ನೆಮ್ಮದಿ ಕೇಂದ್ರಕ್ಕೆ ಲೋಕಾಯುಕ್ತರ ಭೇಟಿ: ಕಡತಗಳ ಪರಿಶೀಲನೆ
ಗಜೇಂದ್ರಗಡ: ಸ್ಥಳೀಯ ವಿಶೇಷ ತಹಸೀಲ್ದಾರ್ ಕಚೇರಿಯ ಆವರಣದಲ್ಲಿರುವ ನೆಮ್ಮದಿ ಕೇಂದ್ರಕ್ಕೆ ಲೋಕಾಯುಕ್ತ ಅಧಿಕಾರಿಗಳು ಶನಿವಾರ ಭೇಟಿ ನೀಡಿ ಕಡತಗಳ ಪರಿಶೀಲನೆ ನಡೆಸಿದರು.
ಮಧ್ಯಾಹ್ನ 12ಕ್ಕೆ ಭೇಟಿ ನೀಡಿ ಸತತ 6 ಗಂಟೆಗಳ ಕಾಲ ನೆಮ್ಮದಿ ಕೇಂದ್ರಗಳಲ್ಲಿನ ಕಡತಗಳನ್ನು ಪರಿಶೀಲಿಸಿದರು. ಬಳಿಕ ಜಿಲ್ಲಾ ಲೋಕಾಯುಕ್ತ ಡಿ.ಎಸ್.ಪಿ. ಕೆ.ಸಿ. ಅಸುಂಡಿ ಸುದ್ದಿಗಾರರೊಂದಿಗೆ ಮಾತನಾಡಿ, ನರೇಗಲ್ಲ ಹೋಬಳಿ ವ್ಯಾಪ್ತಿಗೆ ಸಂಬಂಧಿಸಿದ ವೃದ್ಧಾಪ್ಯ, ಅಂಗವಿಕಲ, ವಿಧವಾ, ಸಂಧ್ಯಾಸುರಕ್ಷಾ ವೇತನಗಳಿಗೆ ಸಂಬಂಧಿಸಿದ ಕಡತಗಳಲ್ಲಿ 2002 ರಿಂದ 2013 ರ ಜೂನ್‌ವರೆಗೆ ಸಾವಿರಾರು ಖೊಟ್ಟಿ ದಾಖಲೆ ಸೃಷ್ಟಿಸಿ, ಅಧಿಕಾರಿಗಳು ಸರ್ಕಾರದ ಅನುದಾನ ದುರ್ಬಳಕೆ ಮಾಡಿದ್ದಾರೆ ಎಂದು ಸಾರ್ವಜನಿಕರು ಲೋಕಾಯುಕ್ತ ಇಲಾಖೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಗಜೇಂದ್ರಗಡ ನೆಮ್ಮದಿ ಕೇಂದ್ರಕ್ಕೆ ಭೇಟಿ ನೀಡಿ ಕಡತಗಳ ಪರಿಶೀಲನೆ ಮಾಡಲಾಗಿದೆ. ಈ ಕುರಿತು ಕಡತಗಳ ಕೂಲಂಕಷ ಪರಿಶೀಲನೆ ಮಾಡಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದರು. ದಾಳಿಯಲ್ಲಿ ಲೋಕಾಯುಕ್ತ ಅಧಿಕಾರಿಗಳಾದ ವಿ.ಎಫ್. ಕುಂಬಾರ, ನಾರಾಯಣ ಚೂರಿ, ವೈ.ಡಿ. ಶತರಡ್ಡಿ, ನಾರಾಯಣ ತಾಯಮ್ಮನವರ ಪಾಲ್ಗೊಂಡಿದ್ದರು.