ಮಡಿವಾಳರ ಜಾಗೃತಿ ಸಮಾವೇಶಕ್ಕೆ 10 ಸಾವಿರ ಜನ: ಗುಡಿಮನಿ
ಹಾನಗಲ್ಲ: ಕರ್ನಾಟಕ ರಾಜ್ಯ ಮಡಿವಾಳರ ಸಂಘದಿಂದ ಬೆಂಗಳೂರಿನಲ್ಲಿ ಜ. 5ರಂದು ಏರ್ಪಡಿಸಲಾಗಿರುವ ರಾಜ್ಯ ಮಡಿವಾಳರ ಜಾಗೃತಿ ಸಮಾವೇಶದಲ್ಲಿ ಹಾನಗಲ್ಲ ತಾಲೂಕಿನಿಂದ 10 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಮಡಿವಾಳ ಸಮಾಜ ಬಾಂಧವರು ಭಾಗವಹಿಸಲಿದ್ದಾರೆ ಎಂದು ಸಂಘದ ತಾಲೂಕು ಅಧ್ಯಕ್ಷ ಪಿ.ವೈ. ಗುಡಗುಡಿ ಹೇಳಿದ್ದಾರೆ. ಹಾನಗಲ್ಲಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಡಿವಾಳರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಬೇಕೆಂಬ ಉದ್ದೇಶದಿಂದ ಬೆಂಗಳೂರು ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಜ. 5ರಂದು ಬೆಳಗ್ಗೆ ಸಮಾವೇಶ ನಡೆಯಲಿದೆ. ಪಾಲ್ಗೊಳ್ಳುವವರಿಗೆ ವಾಹನ ಮತ್ತು ಊಟದ ವ್ಯವಸ್ಥೆ ಮಾಡಲಾಗುತ್ತದೆ ಎಂದರು. ದೇಶದ 17 ರಾಜ್ಯಗಳಲ್ಲಿ ಮಡಿವಾಳರನ್ನು ಪರಿಶಿಷ್ಟ ಜಾತಿಗೆ ಸೇರಿಸಲಾಗಿದೆ. ನಮ್ಮಲ್ಲೂ ಪ್ರೊ ಅನ್ನಪೂರ್ಣಾ ವರದಿಯಂತೆ ಮಡಿವಾಳರನ್ನು ಪರಿಶಿಷ್ಟ ಜಾತಿಗೆ ಸೇರಿಸುವುದು, ಸಮುದಾಯದ ಕುಲಗುರು ಮಾಚಿದೇವರ ಜನ್ಮಸ್ಥಳ ಬಿಜಾಪುರ ಜಿಲ್ಲೆಯ ದೇವರಹಿಪ್ಪರಗಿಯನ್ನು ಅಭಿವೃದ್ಧಿಪಡಿಸಿ, ಅದರ ನಿರ್ವಹಣೆಗೆ ಮಾಚಿದೇವ ಪ್ರಾಧಿಕಾರ ರಚಿಸುವುದು, ಮಾಚಿದೇವ ಅಧ್ಯಯನ ಪೀಠ ಮತ್ತು ಮಾಚಿದೇವರ ಜನ್ಮದಿನವನ್ನು ಸರ್ಕಾರದ ವತಿಯಿಂದ ಆಚರಿಸುವುದು ಮುಂತಾದ ಬೇಡಿಕೆಗಳ ಮನವಿಯನ್ನು ಸಮಾವೇಶದಲ್ಲಿ ಭಾಗವಹಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಾಗುತ್ತದೆ ಎಂದರು. ಸಂಘದ ಉಪಾಧ್ಯಕ್ಷ ಗುತ್ತೆಪ್ಪ ಮಡಿವಾಳರ, ಕಾರ್ಯದರ್ಶಿ ಪರಸಪ್ಪ ಈರಪ್ಪ ಮಡಿವಾಳರ, ಮುಖಂಡರಾದ ಭರಮಣ್ಣ ಮಡಿವಾಳರ, ಸತೀಶ ಸಾಗರವಳ್ಳಿ, ಸುರೇಶ ಮಡಿವಾಳರ, ಮಹೇಶ ವಾಸನದ, ಶಶಿಧರ ಶಕುನವಳ್ಳಿ, ಬಂಗಾರಪ್ಪ ಹೋತನಹಳ್ಳಿ, ಶಿವಪುತ್ರಪ್ಪ ಶಕುನವಳ್ಳಿ ಇದ್ದರು.
