ಗದಗ-ಬೆಟಗೇರಿ ಸೌಲಭ್ಯಕ್ಕೆ ಆದ್ಯತೆ ಸಿಗಲಿ
ಗದಗ-ಬೆಟಗೇರಿ ಅವಳಿ ನಗರವು ಹಲವು ಮೂಲಭೂತ ಸೌಲಭ್ಯಗಳ ಕೊರತೆಯಿಂದ ಬಳಲುತ್ತಿದೆ. ಈ ಕುರಿತು ಜಿಲ್ಲಾಧಿಕಾರಿಗಳು, ಸಚಿವರು ಹೆಚ್ಚಿನ ಗಮನ ನೀಡುವುದು ಅವಶ್ಯಕವಾಗಿದೆ. ನಗರದ ಮುಖ್ಯ ಜನನಿಬಿಡ ಪ್ರದೇಶಗಳಾದ ಗದಗ ಮಾರುಕಟ್ಟೆ, ಸಂಗಮ ಬಜಾರ್, ಟಾಂಗಾಕೂಟ, ಗದಗ ಹೆಡ್ಪೋಸ್ಟ್ ಮುಂಭಾಗ ಸೇರಿದಂತೆ ಹಲವು ಕಡೆಗಳಲ್ಲಿ ಶುಚಿತ್ವದ ಕೊರತೆ ಎದ್ದು ಕಾಣುತ್ತಿದೆ. ಇದನ್ನು ಹೊರತು ಪಡಿಸಿದಲ್ಲಿ ಇನ್ನೂ ಹಲವು ಕಡೆಗಳಲ್ಲಿ ಕಸದ ತೊಟ್ಟಿಗಳು ತುಂಬಿ ರಸ್ತೆಯ ಬದಿಯಲ್ಲಿ ಬೀಳುತ್ತಿವೆ. ಎಲ್ಲೆಂದರಲ್ಲಿ ಬೀಸಾಕಿದ ಕಸದಿಂದಾಗಿ ಹಲವು ರೋಗಗಳು ಸಾರ್ವಜನಿಕರಿಗೆ ಬಂದೊದಗುವ ಪರಿಸ್ಥಿತಿ ಉದ್ಭವವಾಗಿದೆ. ಇನ್ನು ಬಿಡಾಡಿ ಹಂದಿ, ದನಗಳು ರಸ್ತೆಯ ಪಕ್ಕದಲ್ಲಿ ಎಸೆದಿರುವ ಕಸವನ್ನು ರಸ್ತೆಯ ತುಂಬೆಲ್ಲ ಹರಡುವಂತೆ ಮಾಡುತ್ತಿವೆ. ಕೆಲವು ದಿನಗಳ ಹಿಂದಿ ಜಿಲ್ಲಾಡಳಿತ ಗದಗ-ಬೆಟಗೇರಿ ಅವಳಿ ನಗರದ ಶುಚಿತ್ವಕ್ಕೆ ಹೊಸ ಕಾರ್ಯಕ್ರಮವನ್ನು ಹಮ್ಮಿಕೊಂಡಿತಾದರೂ ಅದು ಇಂದು ಯಶಸ್ವಿಯಾಗಿ ನಡೆಯುತ್ತಿಲ್ಲ. ಇನ್ನು ಚರಂಡಿ ಸ್ಥಿತಿಯಂತೂ ಹೇಳತೀರದಾಗಿದೆ. ಕೆಲವು ದಿನಗಳ ಹಿಂದೆ ಅವಳಿ ನಗರದಲ್ಲಿನ ಚರಂಡಿಗಳಲ್ಲಿನ ಹೂಳು ತೆಗೆಯಲು ನಗರಸಭೆ ಕ್ರಮ ಜರುಗಿಸಿತಾದರೂ ಈಗ ಮತ್ತೆ ಈ ಕಾರ್ಯಕ್ರಮ ಮಂದಗತಿಯಲ್ಲಿ ಜರುಗುತ್ತಿರುವುದು ಸಾರ್ವಜನಿಕರಿಗೆ ನೋವುಂಟು ಮಾಡಿದೆ. ಇನ್ನು ತುಂಗಭದ್ರಾ ನದಿಯಿಂದ ನಗರಕ್ಕೆ ಪೂರೈಕೆ ಮಾಡುವ ಮುಖ್ಯ ಪೈಪ್ಲೈನ್ ಅಲ್ಲಲ್ಲಿ ಒಡೆದು ಕುಡಿವ ನೀರು ಪೋಲಾಗುತ್ತಿದೆ. ಈಚೆಗೆ ಗದಗನ ಗಾಂಧಿ ವೃತ್ತದ ಬಳಿ ಒಡೆದ ಪೈಪ್ಲೈನ್ ದುರಸ್ತಿಗೊಳಿಸಲು ತಿಂಗಳೇ ಬೇಕಾಯಿತು. ಇನ್ನು ನಗರದ ಗಾಂಧಿನಗರ (ಸೆಟ್ಲಮೆಂಟ್ ಬಳಿಯಿರುವ ಮೇಲ್ಸೇತುವೆ ಬಳಿ ಪೈಪ್ಲೈನ್ ಒಡೆದು ಹಲವು ದಿನಗಳ ಬಳಿಕ ದುರಸ್ತಿಗೊಳಿಸಲಾಯಿತಾದರೂ ದುರಸ್ತಿಗೊಳಿಸಿದ ಕೆಲವೇ ಕ್ಷಣಗಳಲ್ಲಿ ಮತ್ತೇ ಪೈಪ್ ಒಡೆದು ನೀರು ಪೋಲಾಗಿ ರಸ್ತೆ ಮೇಲೆಯೇ ನೀರು ಹರಿದು ಸಾರ್ವಜನಿಕರಿಗೆ ಕಿರಿಕಿರಿಯನ್ನುಂಟು ಮಾಡಿತು. ಈ ಕುರಿತು ನಗರಸಭೆ ಹೆಚ್ಚಿನ ಕಾಳಜಿ ವಹಿಸಿ ಒಡೆದು ಹೋಗುತ್ತಿರುವ ಪೈಪ್ಲೈನ್ನ ದುರಸ್ತಿ ಕಾರ್ಯವನ್ನು ತೀವ್ರಗೊಳಿಸಲಿ. ಗದಗ-ಬೆಟಗೇರಿ ಅವಳಿ ನಗರವು ಸುಂದರವಾಗಿರಬೇಕು ಎಂಬುದು ನಮ್ಮೆಲ್ಲರ ಬಯಕೆಯಾಗಿದೆ. ಸರ್ಕಾರವು ನಗರ ಸೌಂದರೀಕರಣಕ್ಕೆ ಆದ್ಯತೆ ನೀಡಬೇಕು.
