ಕೊಳಚೆ ಪ್ರದೇಶಗಳಿಗೆ ಸೌಕರ್ಯ ನೀಡಿ
ಗದಗ: ನಗರದ ಕೊಳಚೆ ಪ್ರದೇಶಗಳಲ್ಲಿ ಮೂಲ ಸೌಕರ್ಯಗಳಿಗೆ ಆಗ್ರಹಿಸಿ ಶನಿವಾರ ಡಾ. ಬಿ.ಆರ್. ಅಂಬೇಡ್ಕರ್ ಕೊಳಚೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪ್ರತಿಭಟನಾ ಮೆರವಣಿಗೆ ಜರುಗಿತು.
ಬಡ, ದಲಿತ, ಹಿಂದುಳಿದ ಜನತೆ ಹಲವಾರು ದಶಕಗಳಿಂದ ಅನಾರೋಗ್ಯಕರ ವಾತಾವರಣದಲ್ಲಿ ಕೊಳಚೆ ಪ್ರದೇಶಗಳಲ್ಲಿ ವಾಸವಾಗಿದ್ದು, ಇಲ್ಲಿನ ನಿವಾಸಿಗಳ ಬದುಕಿನಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಕೊಳಚೆ ನಿರ್ಮೂಲನಾ ಮಂಡಳಿ ಸ್ಥಾಪಿಸಿ ಪುನರ್ ವಸತಿಗಾಗಿ ಹಲವಾರು ಕಾರ್ಯಗಳನ್ನು ರೂಪಿಸಿದ್ದರೂ ಅವು ಜನಸಂಖ್ಯೆಗೆ ಅನುಗುಣವಾಗಿ ಕಾರ್ಯರೂಪಕ್ಕೆ ಬರದ ಹಿನ್ನೆಲೆಯಲ್ಲಿ ಹಲವಾರು ಸಮುದಾಯಗಳು ಅತ್ಯಂತ ಕಷ್ಟಕರ ಮತ್ತು ಮೂಲಭೂತ ಸೌಕರ್ಯಗಳ ಕೊರತೆಯ ಮಧ್ಯದಲ್ಲಿಯೇ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿವೆ. ಪ್ರಾರಂಭದಲ್ಲಿ ಗದಗ-ಬೆಟಗೇರಿ ಅವಳಿ ನಗರದಲ್ಲಿ ಕೇವಲ 9 ಪ್ರದೇಶಗಳಿದ್ದು, ಈಗ ನಗರ ಬೆಳವಣಿಗೆಯಿಂದಾಗಿ ಸುಮಾರು 60ಕ್ಕೂ ಹೆಚ್ಚು ಕೊಳಚೆ ಪ್ರದೇಶಗಳು ನಿರ್ಮಾಣವಾಗಿವೆ.
ನೂತನವಾಗಿ ನಿರ್ಮಾಣಗೊಂಡ ಕೊಳಚೆ ಪ್ರದೇಶದಲ್ಲಿ ಮೂಲ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ನಗರಸಭೆ ಆಡಳಿತ ಸ್ಥಳೀಯ ಟ್ಯಾಗೋರ್ ರಸ್ತೆಯ ಕೊಳಚೆ ನಿವಾಸಿಗಳಿಗೆ ಸಂಭಾಪುರ ರಸ್ತೆಯಲ್ಲಿ ನಿರ್ಮಿಸಿ ಕೊಟ್ಟಿರುವ ಕಾಲೋನಿಯಲ್ಲಿ ವಿದ್ಯುತ್, ನೀರು ಮತ್ತು ಚರಂಡಿ ವ್ಯವಸ್ಥೆ ಕಲ್ಪಿಸಬೇಕಿದೆ. ಹುಬ್ಬಳ್ಳಿ ರಸ್ತೆಯ ಸಿಕ್ಕಲಗಾರ ಕಾಲೋನಿಯಲ್ಲಿ ವಾಸಿಸುತ್ತಿರುವ ಜನತೆ ಮನೆಗಳ ಕೊರತೆ ಅನುಭವಿಸುತ್ತಿದ್ದು, ಮತ್ತಷ್ಟು ಮನೆಗಳನ್ನು ನಿರ್ಮಿಸುವ ಕಾರ್ಯ ನಗರದಲ್ಲಿ ಜರುಗಬೇಕಿದೆ.
ಇದುವರೆಗೂ ಕೊಳಚೆ ನಿವಾಸಿಗಳಿಗೆ ವಿತರಿಸಲಾದ ಮನೆಗಳಿಗೆ ಜಿಲ್ಲಾಡಳಿತದಿಂದ ಹಕ್ಕುಪತ್ರಗಳು ವಿತರಣೆಯಾಗಿಲ್ಲ. ತಕ್ಷಣ ಹಕ್ಕುಪತ್ರ ವಿತರಿಸುವ ಕಾರ್ಯಕ್ಕೆ ಜಿಲ್ಲಾಡಳಿತ ಪ್ರಾಮುಖ್ಯತೆ ನೀಡಲಿ ಎಂದು ಆಗ್ರಹಿಸಿ, ನಗರಸಭೆಯ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಯಿತು. ಬೆಳಗ್ಗೆ ನಗರದ ಹುಬ್ಬಳ್ಳಿ ರಸ್ತೆಯ ಕಿತ್ತೂರು ಚನ್ನಮ್ಮ ವೃತ್ತದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಶಿವಾಜಿ ಪವಾರ, ಧರ್ಮಣ್ಣ ಹೊಸಮನಿ, ವಿನಾಯಕ ಬಳ್ಳಾರಿ, ಪರಶುರಾಮ ಪೂಜಾರ, ಲಕ್ಷ್ಮಣ ಕಟ್ಟಿಮನಿ, ಯುವರಾಜ ಬಳ್ಳಾರಿ, ಸುರೇಶ ಸೊಳಂಕಿ, ಯಲ್ಲಪ್ಪ ನಾಯ್ಕರ, ರಾಜೇಶ ಸೊಳಂಕಿ ಸೇರಿದಂತೆ ನೂರಾರು ಕೊಳಚೆ ನಿವಾಸಿಗಳು ಪಾಲ್ಗೊಂಡಿದ್ದರು.