ಶೈಕ್ಷಣಿಕ ಅಭಿವೃದ್ಧಿಗಾಗಿ ಜನಪರ ಯೋಜನೆ
ಮುಂಡರಗಿ: ರಾಜ್ಯ ಸರ್ಕಾರ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗಾಗಿ ಹತ್ತು ಹಲವಾರು ಜನಪರ ಯೋಜನೆಗಳನ್ನು ರೂಪಿಸುವ ಮೂಲಕ ಎಲ್ಲರ ಮೆಚ್ಚುಗೆ ಪಡೆದಿದೆ ಎಂದು ಮೇವುಂಡಿ ಗ್ರಾಪಂ ಅಧ್ಯಕ್ಷ ಚನ್ನಪ್ಪ ಕವಲೂರ ಹೇಳಿದರು. ಅವರು ಈಚೆಗೆ ತಾಲೂಕಿನ ಮೇವುಂಡಿ ಗ್ರಾಮದ ಶಾಂತಾಬಾಯಿ ಮಲ್ಲಪ್ಪ ಕೊರ್ಲಹಳ್ಳಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಉಚಿತ ಸೈಕಲ್ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಗ್ರಾಪಂ ಉಪಾಧ್ಯಕ್ಷ ಮಹೇಶ ಹೊಳೆಯಾಚೆ ಮಾತಾನಾಡಿ, ಇಂದು ಗ್ರಾಮೀಣ ಪ್ರದೇಶಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರೌಢಶಾಲೆಗಳನ್ನು ಸ್ಥಾಪಿಸಿದ್ದರಿಂದ ಗ್ರಾಮೀಣ ಬಡವರ, ಹಿಂದುಳಿದವರ, ದಲಿತರ, ಕಾರ್ಮಿಕರ ಮಕ್ಕಳು ಪ್ರೌಢ ಶಿಕ್ಷಣ ಪಡೆಯಲು ಪೂರಕವಾಗಿದೆ. ಪಾಲಕರು ತಮ್ಮ ಮಕ್ಕಳ ಕುರಿತು ಕಾಳಜಿ ವಹಿಸಿ ಶಾಲೆಗೆ ಹಾಜರಾಗುವಂತೆ ಮುಂಜಾಗ್ರತೆ ವಹಿಸಬೇಕು ಎಂದರು. ಮುಖ್ಯೋಪಾಧ್ಯಯ ಶರಣು ಗೋಗೇರಿ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿ, ಇಂದು ಶಾಲೆಗಳು ಸಕಲ ಮೂಲಭೂತ ಸೌಲಭ್ಯಗಳನ್ನು ಹೊಂದಿ ಗುಣಾತ್ಮಕ ಶಿಕ್ಷಣ ನೀಡುತ್ತಿವೆ. ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯ ಹಾಲನಗೌಡ ಅಮರಗೋಳ, ಶಿಕ್ಷಣ ಪ್ರೇಮಿ ಹನುಮಂತಪ್ಪ ಕುಸಲಾಪುರ, ಲಕ್ಷ್ಮಣ. ಬೂದಿಹಾಳ, ಎಸ್.ಡಿ. ಚಿಗರಿ, ವಿ.ಡಿ. ಶಿರಗುಂಪಿ, ಪಿ.ಆರ್. ನಡುವಿನಹಳ್ಳಿ, ಎ.ಬಿ. ರಂಗರೇಜಿ, ಬಿ.ಎಂ. ನದಾಫ್ ಉಪಸ್ಥಿತರಿದ್ದರು. ದೈಹಿಕ ಶಿಕ್ಷಕ ಎಲ್.ಎಚ್. ಯಣ್ಣಿ ಸ್ವಾಗತಿಸಿ, ಬಿ.ಬಿ. ಬೆನಕನವಾರಿ ನಿರೂಪಿಸಿ, ಎನ್.ಎಂ. ಚಿತ್ರಗಾರ ವಂದಿಸಿದರು.