ನಾಗರತ್ನಾ ಪಾಟೀಲ, ಬೆಟಗೇರಿ ನಿವಾಸಿ.
ಲಕ್ಷ್ಮೇಶ್ವರ ಮುಖ್ಯ ಬಜಾರ್ ರಸ್ತೆ ದುರಸ್ತಿಗೊಳಿಸಿ
ಲಕ್ಷ್ಮೇಶ್ವರ ಪುರಸಭೆಯ ಆಡಳಿತ ಮಂಡಳಿಯು ಪಟ್ಟಣದ ಮುಖ್ಯ ಬಜಾರ್ ರಸ್ತೆಯನ್ನು ಮಾಡುವ ಸಲುವಾಗಿ ಖಡೀಕರಣ ಮಾಡಿ ಹಾಗೆ ಬಿಟ್ಟು ಬಿಟ್ಟಿದ್ದರಿಂದ ಜಲ್ಲಿ ಕಲ್ಲುಗಳು ಮೇಲೆದ್ದು ಸಾರ್ವಜನಿಕರು ಸಂಚಾರ ಮಾಡಲು ನಡೆದಾಡಲು ಹಾಗೂ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಪ್ರಯಾಣ ಮಾಡುವಂತಾಗಿದೆ. ರಸ್ತೆಯ ಮೇಲೆ ವಾಹನಗಳು ವೇಗವಾಗಿ ಸಂಚಾರ ಮಾಡಿದಲ್ಲಿ ಜಲ್ಲಿ ಕಲ್ಲುಗಳು ಪುಟಿದು ದಾರಿಯಲ್ಲಿ ನಡೆದಾಡುವ ಪ್ರಯಾಣಿಕರಿಗೆ ಸಿಡಿಯುವ ಅಪಾಯವಿದೆ. ಅಲ್ಲದೆ ಅದೆಷ್ಟೋ ವಾಹನ ಸವಾರರು ಬೈಕ್ ಮೇಲಿಂದ ಬಿದ್ದ ಉದಾಹರಣೆಗಳಿವೆ. ಅದಕ್ಕಾಗಿ ಖಡೀಕರಣವಾಗಿರುವ ರಸ್ತೆಯ ಮೇಲೆ ಶೀಘ್ರವಾಗಿ ಡಾಂಬರೀಕರಣ ಮಾಡಬೇಕು. ಅಲ್ಲದೇ ಈಗ ನಡೆಯುತ್ತಿರುವ ಕಾಮಗಾರಿಯು ಅಷ್ಟೊಂದು ಉತ್ತಮವಾಗಿಲ್ಲ. ಅದಕ್ಕಾಗಿ ಇನ್ನೂ ಉತ್ತಮ ಗುಣ ಮಟ್ಟದಲ್ಲಿ ಕಾಮಗಾರಿಯನ್ನು ಮಾಡಿದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. 3 ವರ್ಷಗಳ ಹಿಂದೆ ರಸ್ತೆ ಅಗಲೀಕರಣದ ಸಮಯದಲ್ಲಿ ಕಿತ್ತು ಹೋದ ಈ ಬಜಾರ್ ರಸ್ತೆಯ ಕಾಮಗಾರಿಯು ಒಂದು ತಿಂಗಳ ಹಿಂದೆ ಪ್ರಾರಂಭವಾಗಿದ್ದರೂ ಇನ್ನೂ ಮುಕ್ತಾಯ ಕಾಣದಿರುವುದು ಸೋಜಿಗವಾಗಿದೆ. ಬಜಾರ್ ರಸ್ತೆಯ ವ್ಯಾಪಾರಸ್ಥರಿಗೆ ಹಾಗೂ ಸಾರ್ವಜನಿಕರಿಗೆ ಧೂಳು ತುಂಬಿದ ರಸ್ತೆಯಿಂದ ಸಾಕಷ್ಟು ಕಿರಿಕಿರಿಯುಂಟಾಗಿದ್ದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಆದ್ದರಿಂದ ಶೀಘ್ರವಾಗಿ ಕಾಮಗಾರಿ ಮುಕ್ತಾಯಗೊಳಿಸಬೇಕು.
ಶಂಕರ ಬಾಳಿಕಾಯಿ, ಯುವ ಮುಖಂಡ, ಲಕ್ಷ್ಮೇಶ್ವರ