಿಫಾರಸು ಮಾಡಿರುವುದನ್ನು ಯಥಾವತ್ತಾಗಿ ಜಾರಿಗೊಳಿಸಲು ಸೇರಿದಂತೆ ಜಿಲ್ಲೆಯಾದ್ಯಂತ ಇರುವ ಎಲ್ಲ ಗ್ರಾಮಗಳಲ್ಲಿಯ ದಲಿತರಿಗೆ ಸ್ಮಶಾನ ಭೂಮಿ ಮಂಜೂರು ಮಾಡುವುದು, ಗದಗ ಜಿಲ್ಲೆಯ ಚಿಕ್ಕವಡ್ಡಟ್ಟಿ ಹಾಗೂ ಸೊರಟೂರು ಗ್ರಾಮದ ದಲಿತರ ಮೇಲೆ ನಡೆದ ದೌರ್ಜನ್ಯದಲ್ಲಿ ನೊಂದ ಕುಟುಂಬಗಳಿಗೆ ರಕ್ಷಣೆ ಹಾಗೂ ಪರಿಹಾರ ನೀಡುವುದು. ದಲಿತ ಕೇರಿಗಳಲ್ಲಿ ಕಂಪ್ಯೂಟರ್ ಶಿಕ್ಷಣ ಕೇಂದ್ರ ಪ್ರಾರಂಭಿಸುವುದು. ವಸತಿ ನಿಲಯದಲ್ಲಿನ ವಿದ್ಯಾರ್ಥಿಗಳಿಗೆ ಮೂಲ ಸೌಕರ್ಯ ಕಲ್ಪಿಸುವುದು ಸೇರಿದಂತೆ ಮುಂತಾದ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ, ಸಮಿತಿಯ ಸಂಚಾಲಕ ವಿನಾಯಕ ಬಳ್ಳಾರಿ, ಸತೀಶ ಹೂಲಿ, ಪರಶುರಾಮ ಪೂಜಾರ, ಮಾರುತಿ ಗುಡಿಮನಿ, ಯುವರಾಜ ಬಳ್ಳಾರಿ, ರವಿ ಹಾದಿಮನಿ, ಮಂಜು ಪೂಜಾರ, ಕೆ.ಬಿ. ತಳಗೇರಿ, ಎಸ್.ಎನ್. ಬಳ್ಳಾರಿ, ನಾಗರಾಜ ಪೋತರಾಜ, ಸಂತೋಷ ಬಳ್ಳಾರಿ, ಫಕೀರೇಶ ಮ್ಯಾಟಣ್ಣವರ, ಕೊಟ್ರಪ್ಪ ವರ್ದಿ, ಚಂದ್ರು ಮೇಲಿನಮನಿ ಮುಂತಾದವರು ಉಪಸ್ಥಿತರಿದ್ದರು.
ದಲಿತರಿಗೆ ಸ್ಮಶಾನ ಭೂಮಿ ಮಂಜೂರು ಮಾಡುವುದು, ಗದಗ ಜಿಲ್ಲೆಯ ಚಿಕ್ಕವಡ್ಡಟ್ಟಿ ಹಾಗೂ ಸೊರಟೂರು ಗ್ರಾಮದ ದಲಿತರ ಮೇಲೆ ನಡೆದ ದೌರ್ಜನ್ಯದಲ್ಲಿ ನೊಂದ ಕುಟುಂಬಗಳಿಗೆ ರಕ್ಷಣೆ ಹಾಗೂ ಪರಿಹಾರ ನೀಡುವುದು ಸೇರಿದಂತೆ ಮುಂತಾದ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮನವಿ ಸಲ್ಲಿಸಿದರು.