ಜ. 6ಕ್ಕೆ ಜಿಪಂ ಸಾಮಾನ್ಯ ಸಭೆ
ಗದಗ: ಜಿಪಂ ಸಾಮಾನ್ಯ ಸಭೆಯನ್ನು ಜ. 6ರಂದು ಬೆಳಗ್ಗೆ 11 ಗಂಟೆಗೆ ಜಿಪಂ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಜಿಪಂ ಸಭಾಂಗಣದಲ್ಲಿ ಕರೆಯಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೈನುಗಾರಿಕೆ ತರಬೇತಿ
ಗದಗ: ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ, ಧಾರವಾಡದಲ್ಲಿ ನಿಯಮಿತವಾಗಿ ರೈತ ಹಾಗೂ ರೈತ ಮಹಿಳೆಯರಿಗಾಗಿ ಹೈನುಗಾರಿಕೆ ತರಬೇತಿಗಳನ್ನು ಕೈಗೊಳ್ಳುತ್ತಿದೆ. ಜ. 6ರಿಂದ 11ರ ವರೆಗೆ ರೈತ-ರೈತ ಮಹಿಳೆಯರಿಗಾಗಿ 6 ದಿನಗಳ ಹೈನುಗಾರಿಕೆ ತರಬೇತಿಯನ್ನು ಧಾರವಾಡದ ಪಶು ಆಸ್ಪತ್ರೆಯ ಆವರಣದಲ್ಲಿ ಆಯೋಜಿಸಲಾಗಿದೆ. ತರಬೇತಿಯಲ್ಲಿ ರೈತ ಹಾಗೂ ರೈತ ಮಹಿಳೆಯರು ಭಾಗವಹಿಸಿ ಸರ್ಕಾರದ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ. ಭಾಗವಹಿಸಲು ಇಚ್ಛಿಸುವವರು ತಪ್ಪದೇ ಮತದಾರರ ಗುರುತಿನ ಚೀಟಿ ಅಥವಾ ರೇಷನ್ ಕಾರ್ಡ್ ತರಲು ಹಾಗೂ ಪರಿಶಿಷ್ಟ ಜಾತಿ-ಪಂಗಡದವರಾದಲ್ಲಿ ಜಾತಿ ಪ್ರಮಾಣಪತ್ರದೊಂದಿಗೆ ಹಾಜರಾಗಲು ಪ್ರಕಟಣೆ ತಿಳಿಸಿದೆ
ಇಂದು ಸಂಗೀತ ಕಾರ್ಯಕ್ರಮ
ರೋಣ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗದಗ, ಸರ್ಕಾರಿ ಪ್ರೌಢಶಾಲೆ ರೋಣ ಇವರ ಸಹಯೋಗದೊಂದಿಗೆ ಡಿ. 30ರಂದು ಮಧ್ಯಾಹ್ನ 2 ಗಂಟೆಗೆ ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಾಲೆಯ ಪ್ರಧಾನ ಗುರು ಎಸ್.ಎಸ್. ಕಂದಗಲ್ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಪ್ರೌಢಶಾಲೆಯ ಎಲ್ಲ ಶಿಕ್ಷಕ, ಶಿಕ್ಷಕಿಯರು ಪಾಲ್ಗೊಳ್ಳುವರು. ಕಾರ್ಯಕ್ರಮದಲ್ಲಿ ಕಳಕಪ್ಪ ಮುದ್ಲಾಪುರ ಅವರಿಂದ ಸಂಗೀತ ಕಾರ್ಯಕ್ರಮ ಜರುಗಲಿದ್ದು, ಟಿ.ಎಂ. ವಡಗೇರಿ ತಬಲಾ ಸಾಥ್ ಹಾಗೂ ಸಿ.ಡಿ.ಆರಟ್ಟಿ ಹಾರ್ಮೋನಿಯಂ ಸಾಥ್ ನೀಡುವರು.
ಇಂದು, ನಾಳೆ ತರಬೇತಿ
ಗದಗ: ಡಿ. 30ರಿಂದ 31ರ ವರೆಗೆ ನಡೆಯುವ ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ 2005 ನಿಯಮ 2006 ಕ್ಕೆ ಸಂಬಂಧಿಸಿದಂತೆ 2 ದಿನಗಳ ತರಬೇತಿಯನ್ನು ಸಂರಕ್ಷಣಾಧಿಕಾರಿಗಳು, ಸೇವಾ ಸಂಸ್ಥೆಗಳ ಪದಾಧಿಕಾರಿಗಳು, ಸಾಂತ್ವನ, ಸ್ವಾಧಾರ ಕೇಂದ್ರಗಳ ಸಮಾಲೋಚಕರು, ಸಮಾಜ ಕಾರ್ಯಕರ್ತರು, ಆರೋಗ್ಯ ಇಲಾಖಾ ಅಧಿಕಾರಿಗಳು, ಪೊಲೀಸ್ ಇಲಾಖಾ ಅಧಿಕಾರಿಗಳು ಮತ್ತು ಕಾನ್ಸಸ್ಟೇಬಲ್ಗಳು, ಕಾನೂನು ಸೇವಾ ಪ್ರಾಧಿಕಾರದ ಅಧಿಕಾರಿಗಳಿಗೆ ಏರ್ಪಡಿಸಲಾಗಿದೆ. ಡಿ. 30ರ ಬೆಳಗ್ಗೆ 10 ಗಂಟೆಗೆ ಜಿಲ್ಲಾ ಆಡಳಿತ ಭವನ ಕೊಠಡಿ ಸಂಖ್ಯೆ 122ರಲ್ಲಿ ಉದ್ಘಾಟನಾ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಜಿಲ್ಲಾ ಸತ್ರ ನ್ಯಾಯಾಧೀಶ ಟಿ.ಎಚ್.ಆವಿನ್ ಉದ್ಘಾಟಿಸುವರು. ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಎಸ್ಪಿ ಡಾ. ಶರಣಪ್ಪ ಎಸ್.ಡಿ., ಸಿಇಓ ವೀರಣ್ಣ ತುರಮರಿ ಭಾಗವಹಿಸುವರು.
ನಾಳೆ ಅಂಗವಿಕಲರ ದಿನ
ನರೇಗಲ್ಲ: ಅಖಿಲ ಕರ್ನಾಟಕ ವಿಕಲಚೇತನರ, ವಯೋವೃದ್ಧರ, ವಿಧವೆಯರ ಹಿತಚಿಂತನೆ ಸೇವಾ ಸಂಸ್ಥೆ, ತಾಲೂಕು ಸಂಸ್ಥೆ ಆಶ್ರಯದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ, ವಿಪ ಸದಸ್ಯ ಬಸವರಾಜ ಹೊರಟ್ಟಿಗೆ ಅಭಿನಂದನೆ, ಎಪಿಡಿ ಸಂಸ್ಥೆ ಬೆಂಗಳೂರು ಅವರಿಂದ ನಿರುದ್ಯೋಗಿ ವಿಕಲಚೇತನರಿಗೆ ಉದ್ಯೋಗ ತರಬೇತಿ ಸಂದರ್ಶನ, ನರೇಗಲ್ಲ ಪಪಂ ಸರ್ವ ಸದಸ್ಯರಿಗೆ ಸನ್ಮಾನ, ಜಿಎಸ್ಸೆಸ್ಗೆ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಡಿ. 31ರ ಬೆಳಗ್ಗೆ 11ಕ್ಕೆ ಪಟ್ಟಣದ ಗಾಂಧಿಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಸವಡಿಯ ಸಂಗಮೇಶ್ವರ ದೇವಸ್ಥಾನದ ಸಂಗನಬಸಯ್ಯ ಹಿರೇಮಠ, ಸಿದ್ದನಕೊಳ್ಳದ ಧರ್ಮಾಧಿಕಾರಿ ಡಾ. ಶಿವಕುಮಾರ ಶ್ರೀಗಳು ಸಾನ್ನಿಧ್ಯ, ಮಿಥುನ್ ಪಾಟೀಲ ಅಧ್ಯಕ್ಷತೆ ವಹಿಸುವರು. ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ ಉದ್ಘಾಟಿಸುವರು. ವಸಂತ ಹೊರಟ್ಟಿ, ಅಜಿತ ಬಾಗಮಾರ, ರವೀಂದ್ರನಾಥ ದೊಡ್ಡಮೇಟಿ, ಜಿ.ಎಸ್. ಒಡೆಯರ್, ಡಿ.ಎನ್. ಮೂಲಿಮನಿ, ಡಾ. ಎಂ.ಬಿ. ಪೊಲೀಸಪಾಟೀಲ, ಎಂ.ಸಿ. ಶೇಖ, ನಾಗಪ್ಪ ಹಾದಿಮನಿ ಅವರನ್ನು ಸನ್ಮಾನಿಸಲಾಗುವುದು ಎಂದು ಸಂಸ್ಥೆ ರಾಜ್ಯಾಧ್ಯಕ್ಷ ಎಸ್.ಪಿ.ಅಣಗೌಡ್ರ ತಿಳಿಸಿದ್ದಾರೆ.
ನಾಳೆಯಿಂದ ಕ್ರೀಡಾ ವಸತಿ ನಿಲಯಗಳಿಗೆ ಅಭ್ಯರ್ಥಿಗಳ ಆಯ್ಕೆ
ಗದಗ: ಕ್ರೀಡಾ ವಸತಿ ನಿಲಯಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಬಗ್ಗೆ 2014-15ನೇ ಸಾಲಿನಲ್ಲಿ ಕ್ರೀಡಾ ವಸತಿ ಶಾಲೆ, ಕ್ರೀಡಾ ವಸತಿ ನಿಲಯಗಳಿಗೆ ಅರ್ಹ ಪ್ರತಿಭಾವಂತ ಕ್ರೀಡಾಪಟುಗಳನ್ನು-ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಾಗಿದ್ದು, ಕಿರಿಯರ ವಿಭಾಗದಲ್ಲಿ ಆಯ್ಕೆ ಪ್ರಕ್ರಿಯೆಯನ್ನು ಪ್ರತಿ ತಾಲೂಕು ಮಟ್ಟದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಡಿ.30ರ ಬೆಳಗ್ಗೆ 10 ಗಂಟೆಗೆ ರೋಣ, ಡಿ. 31ರಂದು ಶಿರಹಟ್ಟಿ, ಜ. 1ರಂದು ಮುಂಡರಗಿ, 2ರಂದು ರೋಣದಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು. ಕ್ರೀಡಾ ನಿಲಯಗಳಿಗೆ (ಹಿರಿಯರ ವಿಭಾಗ) ಆಯ್ಕೆ ದೈಹಿಕ ಪರೀಕ್ಷೆ ಅಥ್ಲೆಟಿಕ್ಸ್, ಹಾಕಿ, ಬಾಸ್ಕೆಟ್ ಬಾಲ್, ಜುಡೋ, ವಾಲಿಬಾಲ್, ಫುಟ್ಬಾಲ್, (ಯುವಕರಿಗೆ ಮಾತ್ರ), ಕುಸ್ತಿ-ಸೈಕ್ಲಿಂಗ್ ಕ್ರೀಡೆಗಳಲ್ಲಿ ದೈಹಿಕ ಪರೀಕ್ಷೆ ನಡೆಸಲಾಗುವುದು. ಕ್ರೀಡಾ ನಿಲಯಗಳ ಹಿರಿಯ ಅಭ್ಯರ್ಥಿಗಳನ್ನು ನೇರವಾಗಿ ರಾಜ್ಯ ಮಟ್ಟದಲ್ಲಿ ಆಯ್ಕೆ ನಡೆಸಲಾಗುವುದರಿಂದ ನಿಗದಿತ ಅರ್ಜಿಗಳನ್ನು ಜ. 12 ರೊಳಗೆ ಭರ್ತಿ ಮಾಡಿ ನೀಡಬೇಕು. ಸೈಕ್ಲಿಂಗ್, ಕುಸ್ತಿ ಮತ್ತು ಜುಡೋ ಇವುಗಳನ್ನು ವಿಭಾಗ ಮಟ್ಟದ ಆಯ್ಕೆಯಲ್ಲಿ ನೇರವಾಗಿ ನಡೆಸಲಾಗುವುದು. ಹೆಚ್ಚಿನ ವಿವರಗಳನ್ನು ದೂ. 9880037735 ಇವರಿಂದ ಪಡೆಯಲು ಕೋರಿದೆ.
ಅರ್ಜಿ ಆಹ್ವಾನ
ಗದಗ: ನಗರದ ಟ್ಯಾಗೋರ್ ರಸ್ತೆಯಲ್ಲಿರುವ ಜೈ ವಿಜಯ ಶಿಕ್ಷಣ ಸಂಸ್ಥೆಯ ವೃತ್ತಿ ಶಿಕ್ಷಣ ತರಬೇತಿ ಕೇಂದ್ರದಲ್ಲಿ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದಂತಹ ಕೋರ್ಸ್ಗಳಾದ ಕಂಪ್ಯೂಟರ್ ಟ್ಯಾಲಿ, ಬ್ಯಾಂಕಿಂಗ್ ಮತ್ತು ಅಕೌಂಟಿಂಗ್, ಬ್ಯೂಟಿಶಿಯನ್, ಸ್ಪೋಕನ್ ಇಂಗ್ಲಿಷ್, ಟೇಲರಿಂಗ್ ಮತ್ತು ಕಸೂತಿ ಮುಂತಾದ ತರಬೇತಿಗಳನ್ನು ಜನವರಿ 1 ರಿಂದ ಉಚಿತವಾಗಿ ಪ್ರಾರಂಭಿಸಲಾಗುವುದು. ಆಸಕ್ತಿ ಉಳ್ಳ ಅಭ್ಯರ್ಥಿಗಳು ಸಂಸ್ಥೆಯ ಕಚೇರಿ ವಿಳಾಸ ಜೈ ವಿಜಯ ವೃತ್ತಿ ಶಿಕ್ಷಣ ತರಬೇತಿ ಕೇಂದ್ರ ಮೊದಲನೇ ಮಹಡಿ ಅರಳಿ ಬಿಲ್ಡಿಂಗ್ 3ನೇ ಅಡ್ಡರಸ್ತೆ ನಟರಾಜ ಟೇಲರ್ ಎದುರಿಗೆ ಟ್ಯಾಗೋರ ರಸ್ತೆ ಗದಗ (7899927036, 9980116614, 9019657012 ಇಲ್ಲಿಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ದಿನದರ್ಶಿಕೆ ಬಿಡುಗಡೆ
ಗದಗ: ಪ್ರಥಮ ಬಾರಿಗೆ ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಹಾಗೂ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹೊರತರಲಾಗಿರುವ 2014 ದಿನದರ್ಶಿಕೆಯನ್ನು ಈಚೆಗೆ ಸಂಘದ ಕಾರ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಬಿಡುಗಡೆಗೊಳಿಸಿದರು. ನಂತರ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಹಾಗೂ ಗದಗ ಶಹರದಲ್ಲಿ ಮುಖ್ಯೋಪಾಧ್ಯಾಯರಾಗಿ ನಿವೃತ್ತಿ ಹೊಂದಿದ ಭಾಗೀರಥಿಬಾಯಿ ಸೂಗೂರ ಇವರ ನಿಧನಕ್ಕೆ ಸಂತಾಪ ಸೂಚಿಸಿ, ಶ್ರದ್ಧಾಂಜಲಿ ಅರ್ಪಿಸಲಾಯಿತು. ಜಿಲ್ಲಾಧ್ಯಕ್ಷ ಎಸ್.ಸಿ. ಗಾಣಿಗೇರ ಮಾತನಾಡಿ, ಸಂಘದ ಬೇಡಿಕೆಗಳನ್ವಯ ಸಂಧ್ಯಾ ಸುರಕ್ಷಾ ಯೋಜನೆ, ರಾಷ್ಟ್ರೀಯ ವೃದ್ಧಾಪ್ಯ ವೇತನ, ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಡಿ ನೀಡುತ್ತಿರುವ ಮಾಸಾಶನ ಹೆಚ್ಚಿಸಿದ ಬಗ್ಗೆ ಕ್ರಮ ತೆಗೆದುಕೊಂಡ ಬಗ್ಗೆ ಹರ್ಷ ವ್ಯಕ್ತಪಡಿಸಿ, ಸರ್ಕಾರವನ್ನು ಅಭಿನಂದಿಸಿದರು. ಜಿಲ್ಲಾ ಖಜಾನೆ ಇಲಾಖೆಯಿಂದ ನಿವೃತ್ತರಾದ ಬಿ.ಎನ್. ಯರನಾಳರವರನ್ನು ಜಿಲ್ಲಾ ಉಪಾಧ್ಯಕ್ಷರೆಂದು ಘೋಷಣೆ ಮಾಡಿ ಅವರನ್ನು ಅಭಿನಂದಿಸಲಾಯಿತು. ಗೌರವಾಧ್ಯಕ್ಷ ಬಿ.ಎಸ್. ನಾಯ್ಕರ, ಎಸ್.ಎಸ್. ಮಾಡಲಗಿ, ಎಸ್.ಐ. ಹೊನ್ನಗುಡಿ, ಬಿ.ಬಿ. ಹೂಗಾರ, ರಾಜಶೇಖರ ಕರಡಿ, ಬಿ.ಬಿ. ಭಾವಿಕಟ್ಟಿ, ರಾಜಶೇಖರ ಹಿರೇಮಠ, ಜಿ.ಪಿ. ಕಟ್ಟಿಮನಿ, ಐ.ಬಿ. ಮರಿಬಸಣ್ಣವರ, ಆರ್.ವಿ. ಸಿದ್ಲಿಂಗ, ಎಂ.ಎಂ. ಮಾರನಬಸರಿ, ವೈ.ಆರ್. ಪಾಟೀಲ, ಎಚ್.ಐ. ಪುಡಕಲಕಟ್ಟಿ, ಬಿ.ಎ. ವಸ್ತ್ರದ, ಪಿ.ಟಿ. ನಾರಾಯಣಪುರ ಇದ್ದರು.
ಅನ್ನದಾನೇಶ್ವರ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ
ನರೇಗಲ್ಲ: ವಿದ್ಯಾರ್ಥಿಗಳು ರಸ್ತೆ ನಿಯಮಗಳನ್ನು ಪಾಲಿಸಿ ಸುರಕ್ಷತೆಯಿಂದ ಚಲಿಸಿರಿ. ಸರ್ಕಾರ ನೀಡಿದ ಉಚಿತ ಸೈಕಲ್ಗಳನ್ನು ಪಡೆದು ವಿದ್ಯಾರ್ಥಿಗಳು ತಪ್ಪದೇ ಶಾಲೆಗೆ ಬರಬೇಕು ಎಂದು ಅನ್ನದಾನ ವಿಜಯ ಪ್ರೌಢಶಾಲೆಯ ಆಡಳಿತ ಮಂಡಳಿಯ ಚೇರ್ಮನ್ ಶರಣಪ್ಪ ರೇವಡಿ ಹೇಳಿದರು. ಇವರು ಈಚೆಗೆ ಅನ್ನದಾನೇಶ್ವರ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಿ ಮಾತಮಾಡಿದರು.
ಅತಿಥಿಗಳಾಗಿ ಆಗಮಿಸಿ ಜಕ್ಕಲಿ ಗ್ರಾಮದ ಶಿವನಾಗಪ್ಪ ದೊಡ್ಡಮೇಟಿ ಅವರು ಮಾತನಾಡಿ, ಸರ್ಕಾರ ಉಚಿತವಾಗಿ ನೀಡುವ ಸೈಕಲ್ ನಿಮಗೆ ಉಚಿತವಾಗಿರಬಹುದು. ಆದರೆ, ಜನಸಾಮಾನ್ಯರಿಗೆ ಬೇರೆ-ಬೇರೆ ರೀತಿಯಲ್ಲಿ ತೆರಿಗೆ ಹಾಕಿ ನಿಮಗೆ ಸೈಕಲ್ ನೀಡಿದ್ದಾರೆ. ಆದ್ದರಿಂದ ಇದನ್ನು ಉಚಿತ ಎಂದು ಭಾವಿಸಬೇಡಿ ಎಂದರು.
ಪಿ.ಕೆ.ಪಲ್ಲೇದ, ಗಜೇಂದ್ರಗಡ ಪುರಸಭೆಯ ಸದಸ್ಯ ಶೇಖಣ್ಣ ಇಟಗಿ, ರವಿ ಕಲಾಲ, ಮಂಜುನಾಥ ಬಡಿಗೇರ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯ ಎಸ್.ಎಚ್. ಅಬ್ಬಿಗೇರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಲ್.ಎನ್. ನಾಯಕ ಅತಿಥಿಗಳ ಪರಿಚಯಿಸಿದರು. ಎಸ್.ಕೆ. ಗಾಣಿಗೇರ ಪ್ರತಿಜ್ಞಾವಿಧಿ ಬೋಧಿಸಿದರು. ಐ. ಜ್ಞಾನೇಶ್ವರಿ ಕಾರ್ಯಕ್ರಮ ನಿರೂಪಿಸಿದರು. ಎಚ್.ಎಂ.ರತ್ನಮ್ಮ ವಂದಿಸಿದರು.